Sonia Gandhi Karnataka visit: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೊಡಗಿಗೆ ತೆರಳಿ ಎರಡು ದಿನಗಳ ಕಾಲ ರೆಸಾರ್ಟ್‌ನಲ್ಲಿ ವಾಸವಾಗಬೇಕಿತ್ತು. ಆದರೆ ಹವಾಮಾನ ಸರಿ ಇಲ್ಲದ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಸಾಧ್ಯವಾಗಲಿಲ್ಲ. ಆರೋಗ್ಯ ಸಮಸ್ಯೆ ಇರುವುದರಿಂದ ರಸ್ತೆ ಪ್ರಯಾಣ ಬೇಡ ಎಂದು, ಮೈಸೂರಿನಲ್ಲೇ ಎರಡು ದಿನ ಉಳಿಯುವ ನಿರ್ಧಾರ ಮಾಡಿದ್ದಾರೆ.
ಮೈಸೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೊಡಗು ಭೇಟಿ ರದ್ದಾಗಿದೆ. ಹವಾಮಾನ ಸರಿಯಿಲ್ಲದ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಸಾಧ್ಯವಾಗಿಲ್ಲ. ಊಟದ ನಂತರ ರಸ್ತೆ ಮಾರ್ಗದಲ್ಲಿಯೇ ಕೊಡಗಿಗೆ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಅನಾರೋಗ್ಯದ ಕಾರಣ ರಸ್ತೆ ಮಾರ್ಗದಲ್ಲಿ ಹೆಚ್ಚು ದೂರ ಸಂಚರಿಸಲು ಸಾಧ್ಯವಿಲ್ಲ ಎಂದು ಪ್ರವಾಸವನ್ನು ರದ್ದು ಮಾಡಲಾಗಿದೆ. ಕೊಡಗಿನ ರೆಸಾರ್ಟ್ ಬದಲಾಗಿ ಎರಡು ದಿನಗಳ ಕಾಲ ಮೈಸೂರಿನ ಕಬಿನಿ ರೆಸಾರ್ಟಿನಲ್ಲಿ ಸೋನಿಯಾ ಗಾಂಧಿ ತಂಗಲಿದ್ದಾರೆ. ಇಂದು 12.30ಕ್ಕೆ ಸೋನಿಯಾ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಕಾರ್ಯಕ್ರಮದ ಪ್ರಕಾರ ಮಧ್ಯಾಹ್ನ ಒಂದು ಗಂಟೆಗೆ ಅವರು ಹೆಲಿಕಾಪ್ಟರ್ ಮೂಲಕ ಮೈಸೂರಿನಿಂದ ಕೊಡಗು ಗಾಲ್ಫ್ ಕ್ಲಬ್‌ನ ಹೆಲಿಪ್ಯಾಡ್‌ಗೆ ಹೋಗಬೇಕಿತ್ತು. ಆದರೆ ಹವಾಮಾನ ಪರಿಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಸಾಧ್ಯವಾಗಲಿಲ್ಲ.
ಮೈಸೂರು ವಿಮಾನ ನಿಲ್ದಾಣದಲ್ಲಿ ಸೋನಿಯಾ ಗಾಂಧಿ ಅವರನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬರ ಮಾಡಿಕೊಂಡರು. ಅದಾದ ನಂತರ ಹೆಲಿಪ್ಯಾಡ್‌ಗೆ ತೆರಳಿದರು. ಆದರೆ ಹೆಲಿಕಾಪ್ಟರ್ ಯಾನ ಅಸಾಧ್ಯ ಎಂದು ತಿಳಿದ ಬಳಿಕ ಒಂದೇ ಕಾರಿನಲ್ಲಿ ಮೈಸೂರಿನ ವಿಂಡ್ ಫ್ಲವರ್ ಹೋಟೆಲ್‌ಗೆ ಮಧ್ಯಾಹ್ನ ಉಪಹಾರಕ್ಕೆ ತೆರಳಿದರು. ಅಲ್ಲಿಂದ ನೇರವಾಗಿ ರಸ್ತೆ ಮಾರ್ಗದಲ್ಲೇ ಕೊಡಗಿಗೆ ಹೋಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಯಿದ್ದು ಇತ್ತೀಚೆಗಷ್ಟೇ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆ ಹೆಚ್ಚು ದೂರದ ರಸ್ತೆ ಪ್ರಯಾಣ ಬೇಡವೆಂದು ನಿರ್ಧರಿಸಿ ಮೈಸೂರಿನಲ್ಲೇ ಉಳಿಯುವ ನಿರ್ಧಾರ ಮಾಡಿದರು. ರಾಹುಲ್ ಗಾಂಧಿ ಕೂಡ ಮೈಸೂರಿನಲ್ಲೇ ಇದ್ದು, ಕೆಲ ಹೊತ್ತಿನ ಹಿಂದಷ್ಟೇ ಚಾಮುಂಡಿ ದೇವಿಯ ದರ್ಶನ ಪಡೆದಿದ್ದಾರೆ.
undefined
ಇದನ್ನೂ ಓದಿ: ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ: ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ RAHUL GANDHI ಭೇಟಿಯ ಫೋಟೋಗಳನ್ನು ನೋಡಿ..
ಕೊಡಗು ಪೊಲೀಸರ ಶ್ರಮ ವ್ಯರ್ಥ:
ಸೋನಿಯಾ ಗಾಂಧಿ ಭೇಟಿ ಹಿನ್ನೆಲೆ ಕೊಡಗು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಭಾರೀ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದರು. ರೆಸಾರ್ಟ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಆದರೆ ಕಡೆಯ ಕ್ಷಣದಲ್ಲಿ ಸೋನಿಯಾ ಗಾಂಧಿ ಭೇಟಿ ರದ್ದಾಗಿದೆ. ಮೂಲಗಳ ಪ್ರಕಾರ ಮೈಸೂರಿನ ದಸರಾ ಭದ್ರತೆಗೆ ಅರ್ಧಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ ಹೋಗಿದ್ದಾರೆ. ಉಳಿದ ಸಿಬ್ಬಂದಿಯಲ್ಲಿ ಬಹುತೇಕರನ್ನು ಸೋನಿಯಾ ಭೇಟಿಗೆಂದು ನಿಯೋಜಿಸಲಾಗಿತ್ತು. ಬೆಳಗ್ಗೆಯಿಂದಲೇ ಸಿಬ್ಬಂದಿ ಕೊಡಗಿನ ಹಲವು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದರು.
ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿ:
ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿರುವ ಸೋನಿಯಾ ಗಾಂಧಿ 6ನೇ ತಾರೀಕು ಭಾರತ ಏಕತಾ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮರುದಿನ ಅಂದರೆ 7ನೇ ತಾರೀಕು ಪ್ರಿಯಾಂಕಾ ಗಾಂಧಿ ವಾದ್ರಾ ನಾಗಮಂಗಲ ತಾಲೂಕಿನಲ್ಲಿ ಪಾದಯಾತ್ರೆ ಮಾಡಲಿದ್ದಾರೆ.
ಇದನ್ನೂ ಓದಿ: Bharat Jodo Yatra: ಜಡಿ ಮಳೆಗೂ ಬಗ್ಗಲಿಲ್ಲ Rahul Gandhi, ಸುರಿವ ಮಳೆಯಲ್ಲೇ ಭಾಷಣ; ಜನರಿಗೆ ಭೇಷ್ ಎಂದ ರಮ್ಯಾ
ಇಂದು ಸಂಜೆ ರಾಹುಲ್ ಗಾಂಧಿ ರೆಸಾರ್ಟ್‌ಗೆ ತೆರಳಲಿದ್ದು ಅವರೂ ಸೋನಿಯಾ ಗಾಂಧಿ ಅವರ ಜೊತೆ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ರಾಜ್ಯ ನಾಯಕರ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಜತೆಗೆ ಬಿಬಿಎಂಪಿ ಚುನಾವಣೆಯ ಕುರಿತೂ ಮಾತನಾಡಲಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ 4, ಸೆ. 5ರಂದು ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ. ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ವಿರಾಮ ನೀಡಲಾಗಿದೆ. ಅದಾದ ನಂತರ ಮತ್ತೆ ಪಾದಯಾತ್ರೆ ಆರಂಭವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.