'ಸ್ಲಂಗಳು ಭಾರತದ ಜಾತಿ ವ್ಯವಸ್ಥೆಯ ಪ್ರತೀಕ'

By Kannadaprabha NewsFirst Published Jan 7, 2021, 3:34 PM IST
Highlights

ಹಳ್ಳಿಗಳಲ್ಲಿ ದುಡಿಮೆ ಇದ್ದರೂ ಜಾತೀಯತೆ, ದೌರ್ಜನ್ಯದಿಂದ ನೊಂದು ನಗರಗಳತ್ತ ವಲಸೆ ಹೆಚ್ಚುತ್ತಿದೆ. ಬಡತನದಿಂದ ಬೇಸತ್ತು ನಗರಗಳತ್ತ ಬಂದವರು ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು(ಜ.07): ವಂಚಿತ ಸಮುದಾಯಗಳು ಸಾಂಸ್ಕೃತಿಕ ಮತ್ತು ಜ್ಞಾನದ ಅರಿವಿನ ಮೂಲಕ ಸಾಮಾಜಿಕ ಬದಲಾವಣೆಯತ್ತ ಹೆಜ್ಜೆ ಇಡುವಂತಾಗಲಿ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಆಶಿಸಿದರು.

ಗಾಂಧಿಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ‘11ನೇ ವರ್ಷಾಚರಣೆ ಮತ್ತು ಸಾವಿತ್ರಿ ಬಾಯಿ ಪುಲೆಯವರ 190ನೇ ಜಯಂತಿ’ ಅಂಗವಾಗಿ ‘ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆ’ ಕುರಿತು ‘ರಾಜ್ಯಮಟ್ಟದ ಪ್ರತಿನಿಧಿಗಳ ಸಭೆ’ಯಲ್ಲಿ ಅವರು ಮಾತನಾಡಿದರು.

ಸ್ಲಂಗಳು ಭಾರತದ ಜಾತಿ ವ್ಯವಸ್ಥೆಯ ಪ್ರತೀಕಗಳಾಗಿವೆ. ಹಳ್ಳಿಗಳಲ್ಲಿ ದುಡಿಮೆ ಇದ್ದರೂ ಜಾತೀಯತೆ, ದೌರ್ಜನ್ಯದಿಂದ ನೊಂದು ನಗರಗಳತ್ತ ವಲಸೆ ಹೆಚ್ಚುತ್ತಿದೆ. ಬಡತನದಿಂದ ಬೇಸತ್ತು ನಗರಗಳತ್ತ ಬಂದವರು ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಇಂದು ಸ್ಲಂಗಳಲ್ಲೂ ಶಿಕ್ಷಣದಿಂದ ಉತ್ತಮ ಪ್ರತಿಭೆಗಳು ಹೊರಬರುತ್ತಿವೆ. ನಗರ ಕೇಂದ್ರಿತ ಅಭಿವೃದ್ಧಿಯಿಂದ ಭವಿಷ್ಯದಲ್ಲಿ ಅಸಮಾನತೆ ಹೆಚ್ಚಾಗಲಿದೆ. ಈ ಸಂಘರ್ಷವೇ ಸಾಮಾಜಿಕ ಚಳವಳಿಗೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಇದರ ನಾಯಕತ್ವವನ್ನು ಸ್ಲಂ ನಿವಾಸಿಗಳು ವಹಿಸಲು ಸಿದ್ಧರಾಗಬೇಕು. ಇದು ನಿಮ್ಮ ಜವಾಬ್ದಾರಿಯೂ ಆಗಿದೆ ಎಂದರು.

ತಮ್ಮ ನಾಯಕರ ವಿರುದ್ಧವೇ ಸಿಡಿದೆದ್ದ JDS ಶಾಸಕ: ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯೂ, ನಗರದಲ್ಲಿ ಬದುಕುವ ಹಕ್ಕನ್ನು ಪ್ರತಿಪಾದಿಸಲು ವಂಚಿತ ಸಮುದಾಯದವರು ಸಂಘಟಿತರಾಗಿ ಮುನ್ನಡೆಯಬೇಕು. ಇದಕ್ಕಾಗಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಸಂಘಗಳನ್ನು ರಚಿಸಿ, ಭೂ ಮಾಲೀಕತ್ವ ಮತ್ತು ವಸತಿ ಹಕ್ಕಿಗಾಗಿ ಹೋರಾಟ ರೂಪಿಸಬೇಕು. ಜತೆಗೆ ವಿವಿಧ ಸಂಘ-ಸಂಸ್ಥೆಗಳ ಜತೆಗೂಡಿ ಐಕ್ಯ ಹೋರಾಟ ಸಂಘಟಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಪಿಯುಸಿಎಲ್‌ (ಕರ್ನಾಟಕ) ಅಧ್ಯಕ್ಷ ಪ್ರೊ.ವೈ.ಜೆ. ರಾಜೇಂದ್ರ ಮಾತನಾಡಿದರು. ಸಾಧನ ಮಹಿಳಾ ಸಂಘದ ಕಾರ್ಯದರ್ಶಿ ಗೀತಾ, ಪಿಯುಸಿಎಲ್‌ ಕರ್ನಾಟಕ ಉಪಾಧ್ಯಕ್ಷೆ ದೀಪಿಕಾ, ಬಿಜಾಪುರ ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಮ್‌ ಮಶಳ್ಕಾರ್‌, ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ತೇಜಸ್‌ಕುಮಾರ್‌ ಇನ್ನಿತರರು ಇದ್ದರು.
 

click me!