
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಟ್ಟೆ ಮಾರಾಟ ಮಳಿಗೆ ನುಗ್ಗಿದ ದಂಪತಿ, ದುಬಾರಿ ಬೆಲೆಯ ಸೀರೆಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿಕ ಶ್ರೀಸಾಯಿ ಸ್ಯಾರಿ ಪ್ಯಾಲೇಸ್‌ನಲ್ಲಿ ನಡೆದಿದೆ.
ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್‌ನಲ್ಲಿ ಭಾನುವಾರ ಮಧ್ಯಾಹ್ನ ಮಹಿಳಾ ಸಿಬ್ಬಂದಿ ಒಬ್ಬರೇ ಇದ್ದರು. ಇದೇ ವೇಳೆ ಯುವಕನೊಬ್ಬ ಬಂದು ವಿವಿಧ ಮಾದರಿಯ ಸೀರೆಗಳನ್ನು ತೋರಿಸುವಂತೆ ಕೇಳಿದ್ದಾನೆ. ಅದರಂತೆ ಸಿಬ್ಬಂದಿ ತೋರಿಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದಂಪತಿ ದುಬಾರಿ ಮೌಲ್ಯದ ರೇಷ್ಮೆ ಸೀರೆಗಳನ್ನು ತೋರಿಸುವಂತೆ ಕೋರಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿ ಹತ್ತಾರು ಸೀರೆಗಳನ್ನು ದಂಪತಿಯ ಮುಂದೆ ಇಟ್ಟಿದ್ದರು. ಮತ್ತೊಂದೆಡೆ ಇದ್ದ ಯುವಕ ತಮಗೂ ಅದೇ ಮೌಲ್ಯದ ಸೀರೆಗಳನ್ನು ತೋರಿಸುವಂತೆ ಹೇಳಿದ್ದಾನೆ. ಆ ವೇಳೆ ಸಿಬ್ಬಂದಿ ಅತ್ತ ಗಮನ ಹರಿಸಿದ್ದಾರೆ. ಈ ವೇಳೆ ದಂಪತಿ ತಮ್ಮ ಕೈ ಚಳಕ ತೋರಿದ್ದಾರೆ. ಈ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಹಿಳೆ ಸುಮಾರು ೨೦ ಸೀರೆಗಳನ್ನು ತಾನು ಧರಿಸಿದ್ದ ಸೀರೆಯೊಳಗೆ ಇಟ್ಟುಕೊಂಡಿದ್ದಾಳೆ. ನಂತರ ಕೆಲ ಸೀರೆಗಳನ್ನು ನೋಡಿ ಮತ್ತೊಮ್ಮೆ ಬರುವುದಾಗಿ ಹೇಳಿ ವಾಪಸ್ ಹೋಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಯುವಕ ಕೂಡ ಮತ್ತೆ ಬರುವುದಾಗಿ ಹೇಳಿ ಹೊರಟಿದ್ದಾನೆ. ಬಳಿಕ ಮಹಿಳಾ ಸಿಬ್ಬಂದಿ ಸೀರೆಗಳನ್ನು ಜೋಡಿಸುವಾಗ, ೨೦ ಸೀರೆಗಳು ಕಳುವಾಗಿರುವುದು ಅವರ ಗಮನಕ್ಕೆ ಬಂದಿದೆ.ಈ ವೇಳೆಗೆ ಮಳಿಗೆಗೆ ಆಗಮಿಸಿದ ಇತರೆ ಸಿಬ್ಬಂದಿಗೆ ಮಹಿಳಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ₹3 ಲಕ್ಷ ಮೌಲ್ಯದ 20 ಸೀರೆಗಳು ಕಳುವಾಗಿದೆ ಎಂದು ಮಳಿಗೆಯ ಮಾಲೀಕರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ