
ಇಂದಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಅತ್ಯಂತ ಸುಲಭವಾಗಿದೆ. ಹಿಂದೆ ಮನೆಬಾಗಿಲಿಗೆ ವಸ್ತು ತಲುಪಲು 2 ರಿಂದ 4 ದಿನ ಬೇಕಾಗುತ್ತಿತ್ತು. ಆದರೆ ಈಗ 10-15 ನಿಮಿಷಗಳಲ್ಲಿ ವಸ್ತುಗಳನ್ನು ತಲುಪಿಸುವ 'ಕ್ವಿಕ್ ಕಾಮರ್ಸ್' (Quick Commerce) ಸೇವೆಗಳು ಜನಪ್ರಿಯವಾಗಿವೆ. ಆದರೆ ಈ ತರಾತುರಿಯ ಸೇವೆಯನ್ನೇ ಕಣ್ಣು ಮುಚ್ಚಿ ನಂಬಿದರೆ ಎಂತಹ ದೊಡ್ಡ ನಷ್ಟವಾಗಬಹುದು ಎಂಬುದಕ್ಕೊಂದು ಬೆಚ್ಚಿಬೀಳಿಸುವ ಉದಾಹರಣೆ ಇಲ್ಲಿದೆ.
ಘಟನೆಯು ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಆದಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ನಲ್ಲಿ ನಡೆದಿದೆ. ಗ್ರಾಹಕರೊಬ್ಬರು ಸೆಪ್ಟೆಂಬರ್ 27 ರಂದು ಇನ್‌ಸ್ಟಾಮಾರ್ಟ್ ಮೂಲಕ ಸುಮಾರು ₹70,000 ಪಾವತಿಸಿ ಸೋನಿ ಕಂಪನಿಯ ಅತ್ಯಂತ ಬೇಡಿಕೆಯ 'PS5 ಗೇಮಿಂಗ್ ಕನ್ಸೋಲ್' (Sony PS5 Game Console) ಆರ್ಡರ್ ಮಾಡಿದ್ದರು. ಪ್ರಾಥಮಿಕವಾಗಿ ಪಾರ್ಸಲ್ ಸೀಲ್ ಆಗಿ ಬಂದಿತ್ತು ಮತ್ತು ಸರಿಯಾಗಿ ಕೆಲಸ ಮಾಡುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಅದರಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡವು.
ಗ್ರಾಹಕರು ಗೇಮಿಂಗ್ ಕನ್ಸೋಲ್ ಅನ್ನು ಸೋನಿಯ ಅಧಿಕೃತ ವ್ಯವಸ್ಥೆಯಲ್ಲಿ ನೋಂದಾಯಿಸಲು (Register) ಯತ್ನಿಸಿದಾಗ ಅಸಲಿ ಸಮಸ್ಯೆ ಶುರುವಾಯಿತು. ಸೋನಿ ಇಂಡಿಯಾದ ಕಸ್ಟಮರ್ ಸಪೋರ್ಟ್ ಟೀಮ್ ವಾರಂಟಿ ನೋಂದಣಿಗೆ ಇನ್‌ವಾಯ್ಸ್ ಬಿಲ್, ಸೀರಿಯಲ್ ನಂಬರ್, ವಾರಂಟಿ ಕಾರ್ಡ್ ಹಾಗೂ ಮಾರಾಟಗಾರರ (Seller) ಹೆಸರನ್ನು ಕೇಳಿತು. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನೀಡಿರುವ ಬಿಲ್‌ನಲ್ಲಿ ಮಾರಾಟಗಾರರ ಹೆಸರು ‘PYD ರಿಟೇಲ್ ಪ್ರೈವೇಟ್ ಲಿಮಿಟೆಡ್ (ಅವಂತಿಕಾ)’ ಎಂದು ನಮೂದಾಗಿತ್ತು. ಆದರೆ ಸೋನಿ ಕಂಪನಿಯು, "ಈ PYD ರಿಟೇಲ್ ನಮ್ಮ ಅಧಿಕೃತ ಡೀಲರ್ (Authorised Dealer) ಅಲ್ಲ. ಹಾಗಾಗಿ ಈ ಪ್ರಾಡಕ್ಟ್‌ಗೆ ವಾರಂಟಿ ಅಥವಾ ರಿಪ್ಲೇಸ್‌ಮೆಂಟ್ ನೀಡಲು ಸಾಧ್ಯವಿಲ್ಲ" ಎಂದು ಕಡಾಖಂಡಿತವಾಗಿ ಹೇಳಿಬಿಟ್ಟಿತು!
ದೋಷಪೂರಿತ ಪ್ರಾಡಕ್ಟ್ ಮತ್ತು ವಾರಂಟಿ ನಿರಾಕರಣೆಯಿಂದ ಕಂಗಾಲಾದ ಗ್ರಾಹಕರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಅನ್ನು ಸಂಪರ್ಕಿಸಿದರು. ಇನ್‌ಸ್ಟಾಮಾರ್ಟ್ ಸಪೋರ್ಟ್ ಟೀಮ್ ಇದುವರೆಗೆ ಬರಿ ಆರು ಬಾರಿ 'ಕ್ಷಮಿಸಿ' ಎಂದು ಸಂದೇಶ ಕಳುಹಿಸಿದೆಯೇ ಹೊರತು, ವಸ್ತುವನ್ನು ಮರಳಿ ಪಡೆಯಲು ಅಥವಾ ಹಣ ವಾಪಸ್ ನೀಡಲು ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಬದಲಾಗಿ, ನೇರವಾಗಿ ಸೋನಿ ಕಂಪನಿಯನ್ನೇ ಸಂಪರ್ಕಿಸುವಂತೆ ಗ್ರಾಹಕರಿಗೆ ಸಲಹೆ ನೀಡಿದೆ. ಅಂತಿಮವಾಗಿ ಸೋನಿ ಕಂಪನಿಯು ಗ್ರಾಹಕರಿಗೆ ನೀಡಿರುವ ಸ್ಪಷ್ಟನೆಯ ಪ್ರಕಾರ—ಪ್ರಸ್ತುತ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಸೋನಿಯ ಯಾವುದೇ ಅಧಿಕೃತ ಡೀಲರ್‌ಗಳಿಲ್ಲ! ಕೇವಲ ಜೆಪ್ಟೋ (Zepto) ದಂತಹ ಕೆಲವೇ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಕೆಲವೇ ಕೆಲವು ಅಧಿಕೃತ ಮಾರಾಟಗಾರರಿದ್ದಾರೆ.
ಈ ಇಡೀ ಕಟು ಅನುಭವವನ್ನು ಗ್ರಾಹಕರು ರೆಡ್ಡಿಟ್ (Reddit) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ದಾರಿ ಕಾಣದೆ ಅವರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (National Consumer Helpline) ದೂರು ನೀಡಿದ್ದು, ಕಂಪನಿಗೆ ಕಾನೂನು ನೋಟಿಸ್ ಕೂಡ ಕಳುಹಿಸಿದ್ದಾರೆ.
ಈ ಘಟನೆಯು ಆನ್‌ಲೈನ್‌ನಲ್ಲಿ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಎಲ್ಲರಿಗೂ ದೊಡ್ಡ ಪಾಠವಾಗಿದೆ. ಕ್ವಿಕ್ ಕಾಮರ್ಸ್ ಆ್ಯಪ್‌ಗಳಲ್ಲಿ 10 ನಿಮಿಷಕ್ಕೆ ಡೆಲಿವರಿ ಸಿಗುತ್ತದೆ ಎಂಬ ಆತುರದಲ್ಲಿ, ಆ ಪ್ರಾಡಕ್ಟ್ ಮಾರಾಟ ಮಾಡುತ್ತಿರುವ 'ಸೆಲ್ಲರ್' ಯಾರು ಎಂಬುದನ್ನು ಗಮನಿಸುವುದು ಅತ್ಯಗತ್ಯ. ಸೆಲ್ಲರ್ ಅಧಿಕೃತವೇ ಅಲ್ಲವೇ ಎಂದು ಪರಿಶೀಲಿಸದೆ ಖರೀದಿಸಿದರೆ, ನಾಳೆ ಕಂಪನಿಗಳು ವಾರಂಟಿ ಕೊಡಲು ನಿರಾಕರಿಸುತ್ತವೆ ಮತ್ತು ಆ್ಯಪ್‌ಗಳು ಜವಾಬ್ದಾರಿಯಿಂದ ಜಾರಿಕೊಳ್ಳುತ್ತವೆ.