ಸ್ಯಾಂಡಲ್‌ವುಡ್ ಐಟಿ ದಾಳಿ ಬೆನ್ನಲ್ಲೇ ಬಯಲಾಯ್ತು ಮತ್ತೊಂದು ಶಾಕಿಂಗ್ ಸಂಗತಿ

By Web DeskFirst Published Jan 8, 2019, 8:42 AM IST
Highlights

ಚಂದನವನದ ಸ್ಟಾರ್ ಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸಂಗತಿ ಬಯಲಾಗಿದೆ. ಚಿತ್ರರಂಗದಲ್ಲಿ ಶೇ.30-40ರಷ್ಟುನಗದು ರೂಪದಲ್ಲಿ ಹಣಕಾಸು ವಹಿವಾಟು ನಡೆಸುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವುದು  ಬಯಲಾಗಿದೆ.  

ಬೆಂಗಳೂರು :  ಸ್ಯಾಂಡಲ್‌ವುಡ್‌ನಲ್ಲಿ ಶೇ.30-40ರಷ್ಟುನಗದು ರೂಪದಲ್ಲಿ ಹಣಕಾಸು ವಹಿವಾಟು ನಡೆಸುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಮೂಲಕ ಚಿತ್ರ ನಟ-ನಟಿಯರು, ನಿರ್ಮಾಪಕರು, ವಿತರಕರು ಸೇರಿದಂತೆ ಇತರೆ ವಿಭಾಗದಲ್ಲಿ ಕೆಲಸ ಮಾಡುವ ದಿಗ್ಗಜರು ನಗದು ರೂಪದಲ್ಲಿ ಹಣ ಪಡೆದು ಲೆಕ್ಕದ ಗೌಪ್ಯತೆ ಕಾಪಾಡುತ್ತಿದ್ದಾರೆ ಎಂಬ ಆರೋಪಗಳಿಗೆ ಐಟಿ ತನಿಖೆ ಮತ್ತಷ್ಟುಪುಷ್ಟಿನೀಡಿದೆ. ಅಲ್ಲದೆ, ಸ್ಯಾಂಡಲ್‌ವುಡ್‌ನಲ್ಲಿ ನಡೆಯುವ ನಗದು ವ್ಯವಹಾರದ ಕರಾಳ ಮುಖವನ್ನು ಐಟಿ ಅಧಿಕಾರಿಗಳು ಬಯಲು ಮಾಡಿದ್ದಾರೆ.

ಸಂಭಾವನೆಯನ್ನು ದಾಖಲೆಗಳ ಮೂಲಕ ಪಡೆದುಕೊಳ್ಳದೆ ನಗದು ರೂಪದಲ್ಲಿ ಪಡೆದು ತೆರಿಗೆ ವಂಚನೆ ಮಾಡಲಾಗುತ್ತಿದೆ. ಶೇ.30-40ರಷ್ಟುನಗದು ರೂಪದಲ್ಲಿಯೇ ಚಿತ್ರರಂಗದಲ್ಲಿ ವ್ಯವಹಾರ ನಡೆಯುತ್ತಿರುವುದು ಗೊತ್ತಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಧಾನ ನಿರ್ದೇಶಕ (ತನಿಖೆ) ಆರ್‌.ರವಿಚಂದ್ರನ್‌ ತಿಳಿಸಿದ್ದಾರೆ.

ತನಿಖಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸುವ ಹಿನ್ನೆಲೆಯಲ್ಲಿ ಸೋಮವಾರ ಐಟಿ ಕಚೇರಿಯಲ್ಲಿ ನಡೆದ ‘ಅನ್ವೇಷಣಾ’ ಕಾರ್ಯಕ್ರಮದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲಾವಿದರು, ಚಿತ್ರಮಂದಿರಗಳಿಂದಾಗುವ ಸಂಗ್ರಹದ ಮೊತ್ತ ಸೇರಿದಂತೆ ಇತರೆ ವಿಷಯಗಳಲ್ಲಿ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವವರು ನಗದು ರೂಪದಲ್ಲಿ ಹಣ ಪಡೆದುಕೊಳ್ಳುತ್ತಿರುವುದು ಗೊತ್ತಾಗಿದೆ. ಇದು ಕಾನೂನು ಬಾಹಿರ. ಪ್ರತಿಯೊಂದಕ್ಕೂ ಲೆಕ್ಕ ನೀಡಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಆದರೆ, ಅಂತಹ ಕೆಲಸ ಮಾಡುತ್ತಿಲ್ಲ ಎಂಬುದು ಕಂಡುಬಂದಿದೆ. ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಸಂಸ್ಥೆಗಳು ಚಿತ್ರರಂಗದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸ್ಯಾಂಡಲ್‌ವುಡ್‌ನಲ್ಲಿ ಪ್ರಮುಖವಾಗಿ ಮೂರು ಹಂತದಲ್ಲಿ ತೆರಿಗೆ ವಂಚನೆಯ ಪ್ರಕ್ರಿಯೆಗಳು ನಡೆಯುತ್ತಿರುವುದು ಗೊತ್ತಾಗಿದೆ. ಸಂಭಾವನೆ ಪಡೆದುಕೊಳ್ಳುವುದು, ವಿದೇಶ, ಸ್ಯಾಟಲೈಟ್‌, ಕೇಬಲ್‌ ಸೇರಿದಂತೆ ವಿವಿಧ ರೀತಿಯ ಹಕ್ಕುಗಳ ವಿತರಣೆ, ಚಿತ್ರಮಂದಿರಗಳಲ್ಲಿ ಸಂಗ್ರಹವಾಗುವ ಮೊತ್ತ ಪಡೆದುಕೊಳ್ಳುವುದರಲ್ಲಿ ತೆರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ. ಲೆಕ್ಕ ಪರಿಶೋಧನೆ ಮಾಡದಿರುವುದು ಸಹ ಗೊತ್ತಾಗಿದ್ದು, ಶೇ.30-40ರಷ್ಟುಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುವ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತಿದೆ ಎಂದರು.

ನಟ, ನಿರ್ಮಾಪಕರ ವಿರುದ್ಧ ಕಾನೂನು ಕ್ರಮ

ನಟ, ನಿರ್ಮಾಪಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ 109 ಕೋಟಿ ರು. ಅಘೋಷಿತ ಆದಾಯ ಪತ್ತೆಯಾಗಿದ್ದು, ವಿಚಾರಣೆ ಬಳಿಕ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ ಬಿ.ಆರ್‌.ಬಾಲಕೃಷ್ಣನ್‌ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 2.85 ಕೋಟಿ ರು. ನಗದು, ಮತ್ತು 25.3 ಕೆ.ಜಿ. ಚಿನ್ನಾಭರಣ ಸೇರಿದಂತೆ 11 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. 109 ಕೋಟಿ ರು. ಅಘೋಷಿತ ಆದಾಯ ಎಂಬುದು ಗೊತ್ತಾಗಿದೆ. ಶೀಘ್ರದಲ್ಲಿಯೇ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಗೆ ಕರೆಯಲಾಗುವುದು. ಬಳಿಕ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತ್ಯೇಕವಾಗಿ ಅವರ ವಿರುದ್ಧ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ನಿರ್ಮಾಪಕರು ಚಿತ್ರೋದ್ಯಮದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವುದರಿಂದ ಸಹಜವಾಗಿ ನಿರ್ಮಾಪಕರಿಗೆ ಸೇರಿದ ಸ್ಥಳಗಳಲ್ಲಿ ಹೆಚ್ಚಿನ ಸಂಪತ್ತು ಪತ್ತೆಯಾಗಿದೆ. ನಟರ ಮನೆಗಳಲ್ಲಿ ಕಡಿಮೆ ಮೊತ್ತ ಲಭಿಸಿದ್ದು, ಪರಿಶೀಲನೆ ಕಾರ್ಯ ಮುಂದುವರಿದೆ ಎಂದರು.

ಆದಾಯ ತೆರಿಗೆ ಜಾಗೃತಿಗಾಗಿ ಶೀಘ್ರ ಚಿತ್ರರಂಗದ ಜತೆ ಸಭೆ

ಸಿನಿಮಾ ರಂಗದಲ್ಲಿ ನಟ, ನಿರ್ಮಾಪಕರು ಮಾತ್ರವಲ್ಲದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ವಿಭಾಗದ ಸಿಬ್ಬಂದಿ ಸಹ ಐಟಿ ರಿಟರ್ನ್‌ ಮಾಡಿಲ್ಲ. ಹೀಗಾಗಿ ಚಿತ್ರೋದ್ಯಮದ ಜತೆಗೆ ಶೀಘ್ರದಲ್ಲಿಯೇ ಸಭೆ ನಡೆಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ ಬಿ.ಆರ್‌.ಬಾಲಕೃಷ್ಣನ್‌ ನುಡಿದಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ತಂತ್ರಜ್ಞರು, ಸಂಗೀತಗಾರರು ಸೇರಿದಂತೆ ವಿವಿಧ ವಿಭಾಗದಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ಆದರೆ, ಇವರಲ್ಲಿ ಬಹಳಷ್ಟುಮಂದಿ ಐಟಿ ರಿಟರ್ನ್‌ ಸಲ್ಲಿಕೆ ಮಾಡದಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಸಹ ಸಂಗ್ರಹಿಸಲಾಗುತ್ತಿದೆ. ಮೊದಲು ಚಿತ್ರೋದ್ಯಮದ ಜತೆಗೆ ಸಭೆ ನಡೆಸಿ ಐಟಿ ರಿಟರ್ನ್‌ ಸಲ್ಲಿಕೆ ಮಾಡುವುದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ನಂತರವೂ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಚಿತ್ರರಂಗದಿಂದ ಬರಬೇಕಾದ ಐಟಿ ರಿಟರ್ನ್‌ ಆದಾಯವು ಕಡಿಮೆ ಇದೆ. ಇದಕ್ಕೆ ಕಾರಣವೇನೆಂಬುದನ್ನು ಪರಿಶೀಲನೆ ನಡೆಸಿದಾಗ ಐಟಿ ರಿಟರ್ನ್‌ ಪಾವತಿಸದಿರುವುದು ಕಂಡು ಬಂದಿದೆ. ಹೀಗಾಗಿ ಅರಿವು ಮೂಡಿಸುವ ಬಗ್ಗೆ ನಿರ್ಧಸಲಾಗಿದೆ ಎಂದರು.

click me!