
ಬೆಂಗಳೂರು: ನೀವು ಸಂಚಾರ ನಿಯಮ ಉಲ್ಲಂಘಿಸುತ್ತೀರಾ?. ಆದರೆ, ನಿಮಗೆ ಪೊಲೀಸರು ದಂಡ ವಿಧಿಸದೆ ಸಂಚಾರ ಶಿಸ್ತಿನ ಬಗ್ಗೆ ವಿಡಿಯೋ ತೋರಿಸಿದರೆ ಹೇಗೆ...! ರಾಜಧಾನಿ ನಾಗರಿಕರೇ ಅಚ್ಚರಿಯಾಯಿತೇ. ಹೌದು ಸಂಚಾರ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲು ಯತ್ನಿಸುತ್ತಿರುವ ಸಂಚಾರ ವಿಭಾಗದ ಪೊಲೀಸರು, ಈಗ ಇಂತಹ ದೊಂದು ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದಾರೆ.
ಈಗಾಗಲೇ ಈ ಕಾರ್ಯಕ್ರಮವು ಶುಕ್ರವಾರದಿಂದ ಕೋರಮಂಗಲ ಫೋರಂ ಮಾಲ್ ಆವರಣದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ಹಂತಗಳಲ್ಲಿ ನಗರ ವ್ಯಾಪ್ತಿ ವಿಸ್ತರಣೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್.ಹಿತೇಂದ್ರ ಅವರು, ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳ ಲಭ್ಯತೆ ಆಧಾರದ ಮೇರೆಗೆ ವಿಡಿಯೋ ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಮಗೆ ದಂಡ ಸಂಗ್ರಹಕ್ಕಿಂತ ಜನರಿಗೆ ಸಂಚಾರ ನೀತಿ ರಿವಾಜುಗಳ ಕುರಿತು ಜಾಗೃತಿ ಮೂಡಿಸುವುದು ಆಶಯವಾಗಿದೆ ಎಂದರು.
ಪ್ರಮುಖ ಜಂಕ್ಷನ್ ಅಥವಾ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸುವ ಪೊಲೀಸರು, ಆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರನ್ನು ವಶಕ್ಕೆ ಪಡೆಯುತ್ತಾರೆ. ಬಳಿಕ ಸಮೀಪದ ಸಾರ್ವಜನಿಕ ಅಥವಾ ಖಾಸಗಿ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಟೆಂಟ್ ಹಾಕಿ ಸಂಚಾರ ನಿಯಮಗಳ ಮಹತ್ವ ಸಾರುವ ದೃಶ್ಯಾವಳಿ ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಲ್ಲಿಗೆ ಸಂಚಾರ ನಿಯಮ ಉಲ್ಲಂಘಿಸಿದವರನ್ನು ಕರೆ ತಂದು ವಿಡಿಯೋ ತೋರಿಸಲಾಗುತ್ತದೆ. ಇಲ್ಲಿ ಚಾಲನೆ ವೇಳೆ ಮೊಬೈಲ್ ಬಳಕೆ, ಪಾನಮತ್ತರಾಗಿ ಚಾಲನೆ, ಸಿಗ್ನಲ್ ಜಂಪ್ ಹೀಗೆ ಸಂಚಾರ ನಿಯಮ ಉಲ್ಲಂಘನೆಯಿಂದ ಸಂಭವಿಸಿದ ಅಪಘಾತಗಳ ದೃಶ್ಯಗಳನ್ನು ಪ್ರಸುತ್ತಪಡಿಸಿ ಕಾನೂನು ಪಾಲನೆ ಬಗ್ಗೆ ‘ಪಾಠ’ ಹೇಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.