ಪತ್ರಿಕೆ ಸಂಪಾದಕನ ಗುಂಡಿಟ್ಟು ಹತ್ಯೆ

First Published Jun 15, 2018, 10:22 AM IST
Highlights

ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಅಟ್ಟಹಾಸ ಮುಂದುವರೆಸಿರುವ ಉಗ್ರರು, ಗುರುವಾರ ಹಿರಿಯ ಪತ್ರಕರ್ತ ಹಾಗೂ ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಅಟ್ಟಹಾಸ ಮುಂದುವರೆಸಿರುವ ಉಗ್ರರು, ಗುರುವಾರ ಹಿರಿಯ ಪತ್ರಕರ್ತ ಹಾಗೂ ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಶುಜಾತ್‌ ಹತ್ಯೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ವಿವಿಧ ಪತ್ರಕರ್ತ ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸಿವೆ.

ಇಫ್ತಾರ್‌ ಕೂಟವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ತಮ್ಮ ಪತ್ರಿಕಾ ಕಚೇರಿಯಿಂದ ಶಜಾತ್‌ ಹೊರ ಸಂದರ್ಭದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶುಜಾತ್‌ ಮತ್ತು ಅವರ ಅಂಗರಕ್ಷಕ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಓರ್ವ ಪೊಲೀಸ್‌ ಪೇದೆ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಖಾರಿ ಅವರು ಈ ಹಿಂದೆ ‘ದ ಹಿಂದು’ ಪತ್ರಿಕೆಯ ಕಾಶ್ಮೀರ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಕಾಶ್ಮೀರದಲ್ಲಿ ಹಲವಾರು ಶಾಂತಿ ಸಭೆಗಳನ್ನು ಆಯೋಜಿಸುವಲ್ಲಿ ಬುಖಾರಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಹಿಂದೆ 2000ರಲ್ಲೂ ಅವರ ಮೇಲೆ ದಾಳಿ ಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು.

click me!