
ಮುಂಬೈ (ಡಿ.28): 7 ಮಂದಿಯನ್ನು ಬಲಿಪಡೆದ 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರ ಮೇಲೆ ವಿಶೇಷ ಎನ್‌ಐಎ ನ್ಯಾಯಾಲಯ ದೋಷಾರೋಪ ಹೊರಿಸಿದೆ.
ಆದರೆ ‘ಮೋಕಾ’ ಪ್ರಕರಣದ ಅಡಿಯಲ್ಲಿ ಇವರ ಮೇಲೆ ದೋಷಾರೋಪವನ್ನು ಕೋರ್ಟು ಹೊರಿಸಿಲ್ಲ. ಇದರ ಬದಲು ಸಾಧ್ವಿ, ಪುರೋಹಿತ್ ಸೇರಿ 8 ಆರೋಪಿಗಳು ಭಯೋತ್ಪಾದನಾ ನಿಗ್ರಹ ಕಾನೂನಿನಡಿ ವಿಚಾರಣೆ ಎದುರಿಸಬೇಕಿದೆ. ಸುಧಾಕರ್ ದ್ವಿವೇದಿ, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಸುಧಾಕರ್ ಚತುರ್ವೇದಿ ಮತ್ತು ಅಜಯ್ ಕುಮಾರ್ ಇತರ ಆಪಾದಿತರು.
ಮುಂದಿನ ವರ್ಷದ ಜ.15ರಂದು ತನ್ನ ಮುಂದೆ ಹಾಜರಾಗಬೇಕು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ನಿರ್ದೇಶನ ನೀಡಿದೆ. ಆದರೆ ಸಾಧ್ವಿ ಪ್ರಜ್ಞಾ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂಬ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ‘ಸ್ಫೋಟಕ್ಕೆ ತನ್ನ ಬೈಕ್ ಬಳಕೆಯಾಗುತ್ತಿದೆ ಎಂಬ ಮಾಹಿತಿ ಸಾಧ್ವಿಗೆ ಇತ್ತು’ ಎಂದು ಹೇಳಿದೆ.
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಮಾಲೇಗಾಂವ್‌ನಲ್ಲಿ 2008ರ ಸೆ.29ರಂದು ಮೋಟರ್ ಬೈಕ್‌ನಲ್ಲಿಡಲಾಗಿದ್ದ ಬಾಂಬ್ ಸ್ಫೋಟದಿಂದಾಗಿ 7 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಈ ಘಟನೆಯಲ್ಲಿ ಸುಮಾರು 100 ಮಂದಿ ಗಾಯಗೊಂಡಿದ್ದರು. ಇದಾದ ಕೆಲವು ದಿನಗಳ ಬಳಿಕ ಈ ಸಂಬಂಧ ಸಾಧ್ವಿ ಪ್ರಜ್ಞಾಸಿಂಗ್ ಮತ್ತು ಪುರೋಹಿತ್‌ರನ್ನು ಬಂಧಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.