
ಬೆಂಗಳೂರು(ಜ.20): ಬೆಳ್ಳಂದೂರು ಕೆರೆಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ ಮತ್ತೊಮ್ಮೆ ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೆ ಗುರಿ ಮಾಡಿದೆ. ಇಬ್ಬಲೂರು ಮತ್ತು ಈಜಿಪುರ ಕಡೆಯ ಕೆರೆ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕಾಡ್ಗಿಚ್ಚಿನಂತೆ ಬೆಂಕಿಯ ಜ್ವಾಲೆ ಸೇನಾ ಕ್ಯಾಂಪಿಗೂ ಆವರಿಸಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿತು.
ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಪ್ರಕರಣಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬಯೋ ಮಿಥೇನ್‌ನಿಂದ ಬೆಂಕಿ ಕಾಣಿಸಿಕೊಂಡಿದೆಯೋ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಬಿಡಿಎ ಅಧಿಕಾರಿಗಳು 12.30ರ ಸುಮಾರಿಗೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಬೆಂಕಿ ಹೊತ್ತಿಕೊಂಡ ಸ್ಥಳವು ನೀರು ಮತ್ತು ಜೊಂಡಿನಿಂದ ಆವೃತವಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. 4 ಅಗ್ನಿಶಾಮಕ ದಳಗಳು ಹಾಗೂ ಐದು ಸಾವಿರ ಸೇನಾ ಸಿಬ್ಬಂದಿ ಸುಮಾರು ರಾತ್ರಿ 7.30ರ ಸುಮಾರಿನ ವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ಜ್ವಾಲೆಯು ಕೆರೆಯ ಪಕ್ಕದಲ್ಲಿರುವ ಸೇನಾ ಪ್ರದೇಶಕ್ಕೆ ಆವರಿಸುತ್ತಿದ್ದಂತೆ ಐದು ಸಾವಿರ ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು ಎಂದು ಎಎಸ್‌ಸಿ ಸೇನಾ ಕೇಂದ್ರದ ಮೇಜರ್ ಜನರಲ್ ಎನ್. ಎಸ್. ರಾಜಪುರೋಹಿತ್ ತಿಳಿಸಿದ್ದಾರೆ.
ಕೆರೆಗೆ ಬೆಂಕಿ ಬಿದ್ದಿರುವ ಕುರಿತು ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ರಾಕೇಶ್‌ಸಿಂಗ್, ಬೆಂಕಿ ಕಾಣಿಸಿಕೊಂಡಿರುವ ಜಾಗದಲ್ಲಿ ಹುಲ್ಲು ಮತ್ತು ಕಳೆಯಿಂದ ಕೂಡಿದೆ. ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕೆರೆಯ ಅಂಗಳದಲ್ಲಿ ಶೇಖರಣೆಯಾಗಿರುವ ಕೊಳಚೆ ನೀರಿನಲ್ಲಿ ರಾಸಾಯನಿಕ ಮಿಶ್ರಣಗಳ ಪ್ರಮಾಣ ಹೆಚ್ಚಾಗಿದೆ.ರಾಸಾಯನಿಕ ಕ್ರಿಯೆ ನಡೆದು ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದ್ದಾರೆ.
ಎನ್‌ಜಿಟಿ ಆದೇಶದ ನಂತರ ಕೆರೆಯಲ್ಲಿರುವ ಹುಲ್ಲಿನ ಪದಾರ್ಥಗಳನ್ನು ಭಾಗಶಃ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ.ಮತ್ತೊಮ್ಮೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕೆರೆ ಮೇಲ್ವಿಚಾರಣಾ ಸಮಿತಿ ಕರೆದು ಸಭೆ ನಡೆಸಲಾಗುವುದು, ವಿಜ್ಞಾನಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.