
ಬೆಂಗಳೂರು [ಜು.08] : ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ 13 ಶಾಸಕರು ರಾಜೀನಾಮೆ ನೀಡಿದ ಬಳಿಕ ಆ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸೋಮವಾರ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.
ಎಷ್ಟು ಶಾಸಕರು ರಾಜೀನಾಮೆ ನೀಡಬಹುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸುಮಾರು 12 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಮುಂಬೈಯಲ್ಲಿ ರುವ ಹಾಗೂ ಈಗಾಗಲೇ ತಮ್ಮ ರಾಜೀನಾಮೆ ನೀಡಿರು ವ ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ ಹೇಳಿದ್ದಾರೆ.
ಹಾಗೆ ನೋಡಿದರೆ ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಅವರು ಅನ್ಯ ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿ ಇರುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಆದರೆ, ಮಂಗಳವಾರ ಸ್ಪೀಕರ್ ವಿಧಾನಸೌಧಕ್ಕೆ ಆಗಮಿಸಿ ಈಗ ರಾಜೀನಾಮೆ ನೀಡಿರುವವರ ಪ್ರಕ್ರಿಯೆ ಗಮನಿಸು ತ್ತೇನೆ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಹಿಂದಿನ ತಂಡ ಮಾಡಿದಂತೆ ಸೋಮವಾರ ಇನ್ನಷ್ಟು ಶಾಸಕರು ವಿಧಾನಸಭೆಯ ಕಾರ್ಯದರ್ಶಿಗಳಿಗೇ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಆದರೆ, ಶನಿವಾರದಿಂದ ಭಾನುವಾರ ರಾತ್ರಿವರೆಗೆ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಉಭಯ ಮಿತ್ರ ಪಕ್ಷಗಳು ಎಲ್ಲ ರೀತಿಯ ಕಸರತ್ತನ್ನೂ ನಡೆಸುತ್ತಿರು ವುದರಿಂದ ರಾಜೀನಾಮೆ ನೀಡಬೇಕು ಎಂದುಕೊಂಡ ಶಾಸಕರು ಹಿಂದೆ ಸರಿಯುತ್ತಾರಾ ಎಂಬುದನ್ನು ಕಾದು ನೋಡಬೇಕು.
ಈಗಾಗಲೇ 13 ಶಾಸಕರ ರಾಜೀನಾಮೆಯಿಂದ ಸರ್ಕಾರ ಬಹುಮತದ ಕಳೆದುಕೊಳ್ಳುವ ಅಂಚಿಗೆ ಬಂದು ನಿಂತಿದೆ. ಇನ್ನಿಬ್ಬರು ರಾಜೀನಾಮೆ ನೀಡಿದಲ್ಲಿ ಅಲ್ಪಮತಕ್ಕೆ ಕುಸಿಯಲಿದೆ. ಹಾಗೊಂದು ವೇಳೆ ಮಿತ್ರ ಪಕ್ಷಗಳ ಎಲ್ಲ ಪ್ರಯತ್ನಗಳ ನಡುವೆಯೂ ಶಾಸಕರು ಹೆಚ್ಚಿನ ಸಂಖ್ಯೆ ಯಲ್ಲಿ ರಾಜೀನಾಮೆ ನೀಡಿದಲ್ಲಿ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
ಇಂಥ ಶಾಸಕರೇ ರಾಜೀನಾಮೆ ನೀಡುತ್ತಾರೆ ಎಂಬ ಮಾಹಿತಿ ಇಲ್ಲದಿದ್ದರೂ ಉಭಯ ಪಕ್ಷಗಳಿಂದ ಹಲವು ಶಾಸಕರು ತೇಲಿಬರುತ್ತಿವೆ. ಕಾಂಗ್ರೆಸ್‌ನಿಂದ ಸಚಿವ ರಹೀಂ ಖಾನ್, ಸೌಮ್ಯರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಅಂಜಲಿ ನಿಂಬಾಳ್ಕರ್, ಶ್ರೀಮಂತ್ ಪಾಟೀಲ್, ಅನಿಲ್ ಚಿಕ್ಕಮಾದು, ಗಣೇಶ್ ಹುಕ್ಕೇರಿ, ಡಾ.ಕೆ.ಸುಧಾಕರ್, ಎಸ್.ಎನ್.ನಾರಾಯಣಸ್ವಾಮಿ, ಎಂ.ಕೃಷ್ಣಪ್ಪ ಮತ್ತಿತರರ ಹೆಸರುಗಳು ಪ್ರಸ್ತಾಪವಾಗಿವೆ. ಅದೇ ರೀತಿ ಜೆಡಿಎಸ್ ನಿಂದ ನಿಸರ್ಗ ನಾರಾಯಣಸ್ವಾಮಿ, ಕೆ.ಶ್ರೀನಿವಾಸಗೌಡ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ.
ಈ ನಡುವೆ ರಾಜೀನಾಮೆ ನೀಡಿರುವ ಶಾಸಕರು ತಾವು ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಭಾನುವಾರ ಸಂಜೆಯೂ ಪುನರುಚ್ಚರಿಸಿ ದ್ದಾರೆ. ಹೀಗಾಗಿ, ಸೋಮವಾರದ ಬೆಳವಣಿಗೆ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.