ಬೆಳಗಾವಿ 10 ದಿನಗಳ ಅಧಿವೇಶನದಲ್ಲಿ ಕಲಾಪ ನಡೆದಿದ್ದು 40 ತಾಸು ಮಾತ್ರ!

By Suvarna Web DeskFirst Published Nov 25, 2017, 11:53 AM IST
Highlights

ಸುವರ್ಣಸೌಧದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನ, ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ, ಮೌಢ್ಯಮಸೂದೆ ಬಡ್ತಿ ಮೀಸಲಾತಿ ವಿಧೇಯಕ ಗಳ ಅಂಗೀಕಾರ, ಕೆಲವು ಪ್ರಮುಖ ನಿರ್ಣಯಗಳ ಜೊತೆ ಹಲವು ಪ್ರತಿಭಟನೆ, ಧರಣಿಗಳಿಗೆ ಸಾಕ್ಷಿಯಾಗುವ ಮೂಲಕ 10 ದಿನಗಳ ಅಧಿವೇಶನ ಶುಕ್ರವಾರ ಕೊನೆಗೊಂಡಿತು.

ಬೆಳಗಾವಿ (ನ.25): ಸುವರ್ಣಸೌಧದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನ, ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ, ಮೌಢ್ಯಮಸೂದೆ ಬಡ್ತಿ ಮೀಸಲಾತಿ ವಿಧೇಯಕ ಗಳ ಅಂಗೀಕಾರ, ಕೆಲವು ಪ್ರಮುಖ ನಿರ್ಣಯಗಳ ಜೊತೆ ಹಲವು ಪ್ರತಿಭಟನೆ, ಧರಣಿಗಳಿಗೆ ಸಾಕ್ಷಿಯಾಗುವ ಮೂಲಕ 10 ದಿನಗಳ ಅಧಿವೇಶನ ಶುಕ್ರವಾರ ಕೊನೆಗೊಂಡಿತು.

10 ದಿನಗಳಲ್ಲಿ ಕಲಾಪ ಪಡೆದಿದ್ದು ಕೇವಲ 40 ತಾಸು!

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಂತೆ ಭಾರಿ ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತಾದರೂ ವಿಧಾನಸಭೆಯಲ್ಲಿ ಕೇವಲ ನಾಲ್ವರು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡರೆ, ವಿಧಾನ ಪರಿಷತ್‌ನಲ್ಲಿ 25 ಶಾಸಕರು ಭಾಗಿಯಾದರು. ಒಟ್ಟಾರೆ ಶಾಸಕರ ತಾತ್ಸಾರ ಭಾವನೆ ಈ ಅಧಿವೇಶನದಲ್ಲೂ ಎದ್ದು ಕಂಡಿತು. ಮೈಸೂರು ಕರ್ನಾಟಕದ ಅಥವಾ ಕರಾವಳಿ ಕರ್ನಾಟಕದ ಶಾಸಕರು ಮಾತ್ರವಲ್ಲದೇ ಉತ್ತರ ಕರ್ನಾಟಕದ ಶಾಸಕರು ಕೂಡ ಸದನದಲ್ಲಿ ಪಾಲ್ಗೊಳ್ಳಲು ಮೊದಲ ದಿನದಿಂದಲೇ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಅಧಿವೇಶನದ ಮೊದಲ ದಿನದಿಂದಲೇ ಖಾಸಗಿ ವೈದ್ಯರ ಮುಷ್ಕರ ಕರಿನೆರಳು ಉಭಯ ಸದನಗಳಲ್ಲಿ ಪ್ರತಿಧ್ವನಿಸಲಾರಂಭಿಸಿತ್ತು. ಈ ಪ್ರತಿಧ್ವನಿ ವಾರವಿಡೀ ಮಾರ್ದನಿಸಿ ಸರಕಾರವನ್ನು ಕೆಲಮಟ್ಟಿಗೆ ಕಂಗಾಲಾಗಿಸಿತ್ತು. ಈ ನಡುವೆಯೇ ಪ್ರತಿಪಕ್ಷ ಬಿಜೆಪಿ, ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಸಚಿವ ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಅಧಿವೇಶನದ ಎರಡನೇ ದಿನ ಪಟ್ಟು ಹಿಡಿಯಿತು. ಸರಕಾರ ಬಿಜೆಪಿ ಹೋರಾಟಕ್ಕೆ ಮಣಿಯದೇ ಬಿಜೆಪಿ ಬೇಡಿಕೆ ತಳ್ಳಿ ಹಾಕಿತು. ಹಿಂದಿನ ಎಲ್ಲ ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ಸುವರ್ಣಸೌಧದ ಎದುರು ಪ್ರತಿಭಟನೆಗಳ ಮಹಾಪೂರ ಕಂಡು ಬರಲಿಲ್ಲವಾದ್ದರಿಂದ ಸದನದ ಒಳಗೆ ಹೋರಾಟದ ಕಾವು ತಣ್ಣಗಾಗಬೇಕಾಯಿತು. ವೈದ್ಯರ ಮುಷ್ಕರ ಹೊರತುಪಡಿಸಿದರೆ ಉಳಿದ ಯಾವುದೇ ವಿಷಯಗಳು ಸರಕಾರವನ್ನು ಹೆಚ್ಚು ಪೇಚಿಗೆ ಸಿಲುಕಿಸಲಿಲ್ಲ. ಆದಾಗ್ಯೂ ಸಚಿವ ಜಾರ್ಜ್ ಪ್ರಕರಣ, ಮತ್ತೊಬ್ಬ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ, ನೈಸ್ ಸಂಸ್ಥೆ ಹಗರಣ ಕುರಿತು ಸದನ ಸಮಿತಿ ವರದಿ ಅನುಷ್ಠಾನ ವಿಚಾರಗಳು ಸದನದಲ್ಲಿ ಸಂಚಲನ ಮೂಡಿಸಿದವು. ಜೆಡಿಎಸ್ ನೈಸ್ ಹಗರಣ ಪ್ರಸ್ತಾಪಿಸಿತಾದರೂ ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವಲ್ಲಿ ವಿಫಲವಾಯಿತು.

ಪ್ರಮುಖ ವಿಧೇಯಕಗಳು: ಸರಿ ಸುಮಾರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೌಢ್ಯ ನಿಷೇಧ ವಿಧೇಯಕ ಅಂಗೀಕಾರವಾಯಿತಾದರೂ ಮಡೆ ಸ್ನಾನ ಬಿಟ್ಟರೆ ಬೇರಾವುದೇ ಬಹು ಚರ್ಚಿತ ವಿಷಯಗಳನ್ನು ಕೈಬಿಡಲಾಗಿತ್ತು. ಹೀಗಾಗಿ ಅಷ್ಟೇನೂ ವಿರೋಧ ಇಲ್ಲದೇ ವಿಧೇಯಕ  ಸ್ವೀಕೃತಗೊಂಡಿತು. ಇನ್ನು ಸುಪ್ರಿಂ ಕೋರ್ಟ್ ಆದೇಶದ ಅನುಸಾರ ಹಿಂಬಡ್ತಿ ಭೀತಿ ಎದುರಿಸುತ್ತಿದ್ದ ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ವಿಧೇಯಕ ಮಂಡಿಸುವ ಮೂಲಕ ದಲಿತ ನೌಕರರ ಬಡ್ತಿ ರಕ್ಷಿಸಲು ಸರಕಾರ ಮುಂದಾಯಿತು. ಖಾಸಗಿ ವೈದ್ಯರು ಅಥವಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ರೋಗಿ ಚಿಕಿತ್ಸೆಯಲ್ಲಿ ನಿರ್ಲಕ್ಷ ತೋರಿದರೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬ ಭಾರಿ ವಿವಾದಕ್ಕೆ ಕಾರಣವಾಗಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಹಲವಾರು ಮಾರ್ಪಾಟುಗಳೊಂದಿಗೆ ಸ್ವೀಕೃತಗೊಂಡಿತು.

ವರದಿ: ಶಿವಕುಮಾರ್ ಮೆಣಸಿನಕಾಯಿ, ಕನ್ನಡ ಪ್ರಭ

 

 

click me!