ವಾಘಾದಲ್ಲಿ ಶಾಂತಿ, ಕಾಶ್ಮೀರದಲ್ಲಿ ಗುಂಡಿನ ದಾಳಿ

By Web DeskFirst Published Mar 2, 2019, 10:10 AM IST
Highlights

ಉಗ್ರರ ಜೊತೆ ಎನ್‌ಕೌಂಟರ್‌ನಲ್ಲಿ 5 ಯೋಧರು ಹುತಾತ್ಮ| ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಉಪಟಳ| ಸಾವನ್ನಪ್ಪಿದ್ದಾರೆ ಎಂದು ಶಂಕಿಸಿದ್ದ ಉಗ್ರರಿಂದ ಏಕಾಏಕಿ ದಾಳಿ

ಶ್ರೀನಗರ[ಮಾ.02]: ಶಾಂತಿಯ ಸಂಕೇತವಾಗಿ ಅಭಿನಂದನ್‌ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ಕಾಶ್ಮೀರ ಗಡಿಯಲ್ಲಿ ತನ್ನ ಕುಕೃತ್ಯವನ್ನು ಮುಂದುವರೆಸಿದೆ. ಅತ್ತ ಅಭಿನಂದನ್‌ ಅವರನ್ನು ವಾಘಾ ಗಡಿಯ ಮೂಲಕ ಬಿಡುಗಡೆಗೆ ಸಜ್ಜಾದ ಬೆನ್ನಲ್ಲೇ, ಪಾಕ್‌ ಪ್ರಚೋದಿತ ಉಗ್ರರು ಕಾಶ್ಮೀರದಲ್ಲಿ ಮತ್ತೆ ಗುಂಡಿನ ದಾಳಿ ನಡೆಸುವ ಮೂಲಕ ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರು ಹೇಡಿಗಳಂತೆ ನಡೆಸಿದ ದಾಳಿಯಲ್ಲಿ ಸಿಆರ್‌ಪಿಎಫ್‌ನ ಓರ್ವ ಯೋಧ ಸೇರಿದಂತೆ 5 ಮಂದಿ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ದಾಳಿ ನಡೆದ ಸ್ಥಳದಲ್ಲಿ ಗುಂಡು ತಗುಲಿ ಓರ್ವ ನಾಗರಿಕ ಕೂಡ ಸಾವಿಗೀಡಾಗಿದ್ದಾನೆ.

ಕುಪ್ವಾರಾದ ಬಾಬಾಗುಂಡ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ದೊರೆತ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರಿಂದ ಎರಡೂ ಕಡೆಯಿಂದ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಒಂದು ಹಂತದಲ್ಲಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದವು. ಕೆಲ ಹೊತ್ತು ಗುಂಡಿನ ಚಕಮಕಿಗೆ ವಿರಾಮ ಬಿದ್ದಿತ್ತು.

ಉಗ್ರರು ಸಾವನ್ನಪ್ಪಿರುವ ಶಂಕೆಯ ಮೆರೆಗೆ ಉಗ್ರರ ಅಡಗುದಾಣದತ್ತ ಭದ್ರತಾ ಪಡೆಗಳು ಮುನ್ನುಗ್ಗಿದ ಸಂದರ್ಭದಲ್ಲಿ, ಭದ್ರತಾ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಲ್ಲಿ 9 ಮಂದಿ ಭದ್ರತಾ ಸಿಬ್ಬಂದಿ ಉಗ್ರರ ಗುಂಡು ತಗುಲಿ ಗಾಯಗೊಂಡಿದ್ದು, ಅವರಲ್ಲಿ ಐದು ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಓರ್ವ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್‌, ಓರ್ವ ಯೋಧ, ಇಬ್ಬರು ಸೇನಾ ಸಿಬ್ಬಂದಿ ಹಾಗೂ ಓರ್ವ ಪೊಲೀಸ್‌ ಸಿಬ್ಬಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಗುಂಡಿನ ಚಕಮಕಿ ಏರ್ಪಟ್ಟಪ್ರದೇಶದ ಸಮೀಪ ಕಲ್ಲುತೂರಾಟಗಾರರು ಮತ್ತು ಭದ್ರತಾ ಪಡೆಗಳ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಘಟನೆಯಲ್ಲಿ ಗಾಯಗೊಂಡ ವಾಸೀಮ್‌ ಅಹಮದ್‌ ಎಂಬ ಯುವಕ ಆಸ್ಪತ್ರೆಗೆ ಸೇರಿಸುವ ವೇಳೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!