70ರ ಇಳಿ ವಯಸ್ಸಲ್ಲಿ ಸ್ವಚ್ಛತೆಗಾಗಿ ಸೈಕಲ್'ನಲ್ಲಿ ರಾಜ್ಯ ಸುತ್ತಾಟ

By Suvarna Web DeskFirst Published Nov 18, 2017, 1:45 PM IST
Highlights

ಉಮಾಪತಿ ವರ್ಷದಲ್ಲಿ 9 ತಿಂಗಳು ಎಲೆಕ್ಟ್ರೀಷಿಯನ್ ಕೆಲಸ ಮಾಡಿ, 3 ತಿಂಗಳು ಸ್ವಚ್ಛ ಭಾರತಕ್ಕಾಗಿ ಸೈಕಲ್ ಏರಿ ಎಲ್ಲ ಊರುಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂ ಉಮಾಪತಿ ಉತ್ಸಾಹ, ಕಾಳಜಿ ಕಂಡು ಯುವಜನರೆಲ್ಲ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

ಮೂಡಿಗೆರೆ (ನ.18):  ಸ್ವಚ್ಛತೆಗಾಗಿ ಅನೇಕರು ವಿವಿಧ ರೀತಿಯಲ್ಲಿ ಕಾರ್ಯಪೃವೃತ್ತರಾಗಿರುವುದನ್ನು ಕಾಣುತ್ತೇವೆ. ಕೆಲವರು ಶ್ರಮದಾನ ಮಾಡಿದರೆ, ಇನ್ನು ಕೆಲವರು ಸ್ವಚ್ಛತೆಯ ಪ್ರಚಾರಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಆದರೆ, 70ರ ಹರೆಯದ ಉಮಾಪತಿ ಮೊದಲಿಯಾರ್ ಎಂಬುವರ ಶೈಲಿ ಹೆಚ್ಚು ಭಿನ್ನವಾಗಿದೆ.  ಉಮಾಪತಿ ವರ್ಷದಲ್ಲಿ 9 ತಿಂಗಳು ಎಲೆಕ್ಟ್ರೀಷಿಯನ್ ಕೆಲಸ ಮಾಡಿ, 3 ತಿಂಗಳು ಸ್ವಚ್ಛ ಭಾರತಕ್ಕಾಗಿ ಸೈಕಲ್ ಏರಿ ಎಲ್ಲ ಊರುಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂ ಉಮಾಪತಿ ಉತ್ಸಾಹ, ಕಾಳಜಿ ಕಂಡು ಯುವಜನರೆಲ್ಲ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

‘ಧರ್ಮಸ್ಥಳ, ಮಂಗಳೂರು. ಕುಕ್ಕೆ ಸುಬ್ರಮಣ್ಯ ಮುಂತಾದ ಪವಿತ್ರ ದೇವಸ್ಥಾನಗಳಿಗೆ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸುತ್ತೇನೆ. ದೇವರ ದರ್ಶನ ಪಡೆಯುತ್ತೇನೆ. ಸ್ವಯಂ ಪ್ರೇರಿತವಾಗಿ ಯಾರ ಒತ್ತಡವೂ ಇಲ್ಲದೇ 30,860 ಕಿ.ಮೀ ದೂರ ರಾಜ್ಯದ ಪ್ರತಿಯೊಂದು ಊರಿಗೂ ಸೈಕಲ್'ನಲ್ಲಿಯೇ ಸುತ್ತುತ್ತೇನೆ. ಹೋದ ಕಡೆಗೆ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳನ್ನು ಮಾತನಾಡಿಸಿ, ವಿವಿಧ ಊರುಗಳಿಗೆ ಭೇಟಿ ನೀಡಿದ ಕುರುಹಾಗಿ ಪುಸ್ತಕದಲ್ಲಿ ಸಂಬಂಧಪಟ್ಟವರಿಂದ ಸಹಿ ಮತ್ತು ಮೊಹರು ಮಾಡಿಸುತ್ತೇನೆ ಎಂದು ಹೇಳುತ್ತಾರೆ.

ಉಮಾಪತಿ ಮೊದಲಿಯಾರ್ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಮರಗಿರಿ ಮೂಲೆಕಲ್ಲು ತಿರುಪತಿ ಗ್ರಾಮದವರು. 2001 ರಲ್ಲಿ ಇವರು ದೇಶ ಸ್ವಚ್ಛತೆಗಾಗಿ ಸೈಕಲ್ ಜಾಥಾ ಆರಂಭಿಸಿದ್ದಾರೆ. ವರ್ಷದಲ್ಲಿ ಮೂರು ತಿಂಗಳು ಸೈಕಲ್ ತುಳಿದು ಸ್ವಚ್ಛತೆಗಾಗಿ ಹಲವು ಪ್ರಮುಖ ಅಂಶಗಳನ್ನು ಮುದ್ರಿಸಿಕೊಂಡು, ಹೋದ ಕಡೆಯೆಲ್ಲಾ ಪ್ರಚಾರ ಮಾಡುತ್ತಾರೆ. ಅವರ ಕರಪತ್ರದಲ್ಲಿ ಇರುವ ಅಂಶಗಳ ಬಗ್ಗೆ ನೋಡಿದಾಗ 20 ಅಂಶಗಳು ಸ್ವಚ್ಛತೆಗಾಗಿ ಏನು ಮಾಡಬೇಕು, ನಾವು ಹೇಗೆ ಸ್ವಚ್ಛವಾಗಿರಬೇಕೆಂಬ ಪ್ರಮುಖ ಅಂಶಗಳನ್ನು ಜನರಿಗೆ ಮನವರಿಕೆ ಮಾಡುತ್ತವೆ.

click me!