
ಬೆಂಗಳೂರು: ಮಳೆಗಾಲ ಆರಂಭವಾದರೂ ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆ ಸರಣಿ ನಿಂತಿಲ್ಲ. ಸಾಲಬಾಧೆ ಮತ್ತಿತರ ಕಾರಣಗಳಿಂದಾಗಿ ಸೋಮವಾರ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಜ.19ರಿಂದ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 301ಕ್ಕೇರಿದೆ.
ಬಹುತೇಕ ರೈತರು ಸಾಲಬಾಧೆ, ಬರ, ಬೋರ್‌ವೆಲ್ ವೈಫಲ್ಯ, ಬೆಳೆನಾಶ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಚಿಕ್ಕಮಗಳೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಬೋರ್‌ವೆಲ್ ವೈಫಲ್ಯದಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಸಾವಿನ ದಾರಿ ಹಿಡಿದಿದ್ದಾರೆ. ಅತ್ತ ಬೋರ್ ನೀರೂ ಇಲ್ಲ, ಇತ್ತ ಬೆಳೆಯೂ ಕೈಕೊಟ್ಟು ಮಾಡಿದ ಸಾಲ ತೀರಿಸುವ ದಾರಿ ಕಾಣದೆ ಆತ್ಮಹತ್ಮೆಯ ಹಾದಿ ತುಳಿಯುತ್ತಿದ್ದಾರೆ ಇಲ್ಲಿನ ಕೆಲ ರೈತರು. ಇನ್ನು ಸಾಲ ವಸೂಲಿಗೆ ರೈತರ ಮೇಲೆ ಒತ್ತಡ ಹೇರಬಾರದೆಂಬ ಸೂಚನೆಯಿದ್ದಾಗ್ಯೂ ಇದನ್ನು ಲೆಕ್ಕಿಸದ ಬ್ಯಾಂಕ್‌ಗಳು ನೋಟಿಸ್ ಕಳಿಸಿದ್ದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡ ಹಾಸನ ಮತ್ತಿತರ ಕಡೆ ಬೆಳಕಿಗೆ ಬಂದಿದೆ.
ಹಾಸನದಲ್ಲೇ ಅತಿ ಹೆಚ್ಚು: ಈವರೆಗೆ ವರದಿಯಾಗಿರುವ ಪ್ರಕರಣಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಚಿಕ್ಕಮಗಳುರು ಎರಡನೇ ಸ್ಥಾನದಲ್ಲಿದ್ದು 36 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೀವ್ರ ಬರದಿಂದ ಕಂಗೆಟ್ಟಿರುವ ಹೈದ್ರಬಾದ್ ಕರ್ನಾಟಕ ಪ್ರದೇಶ ಯಾದಗಿರಿಯಲ್ಲಿ 28 ರೈತ ತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು 3 ನೇ ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆಯಲ್ಲಿ 23 ಪ್ರಕರಣಗಳು ನಡೆದಿದ್ದರೆ, ಹಾವೇರಿಯಲ್ಲಿ 21 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಕೊಪ್ಪಳ 18, ಬೆಳಗಾವಿ 15, ಮೈಸೂರು 15, ರಾಯಚೂರು 13, ತುಮಕೂರು 12, ಶಿವಮೊಗ್ಗ 12, ಬಾಗಲಕೋಟೆ 10, ಚಿತ್ರದುರ್ಗ 8, ಕಲಬುರಗಿ 6, ಚಿಕ್ಕಬಳ್ಳಾಪುರ 4 ಪ್ರಕರಣಗಳು ರದಿಯಾಗಿವೆ.
ಕರಾವಳಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಕಡಿಮೆ ದಾಖಲಾಗಿದ್ದು, ಉತ್ತರ ಕನ್ನಡದಲ್ಲಿ ಒಬ್ಬ ರೈತ ತ್ನಹತ್ಯೆ ಮಾಡಿಕೊಂಡಿದ್ದರೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ಮತ್ತಿಬ್ಬರ ಆತ್ಮಹತ್ಯೆ: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಬಟೂರು ಗ್ರಾಮದ ರೈತ ಶಿವಕುಮಾರ್(32) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೃಷ್ಣರಾಜಪುರ ಗ್ರಾಮದ ರೈತ ನಾರಾಯ ಣಸ್ವಾಮಿ ಸಾಲಬಾಧೆಯಿಂದ ಕಂಗೆಟ್ಟು ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಕುಮಾರ್ ಅವರು, 3 ಎಕರೆ ಜಮೀನು ಹೊಂದಿದ್ದು, .6 ಲಕ್ಷ ಸಾಲ ಹೊಂದಿದ್ದರು. ಸಾಲಬಾಧೆಗೆ ನೊಂದು ನೇಣಿಗೆ ಶರಣಾಗಿದ್ದಾರೆ. ನಾರಾಯಣಸ್ವಾಮಿ ಅವರು, ವ್ಯವಸಾಯಕ್ಕಾಗಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದು ಸಾಲ ಮರುಪಾವತಿ ಸಾಧ್ಯವಾಗದೇ ಗ್ರಾಮದ ತೋಟದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.