ಶಿಕಾಗೋದಲ್ಲಿ ಮೊಳಗಿದ ಪಾಂಚಜನ್ಯ: 2ನೇ ವಿಶ್ವ ಹಿಂದೂ ಸಮ್ಮೇಳನಕ್ಕೆ ಚಾಲನೆ!

By Web DeskFirst Published Sep 8, 2018, 2:33 PM IST
Highlights

ಅಮೆರಿಕದಲ್ಲಿ ವಿಶ್ವ ಹಿಂದೂ ಸಮ್ಮೇಳನ! ಸ್ವಾಮಿ ವಿಜ್ಞಾನನಂದ ಗುರೂಜೀ ವಿದ್ಯುಕ್ತ ಚಾಲನೆ! ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮೋಹನ್ ಭಾಗವತ್! ಹಿಂದೂ ಮೌಲ್ಯಗಳ ಸದ್ಬಳಕೆಗೆ ಮೋಹನ್ ಭಾಗವತ್ ಕರೆ! ವಿಶ್ವ ಹಿಂದೂ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಸಂದೇಶ! ಸಮ್ಮೇಳನದಲ್ಲಿ ಮಾತನಾಡಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಚಿತ್ರ-ವರದಿ : ಅನಿಲ್ ಭಾರದ್ವಾಜ್, ಅರಿಜೋನ

ಶಿಕಾಗೋ: ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಹಾಗೂ ಜಾಗತಿಕ ಮಟ್ಟದಲ್ಲಿ ಹಿಂದುಗಳನ್ನು ಒಗ್ಗೂಡಿಸುವ ಸಂಕಲ್ಪದೊಂದಿಗೆ ಶಿಕಾಗೋದಲ್ಲಿ ಆಯೋಜಿಸಲಾಗಿದ್ದ 2ನೇ ವಿಶ್ವ ಹಿಂದೂ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನಕ್ಕೆ ವಿಶ್ವ ಹಿಂದೂ ಪರಿಷತ್ ನ ಭಾರತದ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನನಂದ ಗುರೂಜೀ ಶಂಖ ಮೊಳಗಿಸಿ ಚಾಲನೆ ನೀಡಿದರು.

ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ದೀಪ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದರು. ಹಿಂದೂಗಳು ಸಹಿಷ್ಣುಗಳು, ಹಿಂದುತ್ವ ಅಳವಡಿಸಿಕೊಂಡವರು ಅಹಿಂಸೆಯ ಮಾರ್ಗದಲ್ಲೇ ನಡೆಯುತ್ತಾರೆ ಎಂದು ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಹೇಳಿದರು. ಭಾರತ ಹಿಂದುಳಿದಿಲ್ಲ. ಹಿಂದೂಗಳು ಗುಲಾಮರಲ್ಲ. ಇಂದು ಜಗತ್ತು ನಮ್ಮ ಪ್ರಾಚೀನ ಜ್ಞಾನದ ಗಂಭೀರ ಅಗತ್ಯತೆಯನ್ನು ಮನಗಂಡಿದೆ. ಮನುಕುಲದ ಅಸ್ತಿತ್ವ ಇರುವವರೆಗೂ ಧರ್ಮದ ಪಾಲನೆಯಾಗುತ್ತದೆ ಎಂದು ಭಾಗವತ್ ಅಭಿಪ್ರಾಯಪಟ್ಟರು.

Rousing welcome for Shri Mohan Bhagwat, RSS Sarsanghchalak at pic.twitter.com/N3vhvCW9M4

— World Hindu Congress (@WHCongress)

ಪ್ರತಿಯೊಬ್ಬ ಹಿಂದೂವಿಗೂ ಹಿಂದೂ ಧರ್ಮದ ಮೌಲ್ಯಗಳ ಅರಿವಿದೆ. ಆದರೆ ಅದರ ಸದ್ಬಳಕೆ ಆಗಬೇಕಿದೆಯಷ್ಟೇ ಎಂದು ಭಾಗವತ್ ಪರೋಕ್ಷವಾಗಿ ಹಿಂದೂಗಳಿಗೆ ಕಿವಿ ಮಾತು ಹೇಳಿದರು. ನಾವು ಯಾರ ಮೇಲೂ ಪ್ರಾಬಲ್ಯವನ್ನೂ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿಲ್ಲ. ಪ್ರಭಾವ ಬೀರಿ ಜಯ ಸಾಧಿಸುವ ಅಗತ್ಯವೂ ಇಲ್ಲ ಎಂದು ಭಾಗವತ್ ಮಾರ್ಮಿಕವಾಗಿ ನುಡಿದರು.

ಇನ್ನು ಕಾರ್ಯಕ್ರಮದ ಆಯೋಜಕ ಸ್ವಾಮಿ ವಿಜ್ಞಾನನಂದ ಗುರೂಜೀ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ಪ್ರತಿಯೊಬ್ಬ ಹಿಂದೂ ಕೂಡ ಸಿದ್ಧವಾಗಬೇಕಿದ್ದು, ತ್ರಿಶೂಲ ಹಿಡಿದು ಸೈನಿಕನಂತೆ ಘರ್ಜಿಸಬೇಕಾದ ಸಂದರ್ಭ ಬಂದಿದೆ ಎಂದು ಹೇಳಿದರು.

ವಿಶ್ವದಾದ್ಯಂತ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿ ಖಂಡನಾರ್ಹ ಎಂದು ವಿಜ್ಞಾನನಂದ ಗುರೂಜೀ ಹೇಳಿದರು.

ಇನ್ನು ವಿಶ್ವ ಹಿಂದೂ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಸಂದೇಶ ಕಳುಹಿಸಿದ್ದು, ಹಿಂದೂ ಧರ್ಮದ ಉದಾತ್ತ ಚಿಂತನೆಗಳನ್ನು ವಿಶ್ವಕ್ಕೆ ತಲುಪಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅತ್ಯಂತ ಪರಿಣಾಮ ಕಾರಿ ಮಾರ್ಗ ಎಂದು ಹೇಳಿದ್ದಾರೆ.

ಇನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಎರಡನೇ ವಿಶ್ವ ಹಿಂದೂ ಸಮ್ಮೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ 7 ವಿವಿಧ ವೇದಿಕೆಗಳಲ್ಲಿ ಏಕಕಾಲಕ್ಕೆ 7 ವಿಷಯಗಳ ಬಗ್ಗೆ ವಿಶ್ವದೆಲ್ಲೆಡೆಯಿಂದ ಆಗಮಿಸಿರುವ ಗಣ್ಯರಿಂದ ಉಪನ್ಯಾಸ ಹಾಗೂ ಚರ್ಚಾ ಕಾರ್ಯಾಗಾರಗಳು ನಡೆಯಲಿವೆ.

ವಿಶ್ವ ಹಿಂದೂ ಆರ್ಥಿಕ ಕಾರ್ಯಾಗಾರ, ಹಿಂದೂ ಶಿಕ್ಷಣ ಸಮ್ಮೇಳನ, ಹಿಂದೂ ಮಹಿಳಾ ಸಮ್ಮೇಳನ, ಹಿಂದೂ ಸಾಂಸ್ಥಿಕ ಸಮ್ಮೇಳನ, ಹಿಂದೂ ಯುವ ಸಮ್ಮೇಳನ, ಹಿಂದೂ ಮಾಧ್ಯಮ ಸಮ್ಮೇಳನ, ಹಿಂದೂ ರಾಜಕೀಯ ಸಮ್ಮೇಳನ ಎಂದು ಈ ಕಾರ್ಯಾಗಾರಗಳನ್ನು ವಿಂಗಡಿಸಲಾಗಿದೆ.

ಇನ್ನು ಸಮ್ಮೇಳನದಲ್ಲಿ ಪ್ರಮುಖವಾಗಿ ರಿಪಬ್ಲಿಕ್ ಆಫ್ ಸುರಿನಾಮ್ ದೇಶದ ಉಪರಾಷ್ಟ್ರಪತಿ ಅಶ್ವಿನ್ ಅಧೀನ್, ಬಾಲಿವುಡ್‌ನ ಖ್ಯಾತ ತಾರೆ ಅನುಪಮ್ ಖೇರ್, ನಿರ್ದೇಶಕ ಮಧುರ್ ಭಂಡಾರ‌ಕರ್, ಭಾರತ ಮೂಲದ ಅಬು ದಾಬಿಯ ಖ್ಯಾತ ಉದ್ಯಮಿ ಬಿ.ಆರ್. ಶೆಟ್ಟಿ, ಚಿನ್ಮಯ ಮಿಶನ್ ನ ಸ್ವಾಮಿ ಸ್ವರೂಪಾನಂದ, ಬೆಂಗಳೂರು ಇಸ್ಕಾನ್ ಸಂಸ್ಥೆಯ ಮಧು ಪಂಡಿತ್ ದಾಸ, ವಿಶ್ವ ಹಿಂದೂ ಪರಿಷತ್ ಅಮೆರಿಕ ಅಧ್ಯಕ್ಷ ಅಭಯ್ ಆಸ್ಥಾನ, ಅಮೆರಿಕ ಮೂಲದ ವಿಶ್ವಖ್ಯಾತ ಸಂಸ್ಕತ ವಿದ್ವಾಂಸ ಡಾ.ಡೇವಿಡ್ ಫ್ರಾಲೆ, ಕರ್ನಾಟಕದ ಡಾ.ವಿಜಯಲಕ್ಷ್ಮೀ ದೇಶಮಾನೆ, ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಾ. ಮೀನಾ ಚಂದಾವರ್ಕರ್ ಸೇರಿದಂತೆ ವಿಶ್ವದ ನಾನಾ ಹಿಂದೂ ಸಂಘಟನೆಯ ಮುಖ್ಯಸ್ಥರು, ಹಿಂದೂ ಸಂಸ್ಥೆಗಳ ಪ್ರಮುಖರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಈ ಸಮ್ಮೇಳನಕ್ಕೆ ಅಮೆರಿಕ ಮಾತ್ರವಲ್ಲದೇ ಭಾರತ, ಜಪಾನ್, ಕೆನಡಾ, ಇಂಗ್ಲೆಂಡ್, ಜರ್ಮನಿ, ಮುಸಾಂಬಿಕ್, ಕೆರೆಬಿಯನ್ ದ್ವೀಪ ರಾಷ್ಟ್ರಗಳು, ಐರೋಪ್ಯ ದೇಶಗಳು ಸೇರಿದಂತೆ ಒಟ್ಟು 60 ದೇಶಗಳಿಂದ ಸುಮಾರು 2500 ಜನ ಪ್ರತಿನಿಧಿಗಳು ಭಾಗವಿಸಿದ್ದಾರೆ.

ಇನ್ನು ಎರಡನೇ ವಿಶ್ವ ಹಿಂದೂ ಸಮ್ಮೇಳನದ ವಿರುದ್ಧ ಸಭಾಂಗಣದಲ್ಲೇ ಪ್ರತಿಭಟನೆ ನಡೆದ ಘಟನೆ ಕೂಡ ನಡೆಯಿತು. ಸಭೆಯಲ್ಲಿ ಹಾಜರಿದ್ದ ಇಬ್ಬರು ಮಹಿಳೆಯರು ಏಕಾಏಕಿ ಆರ್‌ಎಸ್‌ಎಸ್‌ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.

ಆರ್‌ಎಸ್‌ಎಸ್ ಮತ್ತು ಪ್ರಸ್ತುತ ಕೇಂದ್ರ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುತ್ತಿದ್ದು, ನಮಗೆ ಇಂತಹ ಫ್ಯಾಸಿಸ್ಟ್ ಸರ್ಕಾರ ಬೇಡ ಎಂದು ಮಹಿಳೆಯರು ಘೋಷಣೆ ಕೂಗಿದರು. ಕೂಡಲೇ ಇಬ್ಬರೂ ಮಹಿಳೆಯರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಸುಗಮ ಸಮ್ಮೇಳನಕ್ಕೆ ಅವಕಾಶ ಮಾಡಿ ಕೊಟ್ಟರು.

ಇದೇ ವೇಳೆ ಎರಡನೇ ವಿಶ್ವ ಹಿಂದೂ ಸಮ್ಮೇಳನಕ್ಕೆ ಸಿಖ್ ಸಂಘಟನೆಗಳೂ ಕೂಡ ಪ್ರತಿರೋಧ ವ್ಯಕ್ತಪಡಿಸಿದ್ದು, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಭಾಷಣದಲ್ಲಿ ಸಿಖ್ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹಿಂದೂ ಧರ್ಮ ಸಿಖ್ ಧರ್ಮಕ್ಕಿಂತ ಶ್ರೇಷ್ಠ ಎಂಬ ಧಾಟಿಯಲ್ಲಿ ಇಬ್ಬರೂ ನಾಯಕರು ಮಾತನಾಡಿದ್ದು, ಇದು ಸಿಖ್ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರ ಹಾಕಿದರು.

click me!