ಲೋಕಸಭಾ ಚುನಾವಣೆ : ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಪಕ್ಕಾ

By Web DeskFirst Published Sep 3, 2018, 9:27 AM IST
Highlights

ವಿವಿಧ ಪಕ್ಷಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಇದೀಗ  ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು ಕೆಲ ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತವಾದಂತಾಗಿದೆ. 

ಬೆಂಗಳೂರು : ಲೋಕಸಭೆ ಚುನಾವಣೆಗೆ ಸಿದ್ಧತೆ ತೀವ್ರಗೊಳಿಸಿರುವ ಕಾಂಗ್ರೆಸ್ ಪಕ್ಷವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಸರತ್ತು ಮುಂದುವರೆಸಿದೆ. ಭಾನುವಾರ ಒಂಬತ್ತು ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ನಡೆಸಿ ಐದು ಮಂದಿ ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತಪಡಿಸಿದೆ. ಉಳಿದ ನಾಲ್ಕು ಕ್ಷೇತ್ರಗಳಿಂದ ತಲಾ ಮೂರ್ನಾಲ್ಕು ಸಂಭಾವ್ಯರ ಪಟ್ಟಿಯನ್ನು ಅಂತಿಮಗೊಳಿಸಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಆಯಾ ಕ್ಷೇತ್ರದ ಸ್ಥಳೀಯ ಮುಖಂಡರಿಂದ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ, ಕ್ಷೇತ್ರದಲ್ಲಿ ಬಂಡಾಯ ನುಸುಳದಂತೆ ಎಚ್ಚರವಹಿಸಲು ಮುಖಂಡರಿಗೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಶನಿವಾರ ಎಂಟು ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನು ಅಂತಿಮಗೊಳಿಸಲಾಗಿತ್ತು. ಭಾನುವಾರ ಮತ್ತೆ ಒಂಬತ್ತು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿ,  ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಹಾಲಿ ಸಂಸದ ಎಂ. ವೀರಪ್ಪ ಮೊಯ್ಲಿ, ತುಮಕೂರು ಕ್ಷೇತ್ರದಿಂದ
ಮುದ್ದಹನುಮೇಗೌಡ, ಕೋಲಾರದಿಂದ ಕೆ.ಎಚ್. ಮುನಿಯಪ್ಪ, ಚಾಮರಾಜನಗರ ದಿಂದ ಆರ್. ಧ್ರುವನಾರಾಯಣ, ಚಿತ್ರ ದುರ್ಗದಿಂದ ಚಂದ್ರಪ್ಪ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಯಿತು. 

ಆದರೆ, ಚಂದ್ರಪ್ಪ ಅವರ ಬದಲಿಗೆ ಚಿತ್ರದುರ್ಗ ಕ್ಷೇತ್ರದಿಂದ ಬೇರೊಬ್ಬರಿಗೆ ಅವಕಾಶ ನೀಡುವಂತೆಯೂ ಆಗ್ರಹ ವ್ಯಕ್ತವಾಯಿತು ಎನ್ನಲಾಗಿದೆ. 
ಇನ್ನು ಧಾರವಾಡ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ತೀವ್ರ ಕಸರತ್ತು ನಡೆಸಿದ್ದು, ಕ್ಷೇತ್ರದ ಸ್ಥಿತಿಗತಿ ಹಾಗೂ ಸ್ಥಳೀಯ ಮುಖಂಡರ ಮಾಹಿತಿ ಆಧರಿಸಿ ತಲಾ ಮೂರ್ನಾಲ್ಕು ಸಂಭಾವ್ಯರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೆ ಲಾಬಿ ಜೋರು: ಧಾರವಾಡ ಕ್ಷೇತ್ರದ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ಕುರಿತು ನಡೆದ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ವೇಳೆ ನಾಯಕರು ವಿನಯ್‌ಕುಲಕರ್ಣಿ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಾರಿ ಟಿಕೆಟ್ ನೀಡಿದರೆ ಪ್ರಹ್ಲಾದ್ ಜೋಶಿಗೆ ಪ್ರಬಲ ಪೈಪೋಟಿ ನೀಡಬಹುದು. 

ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದರೆ ಪಕ್ಷಕ್ಕೆ ಒಳಿತಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಆದರೆ, ಕಳೆದ ಹಲವು ಬಾರಿಯಿಂದ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಹಿಂದುಳಿದ ವರ್ಗದ ಎಸ್. ಮೋರೆ ಅವರಿಗೆ ನೀಡಬೇಕು ಎಂಬ
ಒತ್ತಾಯವೂ ಕೇಳಿ ಬಂದಿತು. ಈ ಹಿನ್ನೆಲೆಯಲ್ಲಿ ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ ಹಂತದಲ್ಲಿ ಪರಿಶೀಲಿಸಿ ಅಭ್ಯರ್ಥಿ  ತಿಮಗೊಳಿಸುವುದಾಗಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾವೇರಿ ಮುಖಂಡರ ನಡುವೆ ವಾಗ್ವಾದ: ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗದಗ ಹಾಗೂ ಹಾವೇರಿ ಮುಖಂಡರಾದ ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಜಿ ಶಾಸಕ ಶಿವಣ್ಣ, ಸಲೀಂ ಅಹಮದ್, ಬಿ.ಆರ್. ಪಾಟೀಲ್, ಶ್ರೀನಿವಾಸ ಮಾನೆ ಸೇರಿ ಹಲವು ನಾಯಕರು ಭಾಗವಹಿಸಿದ್ದರಾದರೂ ಅಭ್ಯರ್ಥಿ ಬಗ್ಗೆ ಒಮ್ಮತ ಮೂಡದ ಹಿನ್ನೆಲೆ ಮುಖಂಡರ ನಡುವೆ ತೀವ್ರ ವಾಗ್ವಾದ ನಡೆದಿದೆ.

click me!