ರಿವರ್ಸ್‌ ಆಪರೇಷನ್‌ ಹೆಸರಿನಲ್ಲಿ 6 ಬಿಜೆಪಿ ಶಾಸಕರ ಹೆಸರು

By Web DeskFirst Published Jul 14, 2019, 9:15 AM IST
Highlights

ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ, ರಾಜೀನಾಮೆ ಪ್ರಹಸನ ಮುಂದುವರಿದಿದೆ. ಇತ್ತ ಬಿಜೆಪಿಯ ಕೆಲವು ಶಾಸಕರ ಹೆಸರೂ ಕೂಡ ರಿವರ್ಸ್ ಆಪರೇಷನ್ ನಲ್ಲಿ ಕೇಳಿ ಬಂದಿದೆ. 

ಬೆಂಗಳೂರು [ಜು.14] :  ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳಲು ಬಿಜೆಪಿಯ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವ ಮಿತ್ರಪಕ್ಷಗಳತ್ತ ಕೆಲವರು ಮುಖಮಾಡುವ ಸಾಧ್ಯತೆ ಕುರಿತು ವದಂತಿ ಹಬ್ಬುತ್ತಿದ್ದಂತೆ ಶಾಸಕರು ಸ್ಪಷ್ಟನೆ ನೀಡಿದ್ದು, ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

ಶಾಸಕರಾದ ಗೂಳಿಹಟ್ಟಿಶೇಖರ್‌, ರಾಜುಗೌಡ, ನಿರಂಜನ್‌ ಕುಮಾರ್‌, ಬಸವರಾಜ್‌ ದಡೇಸೂಗೂರು, ಪೂರ್ಣಿಮಾ, ಜಯರಾಮ್‌ ಅವರು ಆಡಳಿತ ಪಕ್ಷದ ಕಡೆ ಹೋಗುವ ಸಾಧ್ಯತೆ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತು. ಈ ವದಂತಿಗಳಿಗೆ ರಮಡ ರೆಸಾರ್ಟ್‌ನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ ಅವರು, ನಾವು ರಿವರ್ಸ್‌ ಆಪರೇಷನ್‌ಗೊಳಗಾಗುವುದಿಲ್ಲ. ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಅಗತ್ಯ ಇಲ್ಲ. ದಯಮಾಡಿ ರಿವರ್ಸ್‌ ಆಪರೇಷನ್‌ನಲ್ಲಿ ನಮ್ಮ ಹೆಸರು ತರಬೇಡಿ ಎಂದು ಮನವಿ ಮಾಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ್‌ ಮಾತನಾಡಿ, ನಮ್ಮನ್ನು ಯಾರೂ ಸಹ ಸಂಪರ್ಕ ಮಾಡಿಲ್ಲ. ನಾವು ಸಹ ಬಿಜೆಪಿಯನ್ನು ಬಿಡುವುದಿಲ್ಲ. ಮಿತ್ರಪಕ್ಷಗಳ ರಿಸವ್‌ರ್‍ ಆಪರೇಷನ್‌ಗೆ ಒಳಗಾಗುತ್ತೇವೆ ಎಂಬುದು ಸತ್ಯಕ್ಕೆ ದೂರುವಾದುದು. ನಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.

ಸುರಪುರ ಶಾಸಕ ರಾಜುಗೌಡ ಮಾತನಾಡಿ, ಮಾಧ್ಯಮದವರು ಪ್ರಸಾರ ಮಾಡುತ್ತಿರುವ ತಪ್ಪು ವರದಿಗಳಿಂದ ಕ್ಷೇತ್ರದ ಕಾರ್ಯಕರ್ತರಿಗೆ ಗೊಂದಲವಾಗುತ್ತಿದೆ. ಬೇರೆ ಪಕ್ಷಕ್ಕೆ ಹೋಗುವುದಾದರೆ ಕದ್ದು ಮುಚ್ಚಿ ಹೋಗುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲಾ ಒಂದಾಗಿದ್ದೇವೆ. ಪಕ್ಷದ ನಾಯಕರ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಹೀಗಿರುವಾಗ ಪಕ್ಷ ತೊರೆಯುವ ಅಗತ್ಯವಾದರೂ ಏನು ಎಂದು ಮಾಧ್ಯಮಗಳ ವರದಿಗೆ ಬೇಸರ ವ್ಯಕ್ತಪಡಿಸಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಮಾತನಾಡಿ, ದಯಮಾಡಿ ಊಹಾತ್ಮಕ ವರದಿಗಳನ್ನು ಮಾಧ್ಯಮಗಳು ತೋರಿಸಬಾರದು. ಇದರಿಂದ ಕ್ಷೇತ್ರದ ಜನತೆಯಲ್ಲಿ ಗೊಂದಲ ಮೂಡಲಿದೆ. ಪಕ್ಷದ ನಿಯಮದಂತೆ ನಾವೆಲ್ಲಾ ಒಟ್ಟಿಗೆ ಇದ್ದೇವೆ. ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಏನಾದರೂ ಸಂಶಯಗಳಿದ್ದರೆ ನಮ್ಮನೇ ನೇರವಾಗಿ ಕೇಳಿ ಸುದ್ದಿಯನ್ನು ಪ್ರಸಾರ ಮಾಡಬೇಕು ಎಂದು ಹೇಳಿದರು.

click me!