ನ್ಯಾಯಾಲಯದ ಆದೇಶ ಉಲ್ಲಂಘಿಸಿ ವ್ಯಾಜ್ಯದಲ್ಲಿರುವ ಜಮೀನು ಮಾರಾಟ ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ತಿಂಗಳು ಜೈಲುವಾಸ ಅಥವಾ ಮಾರಾಟದ ಹಣ ಠೇವಣಿ ಇಡುವ ಆಯ್ಕೆಯ ಶಿಕ್ಷೆಯನ್ನು ಹೈಕೋರ್ಟ್ (High Court)ವಿಧಿಸಿದೆ.
ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ವ್ಯಾಜ್ಯದಲ್ಲಿರುವ ಜಮೀನು ಮಾರಾಟ ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ತಿಂಗಳು ಜೈಲುವಾಸ ಅಥವಾ ಮಾರಾಟದ ಹಣ ಠೇವಣಿ ಇಡುವ ಆಯ್ಕೆಯ ಶಿಕ್ಷೆಯನ್ನು ಹೈಕೋರ್ಟ್ (High Court)ವಿಧಿಸಿದೆ. ಸೋಮಣ್ಣ ಮತ್ತಿತರರು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಮೈಸೂರಿನ ನಂಜನಗೂಡಿನ (Nanjangud) ತುಮ್ಮನೇರಳೆ ಗ್ರಾಮದ ಪ್ರಕಾಶ್ ಎಂಬುವರಿಗೆ ಈ ಶಿಕ್ಷೆ ವಿಧಿಸಿದೆ.
ಆರೋಪಿ ಪ್ರಕಾಶ್ (Prakash)ಉದ್ದೇಶಪೂರ್ವಕವಾಗಿಯೇ ನ್ಯಾಯಾಲಯ ಆದೇಶ ಉಲ್ಲಂಘಿಸಿಸುವ (contempt of court) ಮೂಲಕ ನ್ಯಾಯಾಂಗ ನಿಂದನೆ ಎಸಗಿರುವುದು ಸಾಬೀತಾಗಿದೆ. ಹಾಗಾಗಿ, ಆರೋಪಿ ಮೂರು ತಿಂಗಳು ಸೆರೆವಾಸ ಅನುಭವಿಸಬೇಕು. ಇಲ್ಲವೇ ಮೇಲ್ಮನವಿ ಇತ್ಯರ್ಥವಾಗುವವರೆಗೆ ಜಮೀನು ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ಎರಡು ತಿಂಗಳಲ್ಲಿ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಒಂದೊಮ್ಮೆ ಆರೋಪಿ ಹಣ ಠೇವಣಿ ಇಡದಿದ್ದರೆ ಆತನನ್ನು ಬಂಧಿಸಲು ರಿಜಿಸ್ಟ್ರಾರ್ ಜನರಲ್ ವಾರಂಟ್ (warrant) ಹೊರಡಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
undefined
ಆರೋಪಿಯು ಬೇಷರತ್ ಕ್ಷಮೆ ಕೋರಿದ್ದಾರೆ. ಆದರೆ, ಕ್ಷಮೆ ಎನ್ನುವುದು ಪ್ರಾಯಶ್ಚಿತ್ತ, ಪಶ್ಚಾತಾಪ ಅಥವಾ ವಿಷಾದವಲ್ಲ. ಕ್ಷಮೆಯನ್ನು ಪರಿಗಣಿಸಿ ಪ್ರಕರಣವನ್ನು ಕೈಬಿಟ್ಟರೆ ಉದ್ದೇಶಪೂರ್ವಕವಾಗಿಯೇ ನ್ಯಾಯಾಂಗ ನಿಂದನೆ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಟ್ಟಂತಾಗುತ್ತದೆ. ಆದ್ದರಿಂದ ಆರೋಪಿಯನ್ನು ಸುಮ್ಮನೆ ಬಿಡಲಾಗದು. ಆತ ಶಿಕ್ಷೆಯನ್ನು (punishment) ಅನುಭವಿಸಲೇಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ:
ಜಮೀನು ಸಂಬಂಧ ಸೋಮಣ್ಣ (Somanna) ಮತ್ತು ಪ್ರಕಾಶ್ ನಡುವೆ ವ್ಯಾಜ್ಯವಿತ್ತು. ಆ ಕುರಿತು ಜಮೀನು ವಿಭಜನೆ ಹಾಗೂ ಪ್ರತ್ಯೇಕ ಸ್ವಾಧೀನಕ್ಕೆ ಅನುಮತಿ ನೀಡಿ ಆದೇಶಿಸುವಂತೆ ಕೋರಿ ಸೋಮಣ್ಣ ವಿಚಾರಣಾ ನ್ಯಾಯಾಲಯಕ್ಕೆ 2009ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು 2011ರಲ್ಲಿ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಸೋಮಣ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಕೀಲರಿಗೆ ಬೆದರಿಕೆ ಸಹಿಸಲ್ಲ: ಆರೋಪಿಗೆ ಹೈಕೋರ್ಟ್ ಎಚ್ಚರಿಕೆ
ಆ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್, ಮೇಲ್ಮನವಿ ವ್ಯಾಜ್ಯ ಇತ್ಯರ್ಥವಾಗುವವರೆಗೆ ಭೂಮಿಯನ್ನು ಪರಭಾರೆ ಮಾಡಬಾರದು ಎಂದು ನಿರ್ದೇಶಿಸಿ 2012ರ ನ.22ರಂದು ಮಧ್ಯಂತರ ಆದೇಶ ನೀಡಿತ್ತು. ಆದರೆ, ಆ ಆದೇಶ ಉಲ್ಲಂಘಿಸಿ ವಿವಾದಿತ ಜಮೀನನ್ನು ಪ್ರಕಾಶ್ ಅವರು 2014ರಲ್ಲಿ ರಾಜಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು. ಹಾಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಅಪರಾಧಡಿ ಕ್ರಮ ಜರುಗಿಸಬೇಕು ಎಂದು ಕೋರಿ ಸೋಮಣ್ಣ 2017ರಲ್ಲಿ ಹೈಕೋರ್ಟ್‌ಗೆ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದನ್ನು ಇತ್ತೀಚೆಗೆ ಪುರಸ್ಕರಿಸಿದ ಹೈಕೋರ್ಟ್ (High Court), ಪ್ರಕಾಶ್‌ಗೆ ಶಿಕ್ಷೆ ವಿಧಿಸಿದೆ.