
ಬೆಂಗಳೂರು(ಸೆ.22): ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ದೋಷ ಇನ್ನಿತರೆ ಕಾರಣಗಳಿಂದ ಬಸ್‌ಗಳು ನಡುರಸ್ತೆಯಲ್ಲಿ ಕೈ ಕೊಡುತ್ತಿರುವ ಘಟನೆಗಳ ಹೆಚ್ಚಾಗುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ನಿದ್ದೆಗೆಡಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿಯು ಪದೇ ಪದೇ ಸಮಸ್ಯೆಗೆ ಕಾರಣವಾಗುತ್ತಿರುವ ಬಸ್‌ಗಳಿಗೆ ‘ಗುಜರಿ ಭಾಗ್ಯ’ ಕರುಣಿಸಲು ನಿರ್ಧರಿಸಿದೆ.
ನಗರದ ಸುಮಾರು 52 ಲಕ್ಷ ಮಂದಿ ನಿತ್ಯ ಬಿಎಂಟಿಸಿ ಬಸ್ ಗಳಲ್ಲಿ ಸಂಚರಿಸುತ್ತಾರೆ. ನಿಗಮದ ವ್ಯಾಪ್ತಿಯಲ್ಲಿ 45 ಘಟಕಗಳಿದ್ದು, ವೋಲ್ವೋ ಬಸ್‌ಗಳು ಸೇರಿದಂತೆ 6500 ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಹಾಲಿ ನಷ್ಟದಲ್ಲಿರುವ ಬಿಎಂಟಿಸಿಯು ಆದಾಯದ ಹಳಿಗೆ ಮರಳಲು ಪ್ರಯತ್ನಿಸುತ್ತಿದೆ. ಈ ನಡುವೆ ಕೆಲ ಬಸ್‌ಗಳು ಆಗಾಗ ತೊಂದರೆಗೆ ಒಳಗಾಗುತ್ತಿರುವುದು ನಿಗಮಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಡಕೋಟಾ ಬಸ್‌ಗಳಿಗೆ ಮುಕ್ತಿ ನೀಡಲು ಮುಂದಾಗಿದೆ.
ನಿಯಮದ ಪ್ರಕಾರ 8ರಿಂದ 10 ಲಕ್ಷ ಕಿಲೋ ಮೀಟರ್ ಸಂಚಾರ ಪೂರೈಸಿರುವ ಹಾಗೂ ೧೦ ವರ್ಷ ಸಂಚರಿಸಿರುವ ಸುಮಾರು 1300 ಬಸ್‌ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಹೊಸ ಬಸ್ ಖರೀದಿ ಪ್ರಕ್ರಿಯೆ ಚುರುಕುಗೊಳಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ.
ಅಧಿಕಾರಿಗಳಿಗೆ ಖಡಕ್ ಸೂಚನೆ:
ತಾಂತ್ರಿಕ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ಅವಘಡಗಳು ನಡೆಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆಗೆ ಪರಿಹಾರ ಹುಡುಕಲು ತೀರ್ಮಾನಿಸಿದ್ದೇವೆ. ಈಗಾಗಲೇ ನಿಗದಿತ ಕಿಲೋ ಮೀಟರ್ ಪೂರೈಸಿರುವ 1300 ಬಸ್‌ಗಳನ್ನು ಗುರುತಿಸಿದ್ದು, ಗುಜರಿಗೆ ಹಾಕಲು ನಿರ್ಧರಿಸಿದ್ದೇವೆ. ಉಳಿದ ಬಸ್‌ಗಳನ್ನು ತಪಾಣೆಗೆ ಒಳಪಡಿಸಿ ದೋಷಗಳನ್ನು ಸರಿಪಡಿಸುವಂತೆ 45 ಘಟಕಗಳ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ರಾತ್ರಿ ವೇಳೆ ಖುದ್ದು ಘಟಕಗಳಿಗೆ ಭೇಟಿ ನೀಡಿ ತಾಂತ್ರಿಕ ಸಿಬ್ಬಂದಿಯ ಕಾರ್ಯ ವೈಖರಿ ಪರಿಶೀಲಿಸುತ್ತಿದ್ದೇನೆ. ಮುಂದೆ ಈ ರೀತಿಯ ಸಮಸ್ಯೆಗಳು ಉಂಟಾಗದಂತೆ ಎಚ್ಚರ ವಹಿಸುವಂತೆ ಖಡಕ್ ಸೂಚನೆ ನೀಡಿದ್ದೇನೆ. ಒಂದು ವೇಳೆ ಈ ರೀತಿಯ ಘಟನೆಗಳು ಮರುಕಳಿಸಿದರೆ ಸಂಬಂಧ ವಿಭಾಗದ ಮುಖ್ಯಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ವರದಿ: ಮೋಹನ್ ಹಂಡ್ರಂಗಿ, ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.