ಬರೋಬ್ಬರಿ 32 ಕೋಟಿ ರು.ನ 100 ಕೆಜಿ ಚಿನ್ನ ವಶ!

Published : Oct 29, 2018, 07:54 AM IST
ಬರೋಬ್ಬರಿ 32 ಕೋಟಿ ರು.ನ 100 ಕೆಜಿ ಚಿನ್ನ ವಶ!

ಸಾರಾಂಶ

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆ ರ್‌ಐ)ದ ಅಧಿಕಾರಿಗಳು ಕಳೆದ 2 ದಿನದ ಅವಧಿಯಲ್ಲಿ ದೇಶಾದ್ಯಂತ ವಿವಿಧ ವಿಮಾನ ಮತ್ತು ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ನಡೆಸುವ ಮೂಲಕ 100 ಕೆಜಿಯಷ್ಟು ಚಿನ್ನ ವಶಪಡಿಸಿ ಕೊಂಡಿದ್ದಾರೆ.   

ನವದೆಹಲಿ: ಚಿನ್ನ ಕಳ್ಳಸಾಗಣೆದಾರರ ಮೇಲೆ ಮುಗಿಬಿದ್ದಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆ ರ್‌ಐ)ದ ಅಧಿಕಾರಿಗಳು ಕಳೆದ 2 ದಿನದ ಅವಧಿಯಲ್ಲಿ ದೇಶಾದ್ಯಂತ ವಿವಿಧ ವಿಮಾನ ಮತ್ತು ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ನಡೆಸುವ ಮೂಲಕ 100 ಕೆಜಿಯಷ್ಟು ಭಾರೀ ಪ್ರಮಾಣದ ಚಿನ್ನ ವಶಪಡಿಸಿ ಕೊಂಡಿದ್ದಾರೆ. 

ವಶಪಡಿಸಿಕೊಂಡ ಚಿನ್ನದ ಮೌಲ್ಯ ಅಂದಾಜು 32 ಕೋಟಿ ರು. ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಮತ್ತು ಶನಿವಾರ ಸಿಲಿಗುರಿ, ದೆಹಲಿ, ಚೆನ್ನೈ, ಬೆಂಗಳೂರು, ಮದುರೈ, ಇಂದೋರ್‌ನ ರೈಲ್ವೆ ಹಾಗೂ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ತಲಾ 1 ಕೆಜಿ ತೂಕದ 100 ಚಿನ್ನದ ಬಾರ್‌ಗಳ ನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವ ವಿದೇಶಿ ಪ್ರಜೆ 7 ಜನರನ್ನು ಡಿಆರ್‌ಐ ತನ್ನ ವಶಕ್ಕೆ ಪಡೆದಿದೆ. 

ಬಲೆಗೆ: ಶುಕ್ರವಾರ ಸಂಜೆ ಸಿಲಿಗುರಿ ಬಳಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ 55 ಕೆಜಿ ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ.  ಚಾಲಕನ ಸೀಟಿನ ಕೆಳಗೆ ವಿಶೇಷವಾಗಿ ನಿರ್ಮಿಸಿದ್ದ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಿಸಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಸಿಲಿಗುರಿಯಿಂದ ಬೇರೆಡೆಗೆ ಈ ಚಿನ್ನವನ್ನು ಸಾಗಿಸುವ ಉದ್ದೇಶವಿತ್ತು ಎಂದು ಗೊತ್ತಾಗಿದೆ. 

ಇನ್ನು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಮೂವರು ವ್ಯಕ್ತಿಗಳಿಂದ ತಲಾ ಒಂದು ಕೆಜಿ ತೂಕದ ೩೪ ಚಿನ್ನದ ಬಾರ್‌ಗಳನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಚೆನ್ನೈ, ಬೆಂಗಳೂರು, ಮದುರೈ ಮತ್ತು ಇಂದೋರ್ ವಿಮಾನ ನಿಲ್ದಾಣಗಳಲ್ಲಿ 13 ಕೆಜಿಯಷ್ಟು ಚಿನ್ನ ಸಿಕ್ಕಿದೆ. ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನದ ಗಟ್ಟಿಗಳನ್ನು ಸಿಂಗಾಪುರ ಮತ್ತು ಕೊಲಂಬೋದಿಂದ ತರಲಾಗಿತ್ತು. ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರ ಜಾಕೆಟ್ ಮತ್ತು ವಿಮಾನ ಸೀಟಿನ ಕೆಳಗೆ ಚಿನ್ನವನ್ನು ಅಡಗಿಸಿಟ್ಟಿದ್ದು ತನಿಖೆ ವೇಳೆ ಕಂಡುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು