
ಬೆಂಗಳೂರು : ತಾನೊಬ್ಬ ದೊಡ್ಡ ಬಾಲಿವುಡ್ ನಟನಾಗಬೇಕು ಎಂಬ ಆಸೆಯಲ್ಲಿ ಉತ್ತರಾಂಚಲದ ಹಳ್ಳಿಯೊಂದರಿಂದ2006 ರಲ್ಲಿ ಮನೆಬಿಟ್ಟು ಬಂದ ಹುಡುಗ ರಮೇಶ್ ಧಾಮಿ. ಈಗ ಈತನಿಗೆ 22 ರ ಹರೆಯ. ಬಂದ ಹೊಸತರಲ್ಲಿ ಇರಲು ನೆಲೆಯಿಲ್ಲ, ಕೈಯಲ್ಲಿ ಕಾಸಿಲ. ಚುರುಗುಡುವ ಹೊಟ್ಟೆಯಲ್ಲಿ ಕಳೆದ ದಿನಗಳೆಷ್ಟೋ. ಕೊನೆಗೆ ಎನ್‌ಜಿಓ ಒಂದರಲ್ಲಿ ಕೆಲಸ ಸಿಕ್ಕಿತು. ಅಲ್ಲಿಗೆ ಸೇರಿದ ಮೇಲೆ ಮ್ಯಾರಥಾನ್ ಓಟದ ಹುಚ್ಚು ಹತ್ತಿತು.
ಪ್ರತಿನಿತ್ಯ ಮುಂಬೈನ ಪ್ರಿಯದರ್ಶಿನಿ ಪಾರ್ಕ್‌ನಲ್ಲಿ ರನ್ನಿಂಗ್ ಪ್ರಾಕ್ಟೀಸ್ ಮಾಡುವುದು ಅಭ್ಯಾಸವಾಯಿತು. ಆಗ ಪರಿಚಯ ಆದವನೇ ಶ್ರೀಯಾನ್ಸ್ ಭಂಡಾರಿ. 23ರ ಹರೆಯ ಹುಡುಗ. ಉದಯಪುರದಿಂದ ಪಿಯುಸಿ ಮುಗಿಸಿ ಮುಂಬೈಗೆ ಬಂದವ. ಸಮಾನ ಮನಸ್ಕರಾಗಿದ್ದ ಇವರಿಗೆ ಕ್ಲೋಸ್ ಫ್ರೆಂಡ್ಸ್ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಪ್ರತೀ ಸಂಜೆ ಸ್ನೇಹಿತರಿಬ್ಬರೂ ಭೇಟಿಯಾಗುತ್ತಿದ್ದರು. ಓಟದಲ್ಲಿ ಬಹಳ ಸಾಧನೆ ಮಾಡುತ್ತಿದ್ದ ಕಾರಣ ಅವರಿಬ್ಬರಿಗೂ ವರ್ಷಕ್ಕೆ ಮೂರ್ನಾಲ್ಕು ಶೂಗಳು ಬೇಕಾಗುತ್ತಿದ್ದವು.
ಐಡಿಯಾ ಹುಟ್ಟಿಕೊಂಡಿದ್ದು ಹೀಗೆ..
ಧಾಮಿ ಬಡತನದ ಹಿನ್ನೆಲೆಯಿಂದ ಬಂದವನು. ಬಾಲ್ಯದಲ್ಲೆಂದೂ ಶೂ ಕಂಡವನಲ್ಲ. ಹೀಗಾಗಿ ಒಂದು ದಿನ ತನ್ನ ಹಳೆಯ ಶೂನ ಸೋಲ್ ಅನ್ನು ಕಿತ್ತು ಅದಕ್ಕೆ ರಬ್ಬರ್ ಹಗ್ಗವನ್ನು ಕಟ್ಟಿ ಚಪ್ಪಲಿ ಥರ ಮಾಡಿಕೊಂಡು ಆ ಚಪ್ಪಲಿಯನ್ನು ಹಾಕಿಕೊಂಡು ಬಂದಿದ್ದ. ಆ ಚಪ್ಪಲಿ ಶ್ರೀಯಾನ್ಸ್ ಕಣ್ಣಿಗೆ ಬಿತ್ತು. ಅವನಿಗೋ ಅಚ್ಚರಿ. ತಕ್ಷಣ ಐಡಿಯಾ ಹೊಳೆಯಿತು.
ಇದೇ ರೀತಿ ಬಳಸಿ ಹಳೆಯದಾದ, ಹರಿದ ಶೂಗಳ ಸೋಲ್ ಅನ್ನು ಬಳಸಿಕೊಂಡು ಚಪ್ಪಲಿ ಮಾಡಬಾರದ್ಯಾಕೆ ಅನ್ನುವ ಐಡಿಯಾ. ಸಾಮಾನ್ಯವಾಗಿ ಶೂಗಳ ಮೇಲ್ಭಾಗ ಹರಿದು ಹೋದಾರ ಸೋಲ್ ಮಾತ್ರ ಏನೂ ಆಗುವುದಿಲ್ಲ. ಸೋಲ್ ಸರಿ ಇದ್ದರೂ ಹರಿದ ಶೂಗಳನ್ನು ಜನ ಬಿಸಾಕುತ್ತಾರೆ. ಅದನ್ನು ಬಳಸಿಕೊಂಡರೆ ಎಷ್ಟೊಂದು ಚಪ್ಪಲಿ ಮಾಡಬಹುದು ಅನ್ನಿಸಿತು.
ಕಡಿಮೆ ಎಂದರೂ ವಿಶ್ವಾದ್ಯಂತ 35 ಕೋಟಿ ಜೊತೆ ಶೂಗಳು ಒಂದು ವರ್ಷದಲ್ಲಿ ಬಳಸಿ ಎಸೆಯಲ್ಪಡುತ್ತವೆ. ವಿಪರ‌್ಯಾಸ ಅಂದರೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವಾದ್ಯಂತ ಅಂದಾಜು 1 ಕೋಟಿ 50 ಲಕ್ಷದಷ್ಟು ಜನರಿಗೆ ತೊಡಲು ಚಪ್ಪಲಿ ಇಲ್ಲ. ಅಂಥ ವರಿಗಾದರೂ ಈ ಚಪ್ಪಲಿಗಳ ಮರುಬಳಕೆಯಿಂದ ಉಪಯೋಗವಾಗಬಹುದಲ್ವಾ ಅಂತ ಅನ್ನಿಸಿದ್ದೇ ತಡ ಈಥರ ಚಪ್ಪಲಿ ತಯಾರಿಸಿ ಹಳ್ಳಿಯ ಗುಡ್ಡಗಾಡು ಪ್ರದೇಶಗಳ ವಾಸಿಸುವ ಪುಟ್ಟ ಮಕ್ಕಳ ಪಾದ ನೋಯದಂತೆ ಮಾಡಲು ಚಪ್ಪಲಿ ತಯಾರಿಸುವ ಮಹತ್ ಕಾರ್ಯಕ್ಕೆ ಮುನ್ನುಡಿ ಬರೆದರು.
ಗ್ರೀನ್ ಸೋಲ್‌ಗೆ ಹಸಿರು ನಿಶಾನೆ
ಗೆಳೆಯರಿಬ್ಬರೂ ಪಾರ್ಕ್‌ನಲ್ಲಿ ಒಂದು ಬಾಕ್ಸ್ ಇಟ್ಟರು. ಬಳಸಿ ಬೇಡವಾದ ಶೂಗಳನ್ನು ಇಲ್ಲಿ ಹಾಕಿ. ನಾವು ಮರುಬಳಕೆ ಮಾಡಿ ಕೊಳ್ಳುತ್ತೇವೆ ಎಂಬ ಬೋರ್ಡ್. ಎಲ್ಲೆಲ್ಲೋ ಎಸೆಯುವ ಶೂಗಳನ್ನು ಜನ ಈ ಬಾಕ್ಸ್‌ನಲ್ಲಿ ತಂದು ಗುಡ್ಡೆ ಹಾಕಿದರು. ತಿಂಗಳುಗಳಲ್ಲೇ ಬಳಸಿದ ಶೂಗಳು ರಾಶಿಬಿದ್ದವು.
ಸಾಕಷ್ಟು ಶೂಗಳ ಸಂಗ್ರಹವಾದ ಬಳಿಕ 2015 ರಲ್ಲಿ ಗೆಳೆಯರಿಬ್ಬರೂ ಗ್ರೀನ್ ಸೋಲ್ ಹೆಸರಿನ ಹೊಸ ಕಂಪೆನಿಯನ್ನು ರಿಜಿಸ್ಟರ್ ಮಾಡಿದರು. ಶೂಗಳ ಮರು ಬಳಕೆ ಮಾಡಿ ಕಾರ್ಪೊರೇಟ್ ಕಂಪೆನಿ, ಎನ್‌ಜಿಓಗಳ ಮೂಲಕ ಅವುಗಳನ್ನು ಹಳ್ಳಿಯ, ಗುಡ್ಡಗಾಡಿನ ಬಡಮಕ್ಕಳಿಗೆ ಹಂಚಲು ನಿರ್ಧರಿಸಲಾಯ್ತು. ಜೊತೆಗೆ ರೀಟೈಲ್ ಮಳಿಗೆಗಳಲ್ಲೂ ಈ ಚಪ್ಪಲಿಗಳನ್ನು ಸೇಲ್‌ಗಿಡುವುದು ಎಂದು ತೀರ್ಮಾನಿಸಲಾಯ್ತು. 2023 ರ ವೇಳೆಗೆ ದೇಶದ ಯಾವೊಂದು ಶಾಲಾ ಮಗುವೂ ಚಪ್ಪಲಿವಂಚಿತವಾಗಬಾರದು ಎಂಬ ಪ್ರತಿಜ್ಞೆ ಮಾಡಿದರು ಗೆಳೆಯರಿಬ್ಬರು.
ಮೊದಲ ಆರ್ಡರ್ ಸಿಕ್ಕಿತು, ಆದರೆ..
ಕಂಪೆನಿ ಆರಂಭಿಸಿದ ಕೆಲವೇ ದಿನಗಳಲ್ಲಿ ಮೊದಲ ವ್ಯವಹಾರ ಕುದುರಿತು. ಮುಂಬೈನ ರಿಯಲ್ ಎಸ್ಟೇಟ್ ಕಂಪೆನಿ ಜೆಎಲ್‌ಎಲ್ ತನ್ನ ಸಮಾಜ ಸೇವೆಯ ವಿಭಾಗದಲ್ಲಿ ಗ್ರೀನ್‌ಸೋಲ್‌ನಿಂದ ಐನೂರು ಜೊತೆ ಚಪ್ಪಲಿ ಖರೀದಿಸಲು ಮುಂದಾಯಿತು. ಮುಂಬೈನ ಕುರ್ಲಾದಲ್ಲಿ 100 ಸ್ಕ್ವೇರ್ ಫೀಟ್ ಜಾಗ ಬಾಡಿಗೆಗೆ ಪಡೆದು ಗ್ರೀನ್‌ಸೋಲ್ ಕಾರ್ಯಾಚರಣೆ ಶುರುವಾಯ್ತು. ಆದರೆ ಇವರ 2023 ರ ಕನಸಿನ ಬೃಹತ್ ಯೋಜನೆಗೆ ಈ ಜಾಗ ಬಹಳ ಕಿರಿಯದಾಯ್ತು.
ಗೆಳೆಯರಿಬ್ಬರೂ ಮುಂಬೈನ್ ಪ್ರಸಿದ್ಧ ಶೂ ತಯಾರಿಕಾ ಕಂಪೆನಿ ರಾಮ್ ಫ್ಯಾಶನ್ ಎಕ್ಸ್‌ಪೋರ್ಟ್ ಅನ್ನು ಸಂಪರ್ಕಿಸಿದರು. ಮೊದಲಿಗೆ ಗಾರ್ಡ್‌ಗಳಿಂದ ಕಂಪೆನಿಯೊಳಗೆ ಪ್ರವೇಶ ಪಡೆಯುವುದೇ ಕಷ್ಟವಾಯ್ತು. ಕೊನೆಗೂ ಕಂಪೆನಿ ನಿರ್ದೇಶಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ತಾವು ಸಂಗ್ರಹಿಸುವ ಹಳೆಯ ಶೂಗಳನ್ನು ಈ ಕಂಪೆನಿಯಲ್ಲಿ ಮರು ವಿನ್ಯಾಸಗೊಳಿಸಲು ಅವಕಾಶ ನೀಡುವಂತೆ ಕೋರಿದರು. ದೈತ್ಯ ಕಂಪೆನಿಯ ಮುಖ್ಯಸ್ಥರಿಗೆ ಈ ಹುಡುಗರ ಉತ್ಸಾಹ ಕಂಡು ಇಲ್ಲ ಅನ್ನಲಾಗಲಿಲ್ಲ.
ಎಲ್ಲ ಬಗೆಯ ಸಹಕಾರ ನೀಡಲು ರಾಮ್ ಫ್ಯಾಶನ್ ಎಕ್ಸ್‌ಪೋರ್ಟ್ ಮುಂದಾಯ್ತು. ಹೀಗೆ ಬೃಹತ್ ಪ್ರಮಾಣದಲ್ಲಿ ಬಳಸಿ ಎಸೆದ ಶೂಗಳ ಪುನರ್ಬಳಕೆ, ರಾಮ್ ಎಕ್ಸ್ ಪೋರ್ಟ್ ಕಂಪೆನಿಯ ಘಟಕದಿಂದಲೇ ಆರಂಭವಾಗಿ ಯಶಸ್ವಿಯಾಗಿ ಮುಂದುವರಿಯಿತು. ಮೊದಲ ಪ್ರಯತ್ನದಲ್ಲೇ 70 ಲಕ್ಷ ಆದಾಯ ಶಕ್ತಿಮೀರಿದ ದುಡಿಮೆಯಿಂದ 2017 ರಲ್ಲಿ ಗ್ರೀನ್ ಸೋಲ್ ಕಂಪೆನಿ 35000 ಜೊತೆ ಚಪ್ಪಲಿಗಳನ್ನು ತಯಾರಿಸಿ ಪೂರೈಕೆ ಮಾಡಿತು.
ವರ್ಷಾಂತ್ಯಕ್ಕೆ 70,000 ಜೊತೆ ಚಪ್ಪಲಿ ಪೂರೈಸುವ ಗುರಿ ಹೊಂದಿ ಯಶಸ್ವಿಯಾಯಿತು. ಅತಿ ಕಡಿಮೆ ಬಂಡವಾಳದಿಂದ 2015 - 2016ನೇ ಸಾಲಿನಲ್ಲಿ 20 ಲಕ್ಷಗಳಷ್ಟು ಆದಾಯ ಬಂತು. 2017ನೇ ಹಣಕಾಸು ವರ್ಷದಲ್ಲಿ ಇದು 71 ಲಕ್ಷಗಳಿಗೇರಿತು. ಒಟ್ಟು ಆದಾಯದಲ್ಲಿ ಶೇ.40 ರಷ್ಟು ಆದಾಯ ಕಾರ್ಪೋರೇಟ್ ಕಂಪೆನಿಗಳ ಸಮಾಜಸೇವಾ ವಿಭಾಗಗಳಿಂದ ಬಂದರೆ, ಶೇ.30 ರಷ್ಟು ಆದಾಯ ಪುನರ್ಬಳಕೆಯಿಂದ ಬರುತ್ತಿದೆ. ಗ್ರೀನ್‌ಸೋಲ್‌ನಿಂದ ತಯಾರಿಸಿದ ಚಪ್ಪಲಿಗಳನ್ನು ಔಟ್‌ಲೆಟ್‌ಗಳಿಗೂ ಪೂರೈಸುವ ಕಾರಣ ಉಳಿದ ಆದಾಯ ಅದರಿಂದ ಬರುತ್ತದೆ. ಗ್ರೀನ್ ಸೋಲ್ ಕಂಪೆನಿಯನ್ನು ರೀಲಾಂಚ್ ಮಾಡುವ ಐಡಿಯವೂ ಇದೆ ಎನ್ನುತ್ತಾರೆ ಗ್ರೀನ್‌ಸೋಲ್‌ನ ಸ್ಥಾಪಕರಲ್ಲೊಬ್ಬರಾದ ರಮೇಶ್ ಧಾಮಿ.
ಕಂಪನಿ ವೆಬ್‌ಸೈಟ್:: http://www.greensole.in/
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.