
ನವದೆಹಲಿ (ಫೆ.06): ಇನ್ನು ಮುಂದೆ ಮಿತಿ ಮೀರಿದ ನಗದು ಸ್ವೀಕರಿಸುವುದು ಸುಲಭವಲ್ಲ. ಯಾವುದೇ ವ್ಯಕ್ತಿ ರೂ.3 ಲಕ್ಷ ಮೀರಿ ನಗದು ಸ್ವೀಕರಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ.
ಮಿತಿ ಮೀರಿದ ನಗದು ವಹಿವಾಟಿಗೆ ಸರ್ಕಾರ ಶೇ.100ರಷ್ಟುದಂಡ ವಿಧಿಸಲಿದೆ. ಏಪ್ರಿಲ್ 1ರಿಂದಲೇ ನೂತನ ನಿಯಮ ಜಾರಿಗೆ ಬರಲಿದೆ. ನೀವು ರೂ.4 ಲಕ್ಷ ನಗದು ಸ್ವೀಕರಿಸಿದರೆ ಅಷ್ಟೇ ಮೊತ್ತದಷ್ಟು, ಅಂದರೆ ರೂ.4 ಲಕ್ಷ ದಂಡ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ರೂ.50 ಲಕ್ಷ ನಗದು ಸ್ವೀಕರಿಸಿದರೆ ರೂ.50 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್‌ಮುಖ್ ಅಧಿಯಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ ಈ ನಿಯಮ ಸರ್ಕಾರಕ್ಕೆ, ಬ್ಯಾಂಕುಗಳಿಗೆ, ಅಂಚೆ ಕಚೇರಿ ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುವುದಿಲ್ಲ.
ವಿತ್ತ ಸಚಿವ ಅರುಣ್ ಜೇಟ್ಲಿ 2017-18 ಬಜೆಟ್‌ನಲ್ಲಿ ರೂ.3 ಲಕ್ಷ ಮೀರಿದ ನಗದು ವಹಿವಾಟನ್ನು ನಿಷೇಧಿಸುವ ಪ್ರಸ್ತಾಪ ಮಾಡಿದ್ದರು. ಕಪ್ಪು ಹಣ ಸೃಷ್ಟಿಯ ಮೂಲವಾಗಿರುವ ನಗದು ವಹಿವಾಟು ತಗ್ಗಿಸುವ ಸಲುವಾಗಿ ಈ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಜತೆಗೆ, ಈಗ ಇರುವ ರೂ.2 ಲಕ್ಷ ಮೀರಿದ ನಗದು ವಹಿವಾಟಿಗೆ ಪಾನ್ ಕಡ್ಡಾಯ ನಿಯಮವೂ ಮುಂದುವರೆಯಲಿದೆ. ಯಾವುದೇ ವ್ಯಕ್ತಿ ನಗದು ಪಾವತಿಸಿ ದುಬಾರಿ ಗೈಗಡಿಯಾರ ಖರೀದಿಸಿದರೆ, ಅದಕ್ಕೆ ಕೈಗಡಿಯಾರದ ಅಂಗಡಿ ಯಾತ ತೆರಿಗೆ ಪಾವತಿಸ ಬೇಕಾಗುತ್ತದೆ.
ದೊಡ್ಡ ಪ್ರಮಾಣದಲ್ಲಿ ನಗದು ವಹಿವಾಟು ನಡೆಸುವುದನ್ನು ತಡೆಯುವುದು ನಿಯಮದ ಮುಖ್ಯ ಉದ್ದೇಶ ಎಂದು ಹಸ್‌ಮುಖ್ ಅಧಿಯಾ ವಿವರಿಸಿದ್ದಾರೆ. ಹಳೆನೋಟು ಚಲಾವಣೆ ರದ್ದು ಮಾಡುವ ಮೂಲಕ ಕಪ್ಪುಹಣವನ್ನು ಹೊರಗೆಳೆದ ಸರ್ಕಾರ ಈಗ ಭವಿಷ್ಯದಲ್ಲಿ ಕಪ್ಪುಹಣ ಸೃಷ್ಟಿಯಾಗುವುದನ್ನು ತಡೆಯಲು ಮಿತಿ ಮೀರಿದ ನಗದು ವಹಿವಾಟಿನ ಮೇಲೆ ದಂಡ ವಿಧಿಸಲು ಮುಂದಾಗಿದೆ. ದೊಡ್ಡಮೊತ್ತದ ಎಲ್ಲಾ ನಗದು ವಹಿ ವಾಟಿನ ಮೇಲೆ ಸರ್ಕಾರ ನಿಗಾ ಇಡಲಿದೆ. ಬೃಹತ್ ಪ್ರಮಾಣದ ನಗದು ಬಳಸುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಿದೆ. ಸಾಮಾನ್ಯವಾಗಿ ದೊಡ್ಡ ಮೊತ್ತದ ನಗದು ಬಳಸಿ ವಿಲಾಸಿ ರಜೆ ಕಳೆಯುತ್ತಾರೆ, ಇಲ್ಲವೇ ಐಷಾರಾಮಿ, ಕಾರು, ಕೈಗಡಿಯಾರ ಇಲ್ಲವೇ ಆಭರಣ ಖರೀದಿಸುತ್ತಾರೆ. ನಗದು ನಿರ್ಬಂಧಿಸುವುದೆಂದರೆ ಈ ರೀತಿಯ ಐಷಾರಾಮಿ ವೆಚ್ಚಕ್ಕಿರುವ ದಾರಿಗಳನ್ನು ಮುಚ್ಚುವುದಾಗಿದೆ. ಆ ಮೂಲಕ ಜನರು ಕಪ್ಪುಹಣ ಸೃಷ್ಟಿಸುವುದನ್ನು ತಡೆಯುವುದಾಗಿದೆ ಎಂದಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಆದಾಯ ತೆರಿಗೆ ಕಾಯ್ದೆಗೆ ಸೆಕ್ಷನ್269ಎಸ್‌ಟಿಯನ್ನು ಸೇರಿಸಲು ಪ್ರಸ್ತಾಪಿಸಿದ್ದರು. ಪ್ರಸ್ತಾಪಿತ ಸೆಕ್ಷನ್259ಎಸ್‌ಟಿ, ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ 3 ಲಕ್ಷ ಅಥವಾ ಅದಕ್ಕಿಂತ ಮೊತ್ತದ ನಗದನ್ನು ಸ್ವೀಕರಿಸಬಾರದು, ಅದು ಒಂದೇ ವಹಿವಾ ಟಾಗಿರಲಿ, ಅಥವಾ ಒಂದು ವಹಿವಾಟಿಗೆ ಸಂಬಂಧಿಸಿದಂತೆ ಅಥವಾ ಒಂದು ಸಂದರ್ಭಕ್ಕೆ ಸಂಬಂಧಿಸಿಂತೆ ಇರಲಿ ಆ ವ್ಯಕ್ತಿಯಿಂದ ಸ್ವೀಕರಿಸುವಂತಿಲ್ಲ ಎಂದು ವ್ಯಾಖ್ಯಾನಿಸಿದೆ. ನವೆಂಬರ್ 8 ರಂದು ಹಳೆ ನೋಟು ಚಲಾವಣೆ ರದ್ದು ಮಾಡಿದ ನಂತರ ನಗದು ಕೊರತೆ ಉಂಟಾಗಿ ಸಮಸ್ಯೆ ಉದ್ಭವಿಸಿದಾಗ ಪ್ರಧಾನಿ ನರೇಂದ್ರಮೋದಿ ಕಡಮೆ ನಗದು ವಹಿವಾಟು ವ್ಯವಸ್ಥೆ ಜಾರಿಗೆ ತರಲು ಮಾರ್ಗೊಪಾಯಗಳನ್ನು ಶಿಫಾರಸು ಮಾಡುವಂತೆ ಚಂದ್ರಬಾಬು ನಾಯ್ಡು ನೇತೃತ್ವದ ಮುಖ್ಯಮಂತ್ರಿಗಳ ಉನ್ನತ ಮಟ್ಟದ ಸಮಿತಿ ರಚಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.