
ಬೆಂಗಳೂರು : ಎರಡೂವರೆ ತಿಂಗಳ ಹಿಂದೆ ದೊರಸ್ವಾಮಿಪಾಳ್ಯ ದಲ್ಲಿ ನಡೆದಿದ್ದ 2 ತಿಂಗಳ ಗರ್ಭಿಣಿ ಶಶಿಕಲಾ ನಿಗೂಢ ನಾಪತ್ತೆ ಹಿಂದಿನ ರಹಸ್ಯವು ಕೊನೆಗೂ ಬಯಲಾಗಿದ್ದು, ನದಿ ದಂಡೆಗೆ ವಿಹಾರ ನೆಪದಲ್ಲಿ ಕರೆದೊಯ್ದು ಆಕೆಯನ್ನು ಅವರ ಪತಿಯೇ ಕೊಂದಿದ್ದ ಸಂಗತಿ ಪುಟ್ಟೇನಹಳ್ಳಿ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೊರೆಸ್ವಾಮಿಪಾಳ್ಯದ ನಿವಾಸಿ ಶಶಿಕಲಾ (24 ) ಹತ್ಯೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೃತರ ಪತಿ ಸತ್ಯರಾಜ್ ಬಂಧನವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರಳಿದ ಆರೋಪಿ, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ವಿಹಾರದ ನೆಪದಲ್ಲಿ ಪತ್ನಿಯನ್ನು ಕರೆದುಕೊಂಡು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಏಳು ತಿಂಗಳ ಹಿಂದೆ ಮದುವೆ: ಏಳು ತಿಂಗಳ ಹಿಂದೆ ಸತ್ಯರಾಜ್ ಹಾಗೂ ಶಶಿಕಲಾ ವಿವಾಹವಾಗಿದ್ದು, ಮದುವೆ ಬಳಿಕ ದೊರೆಸ್ವಾಮಿಪಾಳ್ಯದಲ್ಲಿ ದಂಪತಿ ನೆಲೆಸಿದ್ದರು. ಸತ್ಯರಾಜ್ ಮನೆ ಸಮೀಪವೇ ಹಣ್ಣಿನ ಮಾರಾಟ ಮಳಿಗೆ ನಡೆಸುತ್ತಿದ್ದ. ಅವರ ಮನೆ ಸಮೀಪದಲ್ಲೇ ಸತ್ಯರಾಜ್ ಪೋಷಕರು ಹಾಗೂ ಸಂಬಂಧಿಕರು ನೆಲೆಸಿದ್ದರು. ವಿವಾಹದ ಬಳಿಕ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಪ್ರತಿದಿನ ಸತ್ಯರಾಜ್ ಪೋಷಕರ ಮನೆಗೆ ಬಂದು ಹೋಗು ತ್ತಿದ್ದುದು ಶಶಿಕಲಾಗೆ ಸಹನೀಯವಾಗಿರಲಿಲ್ಲ.
ಹೀಗಾಗಿ ವಾಸ್ತವ್ಯ ಬದಲಾಯಿಸುವಂತೆ ಪತಿಗೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸತ್ಯರಾಜ್ ಸಹಮತ ವ್ಯಕ್ತಪಡಿಸಿಲ್ಲ. ಇದೇ ವಿಚಾರವಾಗಿ ದಂಪತಿ ನಡುವೆ ನಿತ್ಯ ಗಲಾಟೆಯಾಗುತ್ತಿತ್ತು. ಒಮ್ಮೆ ಅಂಗಡಿ ಮುಂದೆಯೇ ಶಶಿಕಲಾ ಪತಿಗೆ ಬೈದಿದ್ದರು. ಇದರಿಂದ ಕುಪಿತಗೊಂಡ ಆರೋಪಿ, ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದ.
ಮನೆ ಬದಲಾವಣೆಗೆ ಒಪ್ಪಿರುವಂತೆ ನಾಟಕ ಮಾಡಿ ಪತ್ನಿ ಮನವೊಲೈಕೆಗೆ ನಾಲ್ಕೈದು ದಿನ ಯತ್ನಿಸಿದ ಸತ್ಯರಾಜ್, ಬಳಿಕ ಹೊರಗಡೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ನನ್ನ ಮೇಲೆ ನಿನಗೆ ಬೇಸರವಿರ ಬಹುದು. ಗರ್ಭೀಣಿ ಪತ್ನಿಯ ಬಯಕೆ ಈಡೇರಿಸುವುದು ಗಂಡನ ಕರ್ತವ್ಯ. ನಾಳೆ ಹೊರಗಡೆ ಕರೆದುಕೊಂಡು ಹೋಗುತ್ತೇನೆ ಎಂದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕರೆದೊಯ್ದು ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ವಿಹಾರಕ್ಕೆ ಕರೆದೊಯ್ದು ಹತ್ಯೆ: ಪೂರ್ವ ನಿಯೋಜಿತ ಸಂಚಿನಂತೆ ಮೇ 1 ರ ಮಧ್ಯಾಹ್ನ ಸತ್ಯರಾಜ್, ವಿಹಾರದ ನೆಪದಲ್ಲಿ ಪತ್ನಿಯನ್ನು ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಕರೆದೊಯ್ದಿದ್ದ. ಆ ವೇಳೆ ಪತ್ನಿಗೆ ಗೊತ್ತಾಗದಂತೆ ಹಣ್ಣು ಕತ್ತರಿಸುವ ಚಾಕು ತೆಗೆದುಕೊಂಡ ಹೋಗಿದ್ದ ಆತ, ಅಲ್ಲಿ ಪತ್ನಿ ನೀರಿನಲ್ಲಿ ಆಟವಾಡುತ್ತಿರುವಾಗಲೇ ಕುತ್ತಿಗೆ ಕುಯ್ದು ಹತ್ಯೆಗೈದಿದ್ದ. ನಂತರ ಮೃತದೇಹವನ್ನು ನೀರಿನಲ್ಲೇ ಬಿಟ್ಟರೆ ಪ್ರಕರಣ ಬೆಳಕಿಗೆ ಬರುತ್ತದೆಂದು ಭಾವಿಸಿದ ಆತ, ಸಮೀಪದ ನಿರ್ಜನ ಪ್ರದೇಶದ ಪೊದೆಯಲ್ಲಿ ಎಸೆದು ಮನೆಗೆ ಮರಳಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ