
ನವದೆಹಲಿ(ಜು.14): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ರಾಷ್ಟ್ರಪತಿ ಆಯ್ಕೆಯ ಬಳಿಕ ತಮ್ಮ ಸಚಿವ ಸಂಪುಟ ಪುನರಾಚನೆಗೆ ಮುಂದಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ‘ಲಿಂಗಾಯತ’ ಮತ್ತು ‘ಉತ್ತರ ಕರ್ನಾಟಕ ಕೋಟಾ’ದಡಿ ಸಚಿವ ಸಂಪುಟ ಸೇರ್ಪಡೆಗೆ ಪೈಪೋಟಿ ಆರಂಭಗೊಂಡಿದೆ. ರಾಜ್ಯದ ಒಟ್ಟು ಏಳು ಸಂಸದರು ಈ ಬಾರಿ ಸಚಿವರಾಗಬೇಕು ಎಂದು ಪೈಪೋಟಿಗೆ ಇಳಿದಿರುವುದು ವಿಶೇಷ.
2016ರ ಜುಲೈನಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಸಂದರ್ಭ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅಲ್ಲಿನ ಜಾತಿ ಲೆಕ್ಕಾಚಾರಕ್ಕೆ ಅನುಗುಣವಾಗಿ ಸಂಪುಟದಲ್ಲಿ ಆ ರಾಜ್ಯಕ್ಕೆ ಸೂಕ್ತ ಅವಕಾಶ ನೀಡಲಾಗಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆಭೂತಪೂರ್ವ ಗೆಲುವಿಗೆ ಜಾತಿ ಲೆಕ್ಕಾಚಾರ ಕೂಡ ಒಂದು ಕಾರಣವಾಗಿತ್ತು. ಇದೀಗ ಕರ್ನಾಟಕ, ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗಳನ್ನು ಮುಂದಿಟ್ಟುಕೊಂಡು ಇನ್ನೊಮ್ಮೆ ಮೋದಿ ಸಂಪುಟ ಪುನಾರಾಚನೆ ಆಗುವುದು ಖಚಿತ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಜಾತಿ ಲೆಕ್ಕಾಚಾರಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಸ್ಥಾನ ಸಿಗುವ ನಿರೀಕ್ಷೆ ರಾಜ್ಯದ ಸಂಸದರಲ್ಲಿದ್ದು, ಅದನ್ನು ಪಡೆಯುವ ಪ್ರಯತ್ನದಲ್ಲಿ ರಾಜ್ಯದ ಸಂಸದರಿದ್ದಾರೆ. ಇದಕ್ಕಾಗಿ ತಮ್ಮ ‘ಗಾಡ್ ಫಾದರ್’ಗಳ ಮೂಲಕ ಲಾಬಿ ಆರಂಭಿಸಿದ್ದಾರೆ. ಈಗ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದಿಂದ ಇಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವರಿದ್ದು, ಒಬ್ಬರು ರಾಜ್ಯ ಖಾತೆ ಸಚಿವರಿದ್ದಾರೆ. ಡಿ.ವಿ. ಸದಾನಂದ ಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅನಂತಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ರಮೇಶ್ ಜಿಗಜಿಣಗಿ ದಲಿತ ಎಡಗೈ ಪಂಗಡಕ್ಕೆ ಸೇರಿದವರು. ಜಿಗಜಿಣಗಿ ಅವರು ಕಳೆದ ಜುಲೈನಲ್ಲಿ ಮೋದಿ ಸಂಪುಟ ಸೇರಿದ್ದರು. ರಾಜ್ಯದಲ್ಲಿ ಬಿಜೆಪಿಯೊಂದಿಗೆ ಪ್ರಬಲವಾಗಿ ಗುರುತಿಸಿಕೊಂಡಿರುವ ದಲಿತ ಎಡಗೈ ಪಂಗಡಕ್ಕೆ ಸೇರಿರುವ ರಮೇಶ್ ಜಿಗಜಿಣಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಸತತವಾಗಿ ಕೇಂದ್ರದ ನಾಯಕರ ಮೇಲೆ ಒತ್ತಡ ಹೇರುತ್ತಾ ಬಂದ ಹಿನ್ನೆಲೆಯಲ್ಲಿ ಸಚಿವರಾಗುವ ಜಿಗಜಿಣಗಿ ಕನಸು ಈಡೇರಿತ್ತು. ಜಿಗಜಿಣಗಿ ಸಂಪುಟ ಸೇರ್ಪಡೆಯಿಂದ ದಲಿತ ವರ್ಗಕ್ಕೆ ಉತ್ತಮ ಸಂದೇಶವೊಂದನ್ನು ರವಾನಿಸುವಲ್ಲಿ ಬಿಜೆಪಿ ಸಫಲವಾಗಿದೆ ಎಂಬ ಅಭಿಪ್ರಾಯ ರಾಜ್ಯ ಬಿಜೆಪಿ ವರಿಷ್ಠರಲ್ಲಿದೆ.
ಜಾತಿ ಮತ್ತು ಪ್ರಾದೇಶಿಕ ಸಮತೋಲನ ಎರಡನ್ನೂ ಮುಂಬರುವ ಸಂಪುಟ ಪುನಾರಚನೆಯಲ್ಲಿ ಕಾಪಾಡಿಕೊಂಡು ವಿಧಾನಸಭಾ ಚುನಾವಣೆಯನ್ನು ಎದುರಿಸುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದೇ ಆದರೆ ರಾಜ್ಯ ಬಿಜೆಪಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಬಿಜೆಪಿಯ ವರಿಷ್ಠ ನಾಯಕರೊಬ್ಬರು ಅಭಿಪ್ರಾಯ ಪಡುತ್ತಾರೆ. ಇದೀಗ ಇನ್ನೊಮ್ಮೆ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ಮತ ಬ್ಯಾಂಕ್ ಆಗಿರುವ ಲಿಂಗಾಯತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನಗಳು ರಾಜ್ಯ ಬಿಜೆಪಿಯಿಂದ ನಡೆದಿವೆ. ಇನ್ನೂ ಕೆಲವು ಸಂಸದರು ಸಚಿವರಾಗಲು ತಮ್ಮ ವಿವಿಧ ಮೂಲಗಳನ್ನು ಬಳಸಿ ಪ್ರಯತ್ನ ನಡೆಸುತ್ತಿದ್ದಾರೆ.
ರೇಸ್‌ನಲ್ಲಿ ಯಾರು?:
ಸದ್ಯದ ಮಾಹಿತಿಯ ಪ್ರಕಾರ, ಬೆಳಗಾವಿಯಿಂದ ಮೂರು ಬಾರಿ ಸಂಸದರಾಗಿರುವ ವಸತಿ ಸಮಿತಿಯ ಮುಖ್ಯಸ್ಥ ಸುರೇಶ್ ಅಂಗಡಿ ಸಚಿವರಾಗಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ 18 ವಿಧಾನ ಸಭಾ ಸ್ಥಾನಗಳಿವೆ. ಬಿಜೆಪಿ ಪ್ರಬಲವಾಗಿರುವ ಮುಂಬೈ ಕರ್ನಾಟಕದ ಲಿಂಗಾಯತ ನಾಯಕರಿಗೆ ಸಚಿವ ಸ್ಥಾನ ನೀಡಿದ್ದೇ ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂಬ ದಾಳವನ್ನು
ಅಂಗಡಿಯವರು ಉರುಳಿಸಿದ್ದಾರೆ. ಬೆಳಗಾವಿಯ ವರಾದ ಶಿಕ್ಷಣ ತಜ್ಞ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಕೂಡ ಮಂತ್ರಿಯಾಗುವ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಚಾಲ್ತಿಯಲ್ಲಿಟ್ಟಿದ್ದಾರೆ. ಹಾವೇರಿಯಿಂದ ಎರಡನೇ ಬಾರಿಗೆ ಸಂಸದರಾಗಿರುವ ಶಿವಕುಮಾರ್ ಉದಾಸಿ ಸಚಿವರಾದರೂ ಅಚ್ಚರಿಯಿಲ್ಲ ಎಂದು ಕೇಂದ್ರದ ಬಿಜೆಪಿ ನಾಯಕರು ಹೇಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಒಲವು ಉದಾಸಿ ಕಡೆಗಿದೆ ಎನ್ನಲಾಗಿದೆ.
ಬಾಗಲಕೋಟೆಯ ಸಂಸದ ಗದ್ದಿಗೌಡರ್ ಮತ್ತು ಕೊಪ್ಪಳದ ಸಂಸದ ಕರಡಿ ಸಂಗಣ್ಣ ಕೂಡ ಸಚಿವರಾಗುವ ಪ್ರಯತ್ನ ನಡೆಸುತ್ತಿದ್ದಾರೆ. ಬೀದರ್'ನಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿರುವ ಭಗವಂತ್ ಖೂಬಾ ಅವರು ಉತ್ತರ ಭಾರತದ ಪ್ರಭಾವಿ ಸ್ವಾಮೀಜಿಯೊಬ್ಬರ ನೆರವಿನಿಂದ ಸಚಿವರಾಗುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಉತ್ತರ ಕರ್ನಾಟಕದಲ್ಲೇ ಮುಂಬೈ ಕರ್ನಾಟಕ ಮತ್ತು ಹಿಂದುಳಿದ ಭಾಗವಾಗಿರುವ ಹೈದರಾಬಾದ್ ಕರ್ನಾಟಕ ಎಂದು ವಿಭಾಗಿಸಿ ಈ ಪ್ರಾಂತ್ಯಗಳಿಗೆ ತಲಾ ಒಂದು ಸಚಿವ ಸ್ಥಾನ ಹಂಚುವಂತೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಬೇಕು ಎಂಬ ವಾದವು ಬಿಜೆಪಿ ರಾಜ್ಯ ನಾಯಕರಲ್ಲಿದೆ.
ಈ ಮಧ್ಯೆ ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಬೇಕು. ಪರಿಶಿಷ್ಟ ಪಂಗಡಕ್ಕೆ ಸೇರಿರುವ ರಾಮುಲು ಅವರನ್ನು ಸಚಿವರನ್ನಾಗಿ ಮಾಡಿದರೆ ಬಳ್ಳಾರಿ, ಗದಗ, ಚಿತ್ರದುರ್ಗ, ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿರುವ ನಾಯಕ ಸಮುದಾಯವು ಬಿಜೆಪಿ ಜೊತೆ ಬರಲು ಸಹಾಯಕವಾಗಲಿದೆ ಎಂಬ ಅಭಿಪ್ರಾಯವನ್ನು ಬಿಜೆಪಿ ನಾಯಕರು ಮುಂದಿಡುತ್ತಿದ್ದಾರೆ. ರಾಮುಲು ಕೂಡ ದೆಹಲಿ ಮಟ್ಟದಲ್ಲಿ ತಮ್ಮ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿಯು ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬರನ್ನು ಉಪ ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನಾಗಿಸಲಿದೆ ಎಂಬ ವದಂತಿಗಳೂ ಹಬ್ಬಿವೆ. ಒಂದು ವೇಳೆ ಇದು ನಿಜವಾದರೆ ಉತ್ತರ ಕರ್ನಾಟಕದ ಬಿಜೆಪಿ ಸಂಸದರ ಲೆಕ್ಕಾಚಾರದಲ್ಲಿ ಬದಲಾವಣೆ ಆಗಲೂ ಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.