
ಹುಬ್ಬಳ್ಳಿ : ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘೇರಾವ್ ಹಾಕಿ, ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸ್ಥಳೀಯ ರೈತ ಮುಖಂಡ ಲೋಕನಾಥ್ ಹೆಬಸೂರ್ ಸೇರಿ ನೂರಾರು ರೈತರನ್ನು ನಗರದಲ್ಲಿ ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈಲಿನ ಮೂಲಕ ಬೆಂಗಳೂರಿಗೆ ತೆರಳಲು ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ 130 ರೈತರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಶನಿವಾರ ಸಂಜೆ ನವಲಗುಂದದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ವೇಳೆ ಗೊಬ್ಬರಗುಂಪಿ, ಹೆಬಸೂರು ಗ್ರಾಮಗಳ ಬಳಿ ಅವರನ್ನು ತಡೆದು 80-100 ರೈತರನ್ನು ವಶಕ್ಕೆ ಪಡೆದರು. ಬಳಿಕ ಅವರೆಲ್ಲರನ್ನೂ ಎರಡು ಬಸ್ ಗಳಲ್ಲಿ ಧಾರವಾಡದ ಪ್ರಧಾನ ಪೊಲೀಸ್ ಕಚೇರಿಗೆ ಕರೆದುಕೊಂಡು ಹೋದರು.
ಅಲ್ಲಿಗೆ ತೆರಳಿದ ಬಳಿಕ ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿದ ರೈತರು ಬಸ್‌ನಿಂದ ಕೆಳಗಿಳಿಯುವುದಿಲ್ಲ ಎಂದು ಪಟ್ಟುಹಿಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಧಾರವಾಡ ಎಸಿಪಿ ಸಂಗೀತಾ ಜಿ. ಅವರು, ಯಾವುದೇ ರೈತರನ್ನು ಬಂಧಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ತಡೆಹಿಡಿಯಲಾಗಿದೆ. ಎಲ್ಲರನ್ನೂ ಬಿಡುಗಡೆ ಮಾಡಿ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರೂ, 19 ರೈತರು ಪೊಲೀಸರ ಕಣ್ತಪ್ಪಿಸಿ ರೈಲು ನಿಲ್ದಾಣ ತಲುಪಿ ಬೆಂಗಳೂರಿನೆಡೆಗೆ ತೆರಳಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಲವು ಮುಖಂಡರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.