
ಬೆಂಗಳೂರು : ಸೂರ್ಯಕಿರಣ ವೈಮಾನಿಕ ತಂಡದ ದುರಂತದ ನಡುವೆಯೇ ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಫೆ.20 ಬುಧವಾರದಿಂದ ಲೋಹದ ಹಕ್ಕಿಗಳ ಕಲರವ ಶುರುವಾಗಲಿದೆ. ಆಗಸದಲ್ಲಿ ವರ್ಣರಂಜಿತ ಚಿತ್ತಾರ ಮೆರೆಯುವ ಹಾಗೂ ಸೈನಿಕರ ಸಾಹಸ ಹಾಗೂ ದೇಶದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿನೆದುರು ಅನಾವರಣಗೊಳಿಸುವ ಮೂಲಕ ವೈರಿ ಪಡೆಗೆ ಎಚ್ಚರಿಕೆಯ ಸಂದೇಶ ನೀಡಲು 12ನೇ ಆವೃತ್ತಿ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ಸರ್ವ ರೀತಿಯಲ್ಲೂ ಸಜ್ಜಾಗಿದೆ.
"
ದೇಶದ ರಕ್ಷಣಾ ಸಾಮರ್ಥ್ಯ ವೃದ್ಧಿಗೆ ಕೋಟ್ಯಂತರ ಅವಕಾಶಗಳನ್ನು ತೆರೆದಿರುಡುವ ಉದ್ದೇಶದಿಂದ ‘ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’ ಅಡಿ ಬರಹದೊಂದಿಗೆ ಫೆ.20 ರಂದು ಬೆಳಗ್ಗೆ 9ಕ್ಕೆ ‘ಏರೋ ಇಂಡಿಯಾ-2019’ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ.
ಯುದ್ಧ ವಿಮಾನ, ವೈಮಾನಿಕ ಪ್ರದರ್ಶನ ತಂಡ ಆಗಸದಲ್ಲಿ ಮೂಡಿಸುವ ಕೌತುಕ, ವಿಸ್ಮಯಗಳ ಕಣ್ತುಂಬಿಕೊಳ್ಳಲು ದೇಶ, ವಿದೇಶಗಳ ಜನರು ಕಾತುರದಿಂದ ಕಾಯುತ್ತಿದ್ದಾರೆ. ಸಾರ್ವಜನಿಕರ ಕಾತುರ ತಣಿಸಿ ನಭಕ್ಕೆ ಚಿಮ್ಮಿ ಚಿತ್ತಾರ ಮೂಡಿಸಲು ದೇಶ-ವಿದೇಶದ 61 ವಿಮಾನಗಳು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿವೆ.
ಫೆ.20ರಿಂದ 24ರ ವರೆಗೆ ನಡೆಯುವ ಐದು ದಿನಗಳ ಏರೋ ಇಂಡಿಯಾದಲ್ಲಿ ಪ್ರತಿ ದಿನವೂ ಒಂದು ವಲಯವನ್ನು ಆದ್ಯತೆಯಾಗಿ ಪರಿಗಣಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲ ದಿನ ಉದ್ಘಾಟನೆ ಜತೆಗೆ ವ್ಯವಹಾರದ ದಿನ, ಎರಡನೇ ದಿನವನ್ನು ‘ನವೋದ್ಯಮ’ಗಳಿಗೆ ಉತ್ತೇಜನ ನೀಡಲು ‘ಸ್ಟಾರ್ಟ್ ಅಪ್ ಡೇ’, 3ನೇ ದಿನ ಮಾಹಿತಿ ಮತ್ತು ತಂತ್ರಜ್ಞಾನ, 4ನೇ ದಿನ ವೈಮಾನಿಕ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಸ್ಮರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಫೆ.20ಕ್ಕೆ ಏನೇನಿರುತ್ತೆ?
ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಬೆಳಗ್ಗೆ 9 ಗಂಟೆಗೆ ಚಾಲನೆ ನೀಡಲಿದ್ದಾರೆ. ನಂತರ 11.15ಕ್ಕೆ ‘ಜಿ’ ಹಾಲ್‌ನಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಲಿದ್ದಾರೆ. 11.30ಕ್ಕೆ ವಿವಿಧ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ದುಂಡುಮೇಜಿನ ಸಭೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಏರೋ ಇಂಡಿಯಾ 2019 ವಿವಿಧ ದೇಶ ವಿದೇಶಗಳ ವ್ಯಾಪಾರ-ವಹಿವಾಟಿಗೆ ಮುಕ್ತಗೊಳ್ಳಲಿದೆ. ಮಧ್ಯಾಹ್ನ 2ಕ್ಕೆ ಮತ್ತೆ ವೈಮಾನಿಕ ಪ್ರದರ್ಶನ ತೆರೆದುಕೊಳ್ಳಲಿದ್ದು, ಗಗನ ಚುಂಬಿಸುವಂತೆ ಹಾರುವ ವಿಮಾನಗಳು ಪ್ರೇಕ್ಷರಿಗೆ ರಸದೌತಣ ಉಣ ಬಡಿಸಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ