ನಿಖಿಲ್ ಮಂಜು ನಿರ್ದೇಶನದ ‘ಅಮ್ಮನ ಮನೆ’ ಚಿತ್ರ ಮಾ.8ರಂದು ತೆರೆಗೆ ಬರುತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಈ ಚಿತ್ರದ ಪ್ರಮುಖ ಪಾತ್ರಧಾರಿ ಆಗಿದ್ದಾರೆ. ಅವರ ಪಾತ್ರದ ಜತೆಗೆ ಕಾಣಿಸಿಕೊಳ್ಳುವ ತಾಯಿ,ಹೆಂಡತಿ ಮತ್ತು ಪುತ್ರಿಯ ಪಾತ್ರದಲ್ಲೂ ಹೊಸಬರನ್ನೇ ಪರಿಚಯಿಸುತ್ತಿದ್ದಾರೆ ನಿಖಿಲ್ ಮಂಜು. ಆ ಪೈಕಿ ಶೀತಲ್ ಕೂಡ ಒಬ್ಬರು.
ಚಿತ್ರದಲ್ಲಿ ಅವರದ್ದು ರಾಘಣ್ಣನ ಮಗಳ ಪಾತ್ರ. ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿರುವ ಶೀತಲ್ ಭರತನಾಟ್ಯ ಕಲಾವಿದೆ. ಜತೆಗೆ ಗಾಯಕಿಯೂ ಹೌದು. ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದು, ಈಗ ನಟನೆಯತ್ತ ಮುಖ ಮಾಡಿದ್ದಾರೆ. ಸಂಗೀತ ಮತ್ತು ನೃತ್ಯವೇ ತಮ್ಮ ಕ್ಷೇತ್ರ ಎನ್ನುತ್ತಿದ್ದ ಶೀತಲ್ ಅವರನ್ನು ಸಿನಿಮಾ ರಂಗಕ್ಕೆ ಕರೆ ತಂದು ಬಣ್ಣ ಹಚ್ಚುವಂತೆ ಮಾಡಿದ್ದಾರೆ ನಿರ್ದೇಶಕ ನಿಖಿಲ್ ಮಂಜು.
ಕರ್ನಾಟಕಕ್ಕೂ ಮೊದಲು ವಿದೇಶದಲ್ಲಿ ರಾಘವೇಂದ್ರ ರಾಜ್ ಕುಮಾರ್ ಚಿತ್ರ ರಿಲೀಸ್!
‘ನಟಿ ಆಗ್ತೇನೆ ಎನ್ನುವ ಕನಸು ಕೂಡ ಇರಲಿಲ್ಲ. ಒಂದ್ರೀತಿ ಇದು ಬಯಸದೇ ಬಂದ ಭಾಗ್ಯ. ಅಮ್ಮನ ಫ್ರೆಂಡ್ ಒಬ್ಬರಿಗೆ ನಿಖಿಲ್ ಮಂಜು ಅವರ ಪರಿಚಯವಿತ್ತು. ಅವರು ಸಿನಿಮಾ ಮಾಡುತ್ತಿದ್ದರ ಬಗ್ಗೆ, ಮಗಳ ಪಾತ್ರಕ್ಕೆ ಓರ್ವ ಕಲಾವಿದೆ ಬೇಕೆನ್ನುವ ಬಗ್ಗೆ ಅಮ್ಮನಿಗೆ ವಿಷಯ ಗೊತ್ತಾದಾಗ, ಅವರು ನನ್ನ ಬಗ್ಗೆಯೇ ಹೇಳಿದ್ರಂತೆ. ನಿಖಿಲ್ ಮಂಜು ಒಂದು ಸಲ ಕಾಲ್ ಮಾಡಿ, ಶೂಟಿಂಗ್ ಸೆಟ್‌ಗೆ ಬರಲು ಹೇಳಿದರು. ನಟನೆ ಬಗ್ಗೆ ನಾಲ್ಕೈದು ಪ್ರಶ್ನೆ ಕೇಳಿದ್ರು. ಗೊತ್ತಿರುವಷ್ಟು ಉತ್ತರಿಸಿದೆ. ಮರು ದಿವಸವೇ ಸೆಟ್‌ಗೆ ಬರುವಂತೆ ಹೇಳಿದ್ರು. ಆಗಲೇ ನನಗೆ ಗೊತ್ತಾಗಿದ್ದು, ಈ ಸಿನಿಮಾ ನಾನು ಸೆಲೆಕ್ಟ್ ಆದೆ ಅಂತ’ ಎನ್ನುತ್ತಾರೆ ಶೀತಲ್.
ಶೀತಲ್ ತಂದೆ ಬಿ.ಆರ್.ಹೇಮಂತ್ ಕುಮಾರ್ ಸಂಗೀತ ನಿರ್ದೇಶಕರು. ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದವರು. ತಾಯಿ ಪದ್ಮಾ ಹೇಮಂತ್ ಕ್ಲಾಸಿಕಲ್ ಡಾನ್ಸರ್. ಅವರದ್ದೇ ಒಂದು ಸಂಗೀತ ತರಬೇತಿ ಸಂಸ್ಥೆಯಿದೆ. ಹಾಗಾಗಿ ಎರಡು ವರ್ಷ ಇದ್ದಾಗಲೇ ಡಾನ್ಸರ್ ಆಗಿ ವೇದಿಕೆ ಹತ್ತಿದ ಅನುಭವ ಶೀತಲ್ ಅವರದ್ದು. ಅಂತಿಮ ವರ್ಷದ ಬಿಕಾಂ ಓದುತ್ತಿದ್ದರೂ ದೇಶ-ವಿದೇಶಗಳಲ್ಲಿ ಸಂಗೀತ ಮತ್ತು ನೃತ್ಯದ ಸ್ಟೇಜ್ ಶೋ ಕೊಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಷ್ಟೇ ದುಬೈಗೆ ಹೋಗಿ ಬಂದಿದ್ದಾರೆ. ಜುಲೈಗೆ ಇಂಗ್ಲೆಂಡ್ ಪ್ರಯಾಣ ಬೆಳೆಸಲಿದ್ದಾರೆ.