ಮನೆ, ಜಮೀನು ಸರ್ವನಾಶ : ಬೀದಿಗೆ ಬಿದ್ದ ಯೋಧನ ಪರಿವಾರ

By Web DeskFirst Published Sep 3, 2018, 8:55 AM IST
Highlights

ಆಪರೇಷನ್ ಬ್ಲೂ ಸ್ಟಾರ್ ನಲ್ಲಿ ಸೆಣೆಸಿದ್ದ ಯೋಧನ ಕುಟುಂಬವೀಗ ಸಂಪೂರ್ಣ ಬೀದಿಗೆ ಬಿದ್ದಿದೆ.  ಕೊಡಗಿನಲ್ಲಿ ಉಂಟಾದ ಪ್ರವಾಹದಿಂದ ಮನೆ ಜಮೀನು ಕಳೆದುಕೊಂಡ ಈ ಕುಟುಂಬ ಬೇರೆ ಒಬ್ಬರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ.

ಸೋಮವಾರಪೇಟೆ : ಪಂಜಾಬ್‌ನ ಅಮೃತಸರದಲ್ಲಿ 1984ರ ಆಪರೇಷನ್ ಬ್ಲೂಸ್ಟಾರ್ ಹಾಗೂ 1987ರಲ್ಲಿ ಶ್ರೀಲಂಕಾಕ್ಕೆ ತೆರಳಿದ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಜೀವದ ಹಂಗು ತೊರೆದು ಹೋರಾಡಿದ ಕೊಡಗಿನ ಸೈನಿಕನ ಬದುಕು ಇಂದು ಬೀದಿಗೆ ಬಂದಿದೆ. ನಿವೃತ್ತಿಯ ಬಳಿಕ ಕೊಡಗಿಗೆ ಬಂದು ಕೃಷಿಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದ ಯೋಧನ ಮನೆ, ಜಮೀನು ಭಾರೀ ಮಳೆ ಮತ್ತು ಭೂಕುಸಿತಕ್ಕೆ ಸರ್ವನಾಶವಾಗಿದೆ. ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆಯಬೇಕಾದ ಸ್ಥಿತಿಗೆ ಬಂದಿದ್ದಾರೆ.

ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದ ನಿವೃತ್ತ ಹವಲ್ದಾರ್ ಜಗ್ಗಾರಂಡ ದೇವಯ್ಯ ಮದ್ರಾಸ್ ರೆಜಿಮೆಂಟ್ (ಎಂಆರ್‌ಸಿ)ಗೆ ನೇಮಕವಾಗಿ 17 ವರ್ಷಗಳ ಕಾಲ ಪಂಜಾಬ್, ಕಾಶ್ಮೀರ, ಕಾರ್ಗಿಲ್, ಶ್ರೀಲಂಕಾ ಸೇರಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿ ವೇಳೆ ಸಿಕ್ಕ ಹಣವನ್ನು ಸ್ವಗ್ರಾಮ ಇಗ್ಗೋಡ್ಲುವಿನಲ್ಲಿ ಕೃಷಿಗಾಗಿ ಸುರಿದಿದ್ದರು. ತುಂಬಾ ಶ್ರಮವಹಿಸಿ 6 ಎಕರೆ ಕಾಫಿ ತೋಟ ಹಾಗೂ ಕರಿಮೆಣಸು ಬೆಳೆ ಬೆಳೆಯುತ್ತಿದ್ದರು.ಭೂಕುಸಿತಕ್ಕೆ ಕಾಫಿ  ತೋಟ ಹಾಗೂ 50 ಲಕ್ಷ ರು.ಗೂ ಅಧಿಕ ಮೌಲ್ಯವುಳ್ಳ ಮನೆ ಸಂಪೂರ್ಣ ನಾಶವಾಗಿದೆ.

24 ತಾಸಲ್ಲಿ ತಪ್ಪಿದ ದುರಂತ: ಮಾಜಿ ಸೈನಿಕನ ಕೋಟಾದಡಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇರ್ಪಡೆಯಾದ ದೇವಯ್ಯ, ಪತ್ನಿ ನಯನಾ ದೇವಯ್ಯ, ಪುತ್ರರಾದ ವಿನೋದ್ ಬೋಪಯ್ಯ ಹಾಗೂ ರೋಹಿತ್ ಸೋಮಯ್ಯರೊಂದಿಗೆ ಸುಖೀ ಜೀವನ ಸಾಗಿಸುತ್ತಿದ್ದರು. ಆದರೆ ಆ. 16ರಿಂದ ಆರಂಭವಾದ ಕುಂಭದ್ರೋಣ ಮಳೆಯಿಂದಾಗಿ ಬೆಟ್ಟದ ಸಾಲುಗಳು ಕುಸಿಯಲು ಆರಂಭವಾಗಿತ್ತು. ಇದರಿಂದಾಗಿ ಅಂದೇ ಮನೆ ಬಿಟ್ಟು ನೆಂಟರ ಮನೆಗೆ ತೆರಳಿದ್ದರು. 

ಮನೆ ತೊರೆದ 24 ಗಂಟೆಯಲ್ಲೇ ಭೂಕುಸಿತದಿಂದಾಗಿ ಅವರ ಮನೆ, ತೋಟ, ಗದ್ದೆಗಳು ಸರ್ವನಾಶವಾದವು. ಇಗ್ಗೊಡ್ಲು ಗ್ರಾಮದ ಕುಟ್ಟಂಡ ಪೊನ್ನಮ್ಮ ಅವರ ಮಗ ಪ್ರದೀಪ ನಮ್ಮನ್ನು ರಕ್ಷಿಸಿದ ಎಂದು ದೇವಯ್ಯ ಅವರ ಪತ್ನಿ ನಯನಾ ದೇವಯ್ಯ ಸ್ಮರಿಸುತ್ತಾರೆ. 

ರೋಹನ್ ಬೋಪಣ್ಣ ತಂದೆ ಆಸರೆ: ಈ ಕುಟುಂಬಕ್ಕೆ 15 ದಿನಗಳಿಂದ ಟೆನಿಸ್ ಆಟಗಾರ ಪುತ್ರ ರೋಹನ್ ಬೋಪಣ್ಣ ತಂದೆ ಮಚ್ಚಂಡ ಬೋಪಣ್ಣ ಆಶ್ರಯ ನೀಡಿ ಸಲಹುತ್ತಿದ್ದಾರೆ.

ಮುರಳೀಧರ್ ಶಾಂತಳ್ಳಿ

click me!