ನೀರು, ಸೋಲಾರ್, ಫ್ಯಾನ್ ಏನೂ ಇಲ್ಲ, ಮೈಸೂರು ವಿವಿ ಹಾಸ್ಟೆಲ್ ಗೋಳು ಕೇಳೋರಿಲ್ಲ..!

By Kannadaprabha NewsFirst Published Oct 13, 2019, 9:53 AM IST
Highlights

ಹಾಸ್ಟೆಲ್, ಕಾಳೇಜುಗಳಿಗೆ ಸರ್ಕಾರ ಎಷ್ಟೇ ಅನುದಾನ ನೀಡಿದ್ರೂ ಅಲ್ಲಿನ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ಮಾಡದೆ ಸವಲತ್ತುಗಳು ಸಿಗೋದು ಕಡಿಮೆ. ಮೈಸೂರು ವಿವಿ ಹಾಸ್ಟೆಲ್‌ನಲ್ಲಿ ನೀರು, ಸೋಲಾರ್, ಫ್ಯಾನ್ ಸೇರಿ ಎಲ್ಲದಕ್ಕೂ ಕೊರತೆ. ಕುಲಪತಿ ಹಾಗೂ ಕುಲ ಸಚಿವರ ಎದುರೇ ಧಿಕ್ಕಾರದ ಘೋಷಣೆ ಕೂಗಿದ ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸುವಂತೆ ಕೇಳಿದ್ಧಾರೆ.

ಮೈಸೂರು(ಅ.13): ಹಾಸ್ಟೆಲ್‌ನಲ್ಲಿ ಫ್ಯಾನ್‌ ಇಲ್ಲ, ಬಿಸಿ ನೀರಿಲ್ಲದೆ ಸ್ನಾನ ಮಾಡಿ ತಿಂಗಳಾಯ್ತು, ಸೊಳ್ಳೆ, ತಿಗಣೆ ಕಾಟ, ಅಡುಗೆಗೆ ಸೋಡಾ ಹಾಕುತ್ತಾರೆ ಹಲವು ದಿನಗಳಿಂದ ಈ ಸಮಸ್ಯೆ ಪರಿಹರಿಸುವಂತೆ ಕೋರಿದರೂ ಪ್ರಯೋಜನವಾಗಿಲ್ಲ ಎಂದು ಮೈಸೂರು ವಿವಿ ಹಾಸ್ಟೆಲ್‌ನ ವಿದ್ಯಾರ್ಥಿಗಳು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಅವರ ಮುಂದೆ ಶನಿವಾರ ಸಮಸ್ಯೆಗಳ ಸುರಿಮಳೆ ಗರೆದರು.

ಬೆಳಗ್ಗೆ ತಿಂಡಿಯನ್ನೂ ತಿನ್ನದೆ ಆಗಮಿಸಿದ್ದ ವಿದ್ಯಾರ್ಥಿಗಳು ವಿವಿಯ ಕುವೆಂಪು ಪುತ್ಥಳಿ ಎದುರು ಜಮಾಯಿಸಿ ವಿವಿಯ ವಿರುದ್ಧ ಧಿಕ್ಕಾರ ಕೂಗಿದರು. ಶುದ್ಧ ನೀರು ಕೊಡಿ ಅಂದ್ರೆ ಕೊಳಕು ನೀರು ಕೊಡುತ್ತಾರೆ. ಈ ಸಮಸ್ಯೆಗಳನ್ನು ಹೇಳಿ ಹೇಳಿ ಸಾಕಾಗಿದೆ ಎಂದು ದೂರಿದ್ದಾರೆ.

ತೆರಿಗೆ ರಹಿತ ಹಾಲು ಆಮದಿಗೆ ಮೈಮುಲ್‌ ವಿರೋಧ.

ಕುಲಪತಿ ಹಾಗೂ ಕುಲ ಸಚಿವರ ಎದುರೇ ಧಿಕ್ಕಾರದ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕಳೆದ ಎರಡು- ಮೂರು ವರ್ಷಗಳಿಂದ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದೇವೆ, ಪ್ರತಿಭಟಿಸಿದ್ದೇವೆ. ಹತ್ತಾರು ಬಾರಿ ಸಮಸ್ಯೆ ಹೇಳಿದರೂ ಪರಿಹಾರವಾಗಿಲ್ಲ. ನಮ್ಮ ಸಮಸ್ಯೆ ಪರಿಹರಿಸಲು ನಿಮಗೇನಾಗಿದೆ?, ನಾವೇನು ದೊಡ್ಡ ದೊಡ್ಡ ಕಟ್ಟಡ ಕಟ್ಟಿಕೊಡಿ ಅನ್ನುತ್ತಿಲ್ಲ. ಒಂದೆರಡು ಮೂರು ದಿನದಲ್ಲಿ ಪರಿಹರಿಸಬಹುದಾದ ಸಮಸ್ಯೆ ಹೇಳಿದರೂ ಮಾಡುತ್ತಿಲ್ಲ. ನಿಮ್ಮಿಂದ ಪರಿಹರಿಸಲು ಸಾಧ್ಯವಿದ್ದರೆ ಮಾಡಿ, ಇಲ್ಲ ಅಸಮರ್ಥರು ಅಂಥ ರಾಜೀನಾಮೆ ಕೊಟ್ಟು ಹೋಗಿ ಎಂದು ಏರುದನಿಯಲ್ಲಿ ಕುಲಪತಿಗಳನ್ನೇ ತರಾಟೆಗೆ ತಗೆದುಕೊಂಡಿದ್ದಾರೆ.

ಹುಣಸೂರು ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಫಿಕ್ಸ್

ಹಾಸ್ಟೆಲ್‌ನ ಯಾವ ಕೊಠಡಿಯಲ್ಲೂ ಫ್ಯಾನ್‌ ಇಲ್ಲ, ಸೋಲಾರ್‌ ಕೆಟ್ಟು ಸುಮಾರು ತಿಂಗಳಾಗಿದೆ. ಬಿಸಿ ನೀರು ಸ್ನಾನ ಮಾಡಲು ನಾವು ಊರಿಗೆ ಹೋಗಬೇಕು. ವಿದ್ಯಾರ್ಥಿಗಳಿಗಾಗಿ ಸರ್ಕಾರ ಸಾಕಷ್ಟು ಖರ್ಚು ಮಾಡುತ್ತಿದ್ದರೂ ಸಮಸ್ಯೆ ಯಾಕೆ ಪರಿಹರಿಸುತ್ತಿಲ್ಲ. ತಟ್ಟೆಹಿಡಿದುಕೊಂಡು ಹೋಗುವುದಕ್ಕೆ ನಾವೇನು ಪ್ರಾಥಮಿಕ ಶಾಲಾ ಮಕ್ಕಳಾ..? ಒಂದು ತಟ್ಟೆ ಕೊಡಲೂ ಯೋಗ್ಯತೆ ಇಲ್ಲ. ಬಲ್ಪ್‌ ಕೆಟ್ಟಿದೆ ಹಾಕಿ ಎಂದರೆ ದುಡ್ಡಿಲ್ಲ ಅಂತಾರೆ. ನಾವೇ ದುಡ್ಡು ಸಂಗ್ರಹಿಸಿಕೊಂಡು ಬಲ್ಪ್‌ ಹಾಕಿಕೊಳ್ಳುವುದಾದರೆ ನೀವು ಯಾಕೆ ಇರಬೇಕು ಎಂದು ಅವರು ಕಿಡಿಕಾರಿದರು.

ದಸರಾ ಪ್ರವಾಸಿಗರ ಮೊಬೈಲ್, ಹಣ ಸುಲಿಗೆ

ಉಳಿದಂತೆ ಸಂಶೋಧಕರಿಗೆ ಉಚಿತ ಲ್ಯಾಪ್‌ಟಾಪ್‌ ನೀಡಬೇಕು, ಐದು ವರ್ಷದವರೆಗೆ ಶಿಷ್ಯವೇತನ ನೀಡಬೇಕು, ಸ್ಪರ್ಧಾ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪಿಸಬೇಕು, ಗುಣಮಟ್ಟದ ಆಹಾರ ಮತ್ತು ನೀರು ಪೂರೈಸಬೇಕು, ಪ್ರತಿ ಮೂರು ತಿಂಗಳಿಗೊಮ್ಮೆ ಕುಲಪತಿ, ಕುಲಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು: ಚಾಮುಂಡಿಗೆ ರಾಷ್ಟ್ರಪತಿ ನಮನ

ವಾರ್ಡನ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಧ್ಯಾಪಕರು ವಾರ್ಡನ್‌ಗಳಾದರೆ ಗ್ರೇಸ್‌ ಮಾರ್ಕ್ಸ್ ಕೊಡುವುದಿಲ್ಲ ಎಂದು ಹೆದರಿಸುತ್ತಾರೆ. ವಿದ್ಯಾರ್ಥಿಗಳ ಈ ಎಲ್ಲ ಸಮಸ್ಯೆ ಆಲಿಸಿದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌, ಇನ್ನೆರಡು ದಿನದಲ್ಲಿ ಈ ಎಲ್ಲಾ ಸಮಸ್ಯೆ ಪರಿಹರಿಸಲಾಗುವುದು. ನಾವು ಯಾವಾಗಲೂ ವಿದ್ಯಾರ್ಥಿಗಳ ಪರ ಇರುತ್ತೇನೆ. ಕೂಡಲೇ ಕ್ರಮ ಜರುಗಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಈ ವೇಳೆ ಕುಲಸಚಿವರಾದ ಪ್ರೊ.ಆರ್‌.ಶಿವಪ್ಪ, ಪ್ರೊ. ಮಹದೇವನ್‌, ಮಾಜಿ ಮೇಯರ್‌ ಪುರುಷೋತ್ತಮ್‌ ಇದ್ದರು.

ನಿಮ್ಗೆ ಗ್ಯಾಸ್ಟ್ರಿಕ್‌ ಅಂತಾರೆ?

ಕೊಠಡಿಯಲ್ಲಿ ಗಾಳಿ ಬೇಕು ಅಂದರೆ ಸೊಳ್ಳೆ ಕಾಟ. ಬಾಗಿಲು ಹಾಕಿದರೆ ಜೀವ ಹೋಗುತ್ತದೆ. ಮತ್ತೊಂದು ಕಡೆ ತಿಗಣೆ ಕಾಟ. ಕೊಠಡಿಯಿಂದ ಹೊರ ಬಂದು ಮಲಗಬೇಕಾದ ಪರಿಸ್ಥಿತಿ ಇದೆ. ತಿಗಣೆ ಔಷಧ ಸಿಂಪಡಿಸುವಂತೆ ಹೇಳಿದರೂ ಪ್ರಯೋಜನವಾಗಿಲ್ಲ. ಅಲ್ಲದೇ, ನಾವು ಸೋಡಾ ಹಾಕಬೇಡಿ ಅಂದ್ರೆ ನಿಮ್ಗೆ ಗ್ಯಾಸ್ಟ್ರಿಕ್‌ ಅಂತಾರೆ?, ಟೋಮಾಟೋ ಬಾತ್‌ ಅಂತಾರೆ. ಅದರಲ್ಲಿ ಒಂದು ಟೋಮಾಟೋನೂ ಇರಲ್ಲ. ಚಿಕನ್‌ ಮಾಡಿ ಕೊಡ್ತೀವಿ ಅಂತ ಬರೀ ಕುತ್ತಿಗೆ, ಕಾಲು ಹಾಕಿ ತಿನ್ನಿ ಅಂತಾರೆ. ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾದರೆ ಸುಮ್ಮನಿರುತ್ತೀರಾ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

click me!