ಅಟಲ್‌ಗೆ ಶ್ರದ್ಧಾಂಜಲಿ ಸಲ್ಲಿಸದ ಕಾರ್ಪೋರೇಟರ್‌ಗೆ 1 ವರ್ಷ ಜೈಲು!

By Web DeskFirst Published Aug 24, 2018, 10:00 AM IST
Highlights

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಒಪ್ಪದ ಮಹಾನಗರಪಾಲಿಕೆ ಸದಸ್ಯನಿಗೆ ಒಂದು ವರ್ಷ ಕಾಲ ಜೈಲು ವಾಸ ಶಿಕ್ಷೆ ವಿಧಿಸಲಾಗಿದೆ. 

ಮುಂಬೈ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಒಪ್ಪದ ಅಖಿಲ ಭಾರತ ಮಜ್ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಎಐಎಂ) ಪಕ್ಷದ ಮುಖಂಡ ಹಾಗೂ ಔರಂಗಾಬಾದ್‌ ಮಹಾನಗರಪಾಲಿಕೆ ಸದಸ್ಯ ಸಯ್ಯದ್‌ ಮತೀನ್‌ ಸಯ್ಯದ್‌ ರಶೀದ್‌ (32) ಎಂಬಾತನಿಗೆ ಸ್ಥಳೀಯ ಪೊಲೀಸರು, ಮಹಾರಾಷ್ಟ್ರದ ಕಾನೂನೊಂದನ್ನು ಬಳಸಿ 1 ವರ್ಷ ಸೆರೆವಾಸಕ್ಕೆ ಅಟ್ಟಿದ್ದಾರೆ.

ಪಾಲಿಕೆ ಸಭೆಯಲ್ಲಿ ಮತೀನ್‌, ಅಟಲ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರಾಕರಿಸಿದ್ದರು. ಇದರಿಂದ ಕ್ರುದ್ಧರಾಗಿದ್ದ ಬಿಜೆಪಿ ಸದಸ್ಯರು ಮತೀನ್‌ಗೆ ಸಭೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ಮತೀನ್‌ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆನಂತರ ಅವರಿಗೆ ನ್ಯಾಯಾಲಯ ಜಾಮೀನು ಕೂಡ ನೀಡಿತ್ತು.

ಆದರೆ ಔರಂಗಾಬಾದ್‌ ನಗರ ಪೊಲೀಸ್‌ ಆಯುಕ್ತರು ತಮ್ಮ ವಿವೇಚನಾಧಿಕಾರ ಬಳಸಿ, ಮಹಾರಾಷ್ಟ್ರದಲ್ಲಿ ಮಾದಕ ವ್ಯಸನಿಗಳು, ಅಪಾಯಕಾರಿ ವ್ಯಕ್ತಿಗಳ ವಿರುದ್ಧ ಹಾಕುವ ಎಂಪಿಡಿಎ ಕಾನೂನಿನ ಅಡಿ ಮತೀನ್‌ಗೆ 1 ವರ್ಷ ಜೈಲು ವಾಸ ವಿಧಿಸಲು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಅವರನ್ನು ಔರಂಗಾಬಾದ್‌ನ ಹಸ್ರುಲ್‌ ಜೈಲಿಗೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಕೂಡ ಮತೀನ್‌ ವಿರುದ್ಧ 2 ಅಪರಾಧ ಪ್ರಕರಣಗಳಿದ್ದವು. ಇವರ ಕ್ರಿಮಿನಲ್‌ ಹಿನ್ನೆಲೆ ಗಮನಿಸಿ, ಇಂಥವರಿಂದ ಸಮಾಜಕ್ಕೆ ಅಪಾಯ ಇರುವುದನ್ನು ಅರಿತು ಶಿಕ್ಷೆ ವಿಧಿಸಲಾಗಿದೆ. 1 ವರ್ಷ ಕಾಲ ಮತೀನ್‌ ವಶದಲ್ಲಿರಲಿದ್ದಾರೆ ಎಂದು ಅವರು ಹೇಳಿದ್ದಾರೆ.

click me!