ರಾಜ್ಯ ಬಿಜೆಪಿಗೆ ಹೊಸ ಉಸ್ತುವಾರಿ? ಬೆಂಗಳೂರಿಗೆ ಬಂದ ನಾಯಕನ ಕುತೂಹಲದ ನಡೆ

By Web DeskFirst Published Jul 14, 2019, 9:03 AM IST
Highlights

ಕರ್ನಾಟಕ ಬಿಜೆಪಿ ಉಸ್ತುವಾರಿ ಬದಲಾವಣೆ ಸಾಧ್ಯತೆ ಹೆಚ್ಚಿದೆ. ಬಿಜೆಪಿ ನಾಯಕರೋರ್ವರು ರಾಜ್ಯಕ್ಕೆ ಆಗಮಿಸಿರುವುದು ಕುತೂಹಲ ಮೂಡಿಸಿದೆ. 

ಬೆಂಗಳೂರು [ಜು.14] :  ಮೈತ್ರಿ ಸರ್ಕಾರವು ಪತನದ ಅಂಚಿನಲ್ಲಿರುವ ಸಂದರ್ಭದಲ್ಲಿ ಜೆಡಿಎಸ್‌ ಸಚಿವ ಸಾ.ರಾ.ಮಹೇಶ್‌ ಜತೆಗೆ ಸಭೆ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ನಡವಳಿಕೆಯನ್ನು ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ನಗರಕ್ಕೆ ಆಗಮಿಸಿರುವುದು ಕುತೂಹಲ ಕೆರಳಿಸಿದೆ.

ಈ ಬೆಳವಣಿಗೆಯಿಂದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಅವರನ್ನು ಬದಲಿಸಿ ಕೈಲಾಸ್‌ ವಿಜಯ ವರ್ಗೀಯ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ವಿಜಯ ವರ್ಗೀಯ ಅವರು ಪಶ್ಚಿಮ ಬಂಗಾಳ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿದ್ದರು. ಮೂಲತಃ ಮಧ್ಯಪ್ರದೇಶದವರಾಗಿದ್ದಾರೆ. ಬಿಜೆಪಿಯ ಪ್ರಭಾವಿ ಮುಖಂಡರಾಗಿರುವ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಇತ್ತೀಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ಸಚಿವ ಸಾ.ರಾ.ಮಹೇಶ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮೈತ್ರಿ ಸರ್ಕಾರವು ಅಳಿವು-ಉಳಿವಿನ ಅಂಚಿನಲ್ಲಿರುವಾಗ ಜೆಡಿಎಸ್‌ ಸಚಿವರನ್ನು ಭೇಟಿಯಾಗಿರುವುದು ಬಿಜೆಪಿ ಹೈಕಮಾಂಡ್‌ನ ಕೆಂಗೆಣ್ಣಿಗೆ ಗುರಿಯಾಗಿರುವ ಕಾರಣ ರಾಜ್ಯ ಉಸ್ತುವಾರಿ ಬದಲಾವಣೆಗೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

click me!