EPFO ವೇತನ ಮಿತಿ ₹25,000ಕ್ಕೆ ಏರಿಕೆ; ಸೆಪ್ಟೆಂಬರ್ ತಿಂಗಳ ನಿಮ್ಮ ಸಂಬಳ ಮತ್ತು ಪಿಎಫ್ ಲೆಕ್ಕಾಚಾರ ಇಲ್ಲಿದೆ!

Published : Sep 29, 2026, 11:07 PM IST
EPFO Pension

ಸಾರಾಂಶ

ಇಪಿಎಫ್‌ಒ ಖಾಸಗಿ ವಲಯದ ಉದ್ಯೋಗಿಗಳ ಕಡ್ಡಾಯ ವೇತನ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಹೆಚ್ಚಿಸಿದೆ. ಸೆಪ್ಟೆಂಬರ್ 17 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಈ ತಿಂಗಳನ್ನು ಪರಿವರ್ತನೆಯ ಅವಧಿ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಉದ್ಯೋಗಿಗಳ ಪಿಎಫ್ ಮತ್ತು ಪಿಂಚಣಿ ಲೆಕ್ಕಾಚಾರದಲ್ಲಿ ಮೂರು ವಿಭಿನ್ನ ಸನ್ನಿವೇಶಗಳ ಮೂಲಕ ಬದಲಾವಣೆಗಳನ್ನು ವಿವರಿಸಲಾಗಿದೆ.

ಬೆಂಗಳೂರು; ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಸಿಹಿ ಸುದ್ದಿ ನೀಡಿದ್ದು, ಕಡ್ಡಾಯ ಇಪಿಎಫ್ ಕವರೇಜ್‌ಗಾಗಿ ವೇತನ ಮಿತಿಯನ್ನು ತಿಂಗಳಿಗೆ ₹15,000 ರಿಂದ ₹25,000 ಕ್ಕೆ ಹೆಚ್ಚಿಸಿದೆ. ಈ ಹೊಸ ನಿಯಮವು ಸೆಪ್ಟೆಂಬರ್ 17, 2026 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ತಿಂಗಳ ಮಧ್ಯಭಾಗದಲ್ಲಿ ಈ ನಿಯಮ ಜಾರಿಗೆ ಬಂದಿರುವುದರಿಂದ, ಸೆಪ್ಟೆಂಬರ್ ತಿಂಗಳ ಸಂಬಳದಲ್ಲಿ ಪಿಎಫ್ (PF), ಪಿಂಚಣಿ (EPS) ಮತ್ತು ಉದ್ಯೋಗಿಗಳ ಡೆಪಾಸಿಟ್ ಲಿಂಕ್ಡ್ ಇನ್ಶೂರೆನ್ಸ್ (EDLI) ಕಡಿತ ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಗೊಂದಲ ಉದ್ಯೋಗಿಗಳಲ್ಲಿ ಕಾಡುತ್ತಿತ್ತು. ಈ ಗೊಂದಲವನ್ನು ಪರಿಹರಿಸಲು ಇಪಿಎಫ್‌ಒ, ಸೆಪ್ಟೆಂಬರ್ ತಿಂಗಳನ್ನು 'ಪರಿವರ್ತನೆಯ ಅವಧಿ' (Transition Period) ಎಂದು ಪರಿಗಣಿಸಿ, ₹20,000 ಮೂಲ ವೇತನ ಪಡೆಯುವ ಉದ್ಯೋಗಿಗಳ ಸಂಬಳದ ಲೆಕ್ಕಾಚಾರವನ್ನು 3 ವಿಭಿನ್ನ ಸನ್ನಿವೇಶಗಳಲ್ಲಿ ವಿವರಿಸಿದೆ. ಸೆಪ್ಟೆಂಬರ್ 1 ರಿಂದ 16 ರವರೆಗಿನ ಮೊದಲ 16 ದಿನಗಳಿಗೆ ಹಳೆಯ ₹15,000 ಮಿತಿ ಹಾಗೂ ಸೆಪ್ಟೆಂಬರ್ 17 ರಿಂದ 30 ರವರೆಗಿನ ಉಳಿದ 14 ದಿನಗಳಿಗೆ ಹೊಸ ₹25,000 ಮಿತಿ ಅನ್ವಯಿಸುತ್ತದೆ.

1. ಸನ್ನಿವೇಶ 'ಎ': ಸೆಪ್ಟೆಂಬರ್ 17 ರಿಂದ ಹೊಸದಾಗಿ ಇಪಿಎಫ್ ವ್ಯಾಪ್ತಿಗೆ ಬಂದವರು!

ಹಿಂದೆ ₹15,000 ಕ್ಕಿಂತ ಹೆಚ್ಚು ಮೂಲ ವೇತನ (₹20,000) ಹೊಂದಿದ್ದು, ಕಡ್ಡಾಯ ಪಿಎಫ್‌ನಿಂದ ಹೊರಗುಳಿದಿದ್ದ ಉದ್ಯೋಗಿಗಳು ಸೆಪ್ಟೆಂಬರ್ 17 ರಿಂದ ಹೊಸದಾಗಿ ಇಪಿಎಫ್‌ಗೆ ಸೇರ್ಪಡೆಗೊಳ್ಳುತ್ತಾರೆ.

ವೇತನ ಲೆಕ್ಕಾಚಾರ; ಸೆಪ್ಟೆಂಬರ್ 1 ರಿಂದ 16 ರವರೆಗೆ ಯಾವುದೇ ಪಿಎಫ್ ಕಡಿತವಿರುವುದಿಲ್ಲ. ಸೆಪ್ಟೆಂಬರ್ 17 ರಿಂದ 30 ರವರೆಗಿನ 14 ದಿನಗಳ ಅನುಪಾತದ ವೇತನ ₹9,333.33 ಆಗಿರುತ್ತದೆ.

ಪಿಎಫ್ ಕಡಿತ; ಉದ್ಯೋಗಿಯ ಪಾಲಿನಿಂದ 12% ನಂತೆ ₹1,120 ಕಡಿತಗೊಳ್ಳುತ್ತದೆ.

ಸಂಸ್ಥೆಯ ಕೊಡುಗೆ; ಕಂಪನಿಯು ಇಪಿಎಫ್‌ಗೆ (3.67%) ₹342.53 ಮತ್ತು ಪಿಂಚಣಿ ನಿಧಿಗೆ (EPS - 8.33%) ₹777.47 ಜಮಾ ಮಾಡುತ್ತದೆ.

ಒಟ್ಟು ಜಮಾ; ಉದ್ಯೋಗಿ ಹಾಗೂ ಕಂಪನಿಯ ಪಾಲು ಸೇರಿ ಒಟ್ಟು ₹2,240 ಖಾತೆಗೆ ಜಮೆಯಾಗುತ್ತದೆ. ಹೆಚ್ಚುವರಿಯಾಗಿ ಸಂಸ್ಥೆಯು ₹46.67 EDLI ವಿಮಾ ಕವರೇಜ್‌ಗಾಗಿ ಪಾವತಿಸುತ್ತದೆ.

2. ಸನ್ನಿವೇಶ 'ಬಿ': ಈಗಾಗಲೇ ಇಪಿಎಫ್‌ನಲ್ಲಿದ್ದು, ಈಗ ಪಿಂಚಣಿಗೆ (EPS) ಅರ್ಹರಾದವರು!

ಅನೇಕ ಉದ್ಯೋಗಿಗಳು ತಮ್ಮ ಪೂರ್ಣ ₹20,000 ವೇತನದ ಮೇಲೆ 12% ಪಿಎಫ್ ಕಡಿತಗೊಳಿಸುತ್ತಿದ್ದರೂ, ಇಪಿಎಸ್ (EPS) ವ್ಯಾಪ್ತಿಗೆ ಬಂದಿರಲಿಲ್ಲ. ಸೆಪ್ಟೆಂಬರ್ 17 ರಿಂದ ಅವರು ಪಿಂಚಣಿ ಯೋಜನೆಗೂ ಅರ್ಹರಾಗಿದ್ದಾರೆ.

ಉದ್ಯೋಗಿಯ ಕಡಿತ; ಪೂರ್ಣ ₹20,000 ಮೂಲ ವೇತನದ ಮೇಲೆ 12% ಅಂದರೆ ₹2,400 ಕಡಿತಗೊಳ್ಳುತ್ತದೆ.

ಸಂಸ್ಥೆಯ ಕೊಡುಗೆ; ಮೊದಲ 16 ದಿನಗಳಿಗೆ ಸಂಸ್ಥೆಯು ಪೂರ್ಣ 12% (₹1,280) ಅನ್ನು ಪಿಎಫ್ ಖಾತೆಗೆ ನೀಡುತ್ತದೆ. ಸೆಪ್ಟೆಂಬರ್ 17 ರ ನಂತರದ 14 ದಿನಗಳಿಗೆ ಸಂಸ್ಥೆಯ ಪಾಲಿನಿಂದ ₹342.53 ಪಿಎಫ್ ಖಾತೆಗೆ ಮತ್ತು ₹777.47 ಪಿಂಚಣಿ ಖಾತೆಗೆ ವರ್ಗಾವಣೆಯಾಗುತ್ತದೆ.

ಒಟ್ಟು ಕೊಡುಗೆ; ಕಂಪನಿಯ ಒಟ್ಟು ಪಿಎಫ್ ಕೊಡುಗೆ ₹1,622.53 ಮತ್ತು ಪಿಂಚಣಿ ಕೊಡುಗೆ ₹777.47 ಆಗಿದ್ದು, ಒಟ್ಟು ₹4,800 ಜಮೆಯಾಗುತ್ತದೆ.

3. ಸನ್ನಿವೇಶ 'ಸಿ': ಈಗಾಗಲೇ ಇಪಿಎಫ್ ಮತ್ತು ಇಪಿಎಸ್ ಎರಡರಲ್ಲೂ ಇದ್ದವರು!

ಹಳೇ ನಿಯಮ ಏನು ಹೇಳುತ್ತದೆ? 
ಹಳೆಯ ನಿಯಮದಂತೆ ₹15,000 ಸೀಮಿತ ಮಿತಿಯಲ್ಲಿ ಪಿಎಫ್ ಮತ್ತು ಪಿಂಚಣಿ ಕಡಿತವಾಗುತ್ತಿದ್ದ ಹಿರಿಯ ಉದ್ಯೋಗಿಗಳಿಗೆ ಈಗ ಪೂರ್ಣ ₹20,000 ವೇತನದ ಮೇಲೆ ಸೌಲಭ್ಯ ಸಿಗಲಿದೆ. ವೇತನ ಲೆಕ್ಕಾಚಾರ; ಮೊದಲ 16 ದಿನಗಳ ವೇತನವನ್ನು ₹15,000 ಮಿತಿಯ ಆಧಾರದಲ್ಲಿ ₹8,000 ಎಂದು ಹಾಗೂ ಉಳಿದ 14 ದಿನಗಳ ವೇತನವನ್ನು ₹20,000 ಮಿತಿಯ ಆಧಾರದಲ್ಲಿ ₹9,333.33 ಎಂದು ಲೆಕ್ಕಹಾಕಲಾಗುತ್ತದೆ. ಸರಾಸರಿ ವೇತನ; ಸೆಪ್ಟೆಂಬರ್ ತಿಂಗಳಿನಲ್ಲಿ ಇವರ ಒಟ್ಟು ಸರಾಸರಿ ಪರಿಗಣಿತ ವೇತನ ₹17,333.33 ಆಗಿರುತ್ತದೆ. ಇದರ ಆಧಾರದಲ್ಲಿ ಪಿಎಫ್ ಹಾಗೂ ಪಿಂಚಣಿ ಕಡಿತಗಳು ಅನ್ವಯವಾಗುತ್ತವೆ. ಅಕ್ಟೋಬರ್ 1 ರಿಂದ ಸಂಪೂರ್ಣ ತಿಂಗಳು ಹೊಸ ₹25,000 ಮಿತಿಯಲ್ಲೇ ಲೆಕ್ಕಾಚಾರ ನಡೆಯಲಿದ್ದು, ಉದ್ಯೋಗಿಗಳ ನಿವೃತ್ತಿ ನಿಧಿ ಹಾಗೂ ಪಿಂಚಣಿ ಭದ್ರತೆ ಮತ್ತಷ್ಟು ಹೆಚ್ಚಲಿದೆ.

PREV
Read more Articles on
click me!

Recommended Stories

Post office Schemes ಪತ್ನಿ ಜೊತೆ ಈ ಖಾತೆ ತೆರೆಯಿರಿ, ಪ್ರತಿ 3 ತಿಂಗಳಿಗೂ ಸಿಗಲಿದೆ ₹25,899!
UPI; ₹6,000 ಬದಲು 3 ಬಾರಿ ₹2,000 ಪಾವತಿಸಿದರೆ ಎಂಡಿಆರ್ (MDR) ಚಾರ್ಜ್ ತಪ್ಪಿಸಬಹುದೇ? ಇಲ್ಲಿದೆ ಅಸಲಿ ನಿಯಮ!