
ಸಿನಿಮಾ: ವಿದಾಮುಯಾರ್ಚಿ
ಒಟಿಟಿ: ನೆಟ್ ಫ್ಲಿಕ್ಸ್
ತಾರಾಗಣ: ಅಜಿತ್, ತ್ರಿಷಾ, ಅರ್ಜುನ್ ಸರ್ಜಾ
ಜಾನರ್: ಥ್ರಿಲ್ಲಿಂಗ್ ಸಸ್ಪೆನ್ಸ್
ನಿರ್ದೇಶನ: ಮಗಿಝ್ ತಿರುಮೇಣಿ
ಅರ್ಜುನ್ ಮತ್ತು ಕಾಯಲ್ ದಂಪತಿಗಳು 12 ವರ್ಷ ತಮ್ಮ ವೈವಾಹಿಕ ಜೀವನವನ್ನು ಕಳೆದಿದ್ದಾರೆ. ಅಜೆರ್‌ಬೈಝನ್‌ನ ಬಾಕು ವಿನಲ್ಲಿ ವಾಸಿಸುತ್ತಾರೆ. ಇಬ್ಬರೂ ಇಷ್ಟಪಟ್ಟೇ ಮದುವೆಯಾಗಿದ್ದು. ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಾರೆ. ಗೌರವಿಸುತ್ತಾರೆ. ಅರ್ಜುನ್‌ನ ಕಸಿನ್ ಅನುವಿನ ಗೆಳತಿ ಕಾಯಲ್. ಅನು ವಿನ ಮುಖಾಂತರ ಪರಿಚಯವಾದ ಈ ಸ್ನೇಹ ಪ್ರೇಮವಾಗಿ ಮದುವೆಯಲ್ಲಿ ಪರ‍್ಯಾವಸನಗೊಂಡಿದೆ. ಅರ್ಜುನ್ ಮತ್ತು ಕಾಯಲ್ 12 ವರ್ಷಗಳ ದಾಂಪತ್ಯವನ್ನು ಬಹಳ ಸಂತೋಷದಿಂದ ಕಳೆದಿದ್ದಾರೆ. ಕಾಯಲ್ ಒಮ್ಮೆ ಗರ್ಭಿಣಿಯಾಗಿ ಗರ್ಭಪಾತ ಆಗಿರುತ್ತದೆ. ಮತ್ತೆ ಅವಳೆಂದೂ ಗರ್ಭ ಧರಿಸಲು ಸಾಧ್ಯವಿಲ್ಲ ಎಂಬು ವೈದ್ಯರು ಹೇಳಿರುತ್ತಾರೆ. ಇದು ಅರ್ಜುನ್ ಹಾಗೂ ಕಾಯಲ್‌ಗೆ ಆಘಾತ ತಂದರೂ ಒಬ್ಬರೊನ್ನೊಬ್ಬರು ಪ್ರೀತಿಸುವುದು ಕಡಿಮೆಯಾಗಿಲ್ಲ. ಆದರೆ ಇತ್ತೀಚೆಗೆ ಕಾಯಲ್ ನ ನಡವಳಿಕೆ ಅರ್ಜುನ್ ಗೆ ಅಚ್ಚರಿ ಹಾಗೂ ಗೊಂದಲ ತಂದಿದೆ. ಅರ್ಜುನ್ ಒಂದು ಒಂದು ದೊಡ್ಡ ಅಂತಾರಾಷ್ಟೀಯ ಕಂಪೆನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿರುತ್ತಾನೆ. ಒಳ್ಳೆಯ ಸಂಬಳ ಬಂಗಲೆಯಂಥ ಮನೆ, ಐಷಾರಾಮಿ ಕಾರು ಉಡಲು ಉಣ್ಣಲು ಕೊರತೆಯಿಲ್ಲದ ಜೀವನ, ದುಬಾರಿ ಜೀವನಶೈಲಿ ಎಲ್ಲವೂ ಇದೆ. ಆದರೂ ಕಾಯಲ್‌ಳ ನಡವಳಿಕೆ ಅರ್ಜುನ್‌ಗೆ ನುಂಗಲಾರದ ತುತ್ತಾಗಿದೆ.
ಕಾಯಲ್ ಒಂದು ದಿನ ಅರ್ಜುನ್ ಗೆ ಹೇಳುತ್ತಾಳೆ. 'ನಮ್ಮ ಮದುವೆಯಾಗಿ 12 ವರ್ಷವಾಗಿದೆ, ಸಾಕಷ್ಟು ಸಂತಸದ ಜೀವನವನ್ನು ಇಬ್ಬರೂ ಒಟ್ಟಿಗೆ ಕಳೆದಿದ್ದೇವೆ. ನನಗೆ ಈಗ ಮತ್ತೊಬ್ಬ ಗೆಳೆಯನಾಗಿದ್ದಾನೆ. ನಾನು ನಿನ್ನಿಂದ ವಿಚ್ಛೇದನೆ ಪಡೆಯುತ್ತೇನೆ. ನಾವಿಬ್ಬರೂ ಹೀಗೆ ಮುಂದುವರೆದರೆ ನಮ್ಮಿಬ್ಬರ ಮಧ್ಯೆ ದ್ವೇಷ ಬೆಳೆಯುತ್ತದೆಯೇ ವಿನಾ ಪ್ರೀತಿ ಅಲ್ಲ. ವಿಚ್ಚೇದನೆ ನಮ್ಮಿಬ್ಬರಿಗೂ ಒಳ್ಳೆಯದು' ಅರ್ಜುನ್ ಹೆಂಡತಿಯ ಮಾತು ಕೇಳಿ ಷಾಕ್ ಆಗುತ್ತದೆ. ಅವಳು ಇನ್ನೊಬ್ಬರನ್ನು ಪ್ರೀತಿಸುತ್ತಿರುವ ವಿಷಯ ತಿಳಿದು ಕುಗ್ಗಿಹೋಗುತ್ತಾನೆ. ಆದರೂ ಅವಳನ್ನು ಅತಿಯಾಗಿ ಪ್ರೀತಿಸುವ ಅವನು ಅವಳ ಆಸೆಗೆ ನಿರ್ಧಾರಕ್ಕೆ ಅಡ್ಡಿಪಡಿಸುವುದಿಲ್ಲ. ನಿನ್ನಿಚ್ಛೆಯಂತೆ ಆಗಲಿ ಎಂದು ನೋವಿನಿಂದ ಹೇಳುತ್ತಾನೆ. ಕಾಯಲ್ ತಾನು ವಿಚ್ಛೇದನೆ ಪ್ರಕ್ರಿಯೆ ಮುಗಿಯುವ ವರೆಗೂ ತನ್ನ ತವರು ಮನೆ ತಿಬ್ಲಿಸ್ ನಲ್ಲಿ ಇರುವುದಾಗಿ ಹೇಳುತ್ತಾಳೆ. ಅದಕ್ಕೆ ಒಪ್ಪುವ ಅರ್ಜುನ್ ತಾನೇ ಕರೆದುಕೊಂಡು ಹೋಗುವುದಾಗಿಯೂ ತಾವಿಬ್ಬರು ಒಟ್ಟಿಗೆ ಮಾಡುವ ಕೊನೆಯ ಪ್ರಯಾಣ ಇದೆಂದು ನಿರಾಕರಣೆ ಮಾಡಬಾರದೆಂತಲೂ ಕೇಳಿಕೊಳ್ಳುತ್ತಾನೆ. ಕಾಯಲ್ ನಿರ್ವಾಹವಿಲ್ಲದೆ ಒಪ್ಪುತ್ತಾಳೆ.
ಇಬ್ಬರೂ ತಮ್ಮದೇ ಕಾರಿನಲ್ಲಿ ತಿಬ್ಲಿಸ್ ಗೆ ಹೊರಡುತ್ತಾರೆ. ಸಪಾಟಾದ ನೇರ ಹಾದಿ ಮೇಲೆ ಉರಿಯುವ ಸೂರ್ಯ, ಅಕ್ಕಪಕ್ಕ ಒಂದೂ ಗಿಡಮರಗಳಿಲ್ಲದ ಮರಳಿನ ದಿಬ್ಬಗಳು. ಕಾರು ವೇಗವಾಗಿ ಚಲಿಸುತ್ತಿರುತ್ತದೆ. ಅಷ್ಟರಲ್ಲಿ ಐದಾರು ಜನ ಕುಳಿತಿರುವ ಮತ್ತೊಂದು ಕಾರು ಇವರಿಗೆ ಉಜ್ಜಿಕೊಂಡು ಮುಂದೆ ಹೋಗುತ್ತದೆ. ಅರ್ಜುನ್ ಸಡನ್ ಬ್ರೇಕ್ ಹಾಕುತ್ತಾನೆ. ಆ ಅಪರಿಚಿತರು ಇರುವ ಕಾರು ಕೊಂಚ ಮುಂದೆ ಹೋಗಿ ನಿಂತು ಅದರಲ್ಲಿ ನಾಯಕನಂತಿರುವ ಒಬ್ಬ ಅರ್ಜುನ್ ಕಡೆಗೆ ನೋಡಿ ಸಲಾಂ ಮಾಡಿ ಕೊಂಕು ನಗೆ ನಕ್ಕು ಮುಂದೆ ಸಾಗುತ್ತಾನೆ. ಮುಂದೆ ಒಂದು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸುವ ಅರ್ಜುನ್ ಕಾರಿಗೆ ಪೆಟೋಲ್ ತುಂಬಿಸುವಾಗ ಕಾಯಲ್ ಕೂಡ ಇಳಿದು ಅಲ್ಲಿ ಒಂದು ಷಾಪ್ ನಲ್ಲಿ ಅವಳಿಗೆ ಬೇಕಾದ್ದೇನೋ ಖರೀದಿಸುತ್ತಾಳೆ. ಅಲ್ಲಿ ಒಂದು ದಂಪತಿಗಳ ಪರಿಚಯವಾಗುತ್ತದೆ. ಅವನು ರಕ್ಷಿತ್, ಅವಳು ದೀಪಿಕಾ. ಇವರೂ ಇಂಡಿಯನ್ಸ್ ಎಂದು ತಿಳಿದು ಕಾಯಲ್ ಅವರಿಬ್ಬರನ್ನೂ ಮಾತನಾಡಿಸುತ್ತಾಳೆ. ಅವರಿಬ್ಬರೂ ತಾವು ಜೀವನದ ಪಾರ್ಟನರ್ ಅಲ್ಲದೆ ವ್ಯವಹಾರದಲ್ಲೂ ಪಾಲುದಾರರೆಂದು ತಮ್ಮದೇ ಸರಕು ಸಾಗಿಸು ವ್ಯಾಗನ್ ಗಳು ಇವೆಯೆಂದು ತೋರಿಸುತ್ತಾರೆ. ಅವರು ತೋರಿಸುವ ವ್ಯಾಗನ್ ಅತಿದೊಡ್ಡ ವ್ಯಾಗನ್ ಆಗಿರುತ್ತದೆ. ಇವರು ಮಾತನಾಡುತ್ತಿರುವಾಗಲೇ ಆಗಲೇ ಅರ್ಜುನ್ ಕಾರಿಗೆ ಡ್ಯಾಶ್ ಹೊಡೆದ ಅಪರಿಚಿತರಿದ್ದ ಕಾರೂ ಬರುತ್ತದೆ. ಆ ಕೊಂಕು ನಗೆ ನಕ್ಕವನು ಅರ್ಜುನ್‌ನನ್ನು ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾನೆ. ಇವನ ಹತ್ತಿರ ಮಾತೇನು ಎಂದು ಅರ್ಜುನ್ ಅವನನ್ನು ಅವಾಯ್ಡ್ ಮಾಡಿ ತಾನೇ ಸಾರಿ ಕೇಳಿ ಹೆಂಡತಿಯೊಂದಿಗೆ ತನ್ನ ಪ್ರಯಾಣ ಮುಂದುವರೆಸುತ್ತಾನೆ.
ಅರ್ಜುನ್ ಕಾಯಲ್ ಸಾಗುವಾಗ ಮತ್ತೆ ಅದೇ ಅಪರಿಚಿತರ ಕಾರು ಇವರನ್ನು ಹಿಂಬಾಲಿಸುತ್ತದೆ. ಅರ್ಜುನ್ ಗೆ ಟೆನ್ಷನ್ ಆಗುತ್ತದೆ. ಅಷ್ಟರಲ್ಲಿ ಅರ್ಜುನ್ ಕಾರು ಕೆಟ್ಟು ನಿಂತುಬಿಡುತ್ತದೆ. ಈಗ ಅರ್ಜುನ್ ಗೆ ಕಾಯಲ್ ಗೆ ಏನು ಮಾಡಬೇಕೆಂಬುದೇ ತೋಚುವುದಿಲ್ಲ. ಕಾರು ರಿಪೇರಿ ಮಾಡಲೂ ಆಗುವುದಿಲ್ಲ. ಏನೇ ನೋ ಪ್ರಯತ್ನ ಮಾಡಿದರೂ ಕಾರು ಒಂದಿAಚೂ ಅಲುಗಾಡುವುದಿಲ್ಲ. ಅಷ್ಟರಲ್ಲಿ ರಕ್ಷಿತ್ ಹಾಗೂ ದೀಪಿಕಾರ ಟ್ರಕ್ ಅಲ್ಲಿ ಬಂದು ನಿಲ್ಲುತ್ತದೆ. ರಕ್ಷಿತ್ ಏನಾಗಿದೆ ಎಂದು ಕೇಳುತ್ತಾನೆ? ಪೆಟ್ರೋಲ್ ಬಂಕ್ ಹತ್ತಿರ ಕಾಫಿ ಷಾಪಲ್ಲಿ ಪರಿಚಯವಾದವರು ಎಂದು ಕಾಯಲ್ ಹೇಳುತ್ತಾಳೆ. ಅರ್ಜುನ್ ಕಾರಿನ ಸಮಸ್ಯೆ ವಿವರಿಸುತ್ತಾನೆ. ಆದರೆ ಯಾವುದೇ ಸಹಕಾರ ಕೊಡಲಲ್ರಕ್ಷಿತ್ ನಿರಾಕರಿಸುತ್ತಾನೆ. ತಾನು ಬೇಗ ಹೋಗಿ ಗೂಡ್ಸ್ ಡೆಲಿವರಿ ಮಾಡಬೇಕಿದೆ ಎಂದು ಹೇಳುತ್ತಾನೆ. ಮುಂದೆ ಒಂದು ಹೊಟೆಲ್ ಇದೆ ಅಲ್ಲಿ ನಿನ್ನ ಹೆಂಡತಿಯನ್ನು ಬಿಡುತ್ತೇವೆ. ಅಲ್ಲಿಂದ ಯಾವುದಾರೂ ಮೆಕಾನಿಕ್ ಗೆ ಫೋನ್ ಮಾಡಿ ಕಳಿಸುತ್ತೇವೆ ಎನ್ನುತ್ತಾನೆ. ದೀಪಿಕಾ ಕೂಡ ಕಾಯಲ್ 'ಬಾ ಅಲ್ಲಿ ರೆಸ್ಟ್ ತಗೋಬಹುದು ಫ್ರೆಷ್ ಆಗಬಹುದು' ಎಂದು ಹೇಳುತ್ತಾಳೆ. ಈ ಗಂಡಹೆಂಡತಿಯನ್ನು ನಂಬಿ ಅರ್ಜುನ್ ಕಾಯಲ್ ಳನ್ನುಅವರ ಜೊತೆ ಕಳಿಸುತ್ತಾನೆ. ಮುಂದೆ ಒಂದು ತಾಸು ಪ್ರಯಾಣದಲ್ಲಿ ಹೋಟೆಲ್ ಇದೆ ಅಲ್ಲಿ ಕಾಯಲ್ ಇಳಿದು ತನಗಾಗಿ ಕಾಯುತ್ತಾಳೆ ಅಷ್ಟೇ ಸಿಂಪಲ್... ಅರ್ಜುನ್ ಇಷ್ಟೇ ಯೋಚಿಸುತ್ತಾನೆ. ಚಿತ್ರ ನೋಡುವ ನಾವೂ ಅಷ್ಟೇ ಸರಳವಾಗೇ ಯೋಚಿಸುತ್ತೇವೆ. ಕಥೆಯ ತಿರುವು ಇರುವುದು ಇಲ್ಲಿಯೇ.
ಕೊಂಚ ಹೊತ್ತು ರಕ್ಷಿತ್ ಮೆಕ್ಯಾನಿಕ್ ಕಳಿಸುತ್ತಾನೆ ಎಂದು ಕಾದ ಅರ್ಜುನ್ ತಾನೇ ಏನೇನೋ ಸರ್ಕಸ್ ಮಾಡು ಕಾರನ್ನು ಹೊರಡಿಸುತ್ತಾನೆ. ಆ ಹೊಟೆ¯ನ್ನೂ ತಲುಪುತ್ತಾನೆ. ಆದರೆ ಅಲ್ಲಿ ರಕ್ಷಿತ್‌ನ ಟ್ರಕ್ಕೂ ಇರುವುದಿಲ್ಲ, ಕಾಯಲ್ ಕೂಡ ಇರುವುದಿಲ್ಲ. ಅರ್ಜುನ್ ಹೊಟೆಲ್ ಸುತ್ತಮುತ್ತ ಹುಡುಕಾಡುತ್ತಾನೆ. ಹೊಟೆಲ್ನಲ್ಲಿ ಇರುವವರನ್ನೆಲ್ಲಾ ಕೇಳುತ್ತಾನೆ. ಯಾರೂ ಇವನನ್ನು ಕೇರ್ ಮಾಡುವುದಿಲ್ಲ. ಭಾಷೆ ಬರದೆ ಒದ್ದಾಡುತ್ತಾನೆ. ಅಲ್ಲಿ ಇರುವ ಎಲ್ಲರೂ ಇವನನ್ನು ಗೇಲಿ ಮಾಡಿ ನಗುತ್ತಾರೆ. ಅರ್ಜುನ್ ಅಲ್ಲಿನ ಪಬ್ಲಿಕ್ ಬೂತಿನಿಂದ ಪೊಲೀಸಿಗೆ ಫೋನ್ ಮಾಡುತ್ತಾನೆ. ಅಲ್ಲಿನ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾನೆ, ನನ್ನ ಹೆಂಡತಿಯನ್ನು ಹುಡುಕಿ ಕೊಡಿ ಎಂದು ಅಂಗಲಾಚುತ್ತಾನೆ. ಪೊಲೀಸಿನವನು ೨೪ ಗಂಟೆಯೊಳಗೆ ನಿನ್ನ ಹೆಂಡತಿ ಸಿಗದಿದ್ದರೆ ನಿನ್ನ ದೂರನ್ನು ಫೈಲ್ ಮಾಡುತ್ತೇನೆ ಎಂದು ಬಿಡುತ್ತಾನೆ. ಅರ್ಜುನ್ ಮತ್ತೆ ಅದೇ ಹೋಟೆಲ್ ಗೆ ಬರುತ್ತಾನೆ. ಆಗಲೂ ಯಾರನ್ನು ಕೇಳಿದರೂ ಯಾರೂ ಉತ್ತರಿಸುವುದಿಲ್ಲ. ಹೋಟೆಲ್ ಮೇನೇಜರ್ ಬಂದೂಕು ಹಿಡಿದು ನೀನೀಗ ಹೋಗದಿದ್ದರೆ ಶೂಟ್ ಮಾಡುತ್ತೇನೆ ಎನ್ನುತ್ತಾನೆ. ಅರ್ಜುನ್ ಹೋಟೆಲ್ ನಿಂದ ಹೊರಗೆ ಬಂದಾಗ ಅಲ್ಲಿ ಒಬ್ಬ ಹುಚ್ಚನಂತಿರುವ ಯುವಕ ಕಾಣುತ್ತಾನೆ. "ನಾನು ಆ ಟ್ರಕ್ ನೋಡಿದ್ದೇನೆ, ಬಿಳಿಯ ಬಣ್ಣದ ಟ್ರಕ್ ಅಲ್ವಾ ಎಂದು ಕೇಳುತ್ತಾನೆ. ಅರ್ಜುನ್ ಕಾತುರತೆಯಿಂದ ಹೌದು ಅದೇ ಟ್ರಕ್ ಎಲ್ಲಿಹೋಯಿತೆಂದು ನೋಡಿದೆಯಾ ಹೇಳು ಎಂದು ಒತ್ತಾಯಿಸುತ್ತಾನೆ, 'ನಾನೊಬ್ಬ ಹುಚ್ಚನಂತೆ ನನ್ನ ಯಾರೂ ಸಹ ನಂಬುವುದಿಲ್ಲ ಆದರೂ ನಾನು ನಿಜ ಹೇಳ್ತಿದೀನಿ ಆ ಟ್ರಕ್ ರೋಡ್ ನಂ 7 ನಲ್ಲಿ ಹೋಗುತ್ತಿತ್ತು ನೀನೂ ಫಾಲೋ ಮಾಡು ಸಿಕ್ಕರೂ ಸಿಗಬಹುದು' ಎನ್ನುತ್ತಾನೆ.
ಅರ್ಜುನ್ ತನ್ನ ಕಾರ್ ತೆಗೆದುಕೊಂಡು ರೋಡ್ ನಂ 7 ಗೆ ಬರುತ್ತಾನೆ. ಎಷ್ಟು ದೂರ ಬಂದರೂ ಮರಳುಗಾಡು ಬಿಟ್ಟು ಬೇರೇನೂ ಇಲ್ಲ. ಒಂದು ಕಡೆ ರೋಡ್ ಮುಗಿದಿರುತ್ತದೆ. ಅಲ್ಲಿ ದೊಡ್ಡ ಕಲ್ಲುಬಂಡೆಗಳ ಸಮೂಹವೇ ಇರುತ್ತದೆ. ಅಲ್ಲಿ ಕಾರು ನಿಲ್ಲಿಸಿದ ಅರ್ಜುನ್ ಅಲ್ಲೆಲ್ಲಾದರೂ ಟ್ರಕ್ ನಿಂತಿದೆಯೇ ಎಂದು ಹುಡುಕುತ್ತಾನೆ. ಆಗ ಇವನನ್ನು ಆಗಲೇ ಕಿಚಾಯಿಸಿ ಕಾಲುಕೆರೆದು ಜಗಳಕ್ಕೆ ಬಂದಿದ್ದ ಅಪರಿಚಿತರು ಧುತ್ತನೆ ಪ್ರತ್ಯಕ್ಷವಾಗುತ್ತಾರೆ. ಅವರ ಜೊತೆ ಇಲ್ಲಿ ಬರಲು ಹೇಳಿದ್ದ ಹುಚ್ಚನಂತಿದ್ದ ಯುವಕನೂ ಇರುತ್ತಾನೆ. ಅವನೇನು ಹುಚ್ಚನಲ್ಲ, ಇವೆಲ್ಲ ಪ್ರಿ ಪ್ಲಾನ್ಡ್ ತನ್ನನ್ನು ಟ್ರಾಪ್ ಮಾಡಿದ್ದಾರೆ ಎಂದು ಅರ್ಜುನನಿಗೆ ಗೊತ್ತಾಗುವಷ್ಟರಲ್ಲಿ ನಾಲ್ಕೈದು ಗೂಸಾಗಳು ಬಿದ್ದಿರುತ್ತದೆ. ಅರ್ಜುನನ್ನು ಅವರೆಲ್ಲ ದೊಣ್ಣೆ ಹಾಕಿಬ್ಯಾಟ್ ಮುಂತಾದವುಗಳಲ್ಲಿ ಹಿಗ್ಗಾಮಗ್ಗಾ ಥಳಿಸುತ್ತಾರೆ. ಅರ್ಜುನ್ 'ನನ್ನನ್ನು ಯಾಕೆ ಹೊಡೆಯುತ್ತಿದ್ದೀರಿ? ನಿಮಗೆ ಏನು ಬೇಕು? ಕಾಯಲ್ ಎಲ್ಲಿದ್ದಾಳೆ ನನ್ನ ಹೆಂಡತಿಯನ್ನು ಏನು ಮಾಡಿದಿರಿ ಎಂದು ಪರಿಪರಿಯಾಗಿ ಕೇಳುತ್ತಾನೆ. ಆದರೆ ಅವರು ಅವನ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ಹಂಗಿಸುತ್ತ ಚಚ್ಚುತ್ತಾರೆ. ಅರ್ಜುನ್ ನೋವಿನಿಂದ ನೀವು ಯಾರು ಎಂಬುದನ್ನಾದರೂ ಹೇಳಿ ಕಾಯಲ್ ಎಲ್ಲಿದ್ದಾಳೆ ಹೇಳಿ ಎಂದು ಪದೇ ಪದೇ ಕೇಳುವಾಗ ಆಗ ಪ್ರತ್ಯಕ್ಷವಾಗುತ್ತಾರೆ ರಕ್ಷಿತ್ ಮತ್ತು ದೀಪಿಕಾ!!!
ಅರ್ಜುನ್ ಗೆ ಇವರೆಲ್ಲರನ್ನೂ ನೋಡುವಾಗ ಷಾಕ್ ಆಗುತ್ತದೆ. ಇವರೆಲ್ಲರೂ ಒಂದೇ ಗ್ಯಾಂಗ್ ಎಂದು ಖಾತ್ರಿಯಾಗುತ್ತದೆ, ಅವರು ಅರ್ಜುನನ ಕೈಗಳನ್ನು ಕಟ್ಟಿಹಾಕಿ ಒಂದೆಡೆ ದೂಡುತ್ತಾರೆ. ಯಾಕೆ ಹೀಗೆಲ್ಲ ಮಾಡುತ್ತಿದ್ದೀರ ಎಂದು ಅರ್ಜುನ್ ಕೇಳಿದರೆ 'ಇದೆಲ್ಲ ನಿನ್ನ ಹೆಂಡತಿಯದೇ ಪ್ಲಾನ್ ಅವಳು ಅವಳ ಬಾಯ್ ಫ್ರೆಂಡ್ ಸೇರಿ ನಿನ್ನನ್ನು ಮುಗಿಸಲು ನಮಗೆ ಸುಪಾರಿ ಕೊಟ್ಟಿದ್ದಾರೆ ನಿನ್ನನ್ನು ಮುಗಿಸಿ ಕಾಯಲ್ ತನ್ನ ಪ್ರಿಯತಮನೊಡನೆ ಹಾಯಾಗಿ ಇರುತ್ತಾಳೆ' ಎನ್ನುತ್ತಾನೆ ರಕ್ಷಿತ್. ಅರ್ಜುನ್‌ಗೆ ಮೂರ್ಚೆ ಬರುವುದೊಂದು ಬಾಕಿ, ತಾನು ಅವಳ ದಾರಿಗೆ ಅಡ್ಡಿ ಮಾಡಿಲ್ಲ ಆದರೂ ಅವಳು ನನ್ನನ್ನು ಸಾಯಿಸಲು ಏಕೆ ಹೇಳಿದಳು ಇದರಲ್ಲೇನೋ ಮೋಸ ಇದೆ. ಅವಳು ನನ್ನನ್ನು ಇಷ್ಟಪಡದೆ ಇರಬಹುದು ಆದರೆ ನನ್ನನ್ನು ಸಾಯಿಸುವಷ್ಟು ಕಟುಕಳಲ್ಲ ಎನ್ನುತ್ತಾನೆ. ರಕ್ಷಿತ್ ಗಹಗಹಿಸಿ ನಗುತ್ತಾನೆ. ನೀನೊಬ್ಬ ಮೂರ್ಖ ಎಂದು ಹಂಗಿಸುತ್ತಾನೆ. ಈಗ ರಕ್ಷಿತ್ ಅರ್ಜುನ್ ಗೆ ಎರಡು ಆಪ್ಷನ್ ಕೊಡುತ್ತಾನೆ. 1.ಅರ್ಜುನ್ ಕಾಯಲ್ ಗಿಂತ ಡಬಲ್ ಹಣ ಕೊಟ್ರೆ ತಾವೇ ಕಾಯಲ್ ಳನ್ನು ಸಾಯಿಸುವುದಾಗಿ ಹೇಳುತ್ತಾರೆ. 2. ಅರ್ಜುನ್ ಅವರಿಗೆ ತನ್ನಲ್ಲಿರುವ ಭಾರಿಮೊತ್ತದ ಹಣವನ್ನು ಕೊಟ್ಟು ತಾನು ಕಾಯಲ್ ಇಬ್ಬರೂ ಜೀವಂತವಾಗಿ ಹೊರಬೀಳುವುದು. ಅರ್ಜುನ್ ಗೆ ಕಾಯಲ್ ಳನ್ನು ಕೊಲ್ಲಿಸುವುದು ಇಷ್ಟವಿಲ್ಲ ಅವಳೇ ಅವನನ್ನು ಕೊಲ್ಲಿಸಲು ಇಷ್ಟೆಲ್ಲಾ ಯೋಜನೆ ರೂಪಿಸಿದ್ದರೂ ಅದನ್ನು ನಂಬಲು ಅವನು ಸಿದ್ದನಿಲ್ಲ. ಅವನಲ್ಲಿರುವುದು ಒಂದೇ ಉಳಿದ ದಾರಿ ಎಂದರೆ ತನ್ನ ಸಂಪಾದನೆಯ ಅಷ್ಟೂ ಹಣವನ್ನೂ ಇವರಿಗೆ ಕೊಟ್ಟು ತಾನು ಕಾಯಲ್ ಳನ್ನು ಬಿಡಿಸಿಕೊಂಡು ಇಬ್ಬರೂ ಸೇಫಾಗಿ ಹೊರಬೀಳುವುದು. ಅರ್ಜುನ್ ಎರಡನೇ ದಾರಿ ಆರಿಸಿಕೊಳ್ಳುತ್ತಾನೆ. ತನ್ನ ಆವರೆಗಿನ ಸಂಪಾದನೆಯ ೮ಕೋಟಿ ರೂಗಳನ್ನು ಅವರಿಗೆ ಕೊಡಲು ಒಪ್ಪುತ್ತಾನೆ.
ಇನ್ನೊಂದು ಸೀನ್ ನಲ್ಲಿ ಕಾಯಲ್ ಒಂದು ಕಡೆ ಬಂದಿಯಾಗಿ ಬಿದ್ದಿರುತ್ತಾಳೆ. ಅವಳ ಬಳಿ ದೀಪಿಕಾ ಗಹಗಹಿಸಿ ನಗುತ್ತಾ ನಿನ್ನಂತ ಮೋಸಗಾತಿ ಹೆಣ್ಣನ್ನು ಯಾವ ಗಂಡ ಸಹಿಸುತ್ತಾನೆ? ಗಂಡನಿರುವಾಗಲೇ ಬೇರೊಬ್ಬ ಗೆಳೆಯನ್ನು ನೋಡಿಕೊಂಡರೆ ಹೇಗೆ ಸಹಿಸುತ್ತಾನೆ? ಅದಕ್ಕೆ ನಿನ್ನಗಂಡ ನಿನ್ನ ಸಾಯಿಸಲು ನಮಗೆ ಸುಪಾರಿ ಕೊಟ್ಟಿದ್ದಾನೆ. ನಾನು ಕೊಲೆಗಡುಕಿಯೇ ಇರಬಹುದು ಆದರೆ ನಾನೆಂದೂ ರಕ್ಷಿತ್ ಗೆ ದ್ರೋಹ ಬಗೆದಿಲ್ಲ ನೀನು ಗಂಡನಿಗೆ ದ್ರೋಹ ಬಗೆದವಳು ಇನ್ನು ಕೆಲವೇ ಸಮಯ ನಿನ್ನ ಆಯಸ್ಸು ನಿನ್ನ ಗಂಡ ನಿನ್ನನ್ನು ಸಾಯಿಸಿ ತನ್ನ ಕಸಿನ್ ಅನುವನ್ನು ಮದುವೆಯಾಗುತ್ತಾನೆ ಎಂದೆಲ್ಲಾ ಹೇಳುತ್ತಾಳೆ. ಕಾಯಲ್ ಗೆ ಅಳುವುದು ಬಿಟ್ಟರೆ ಬೇರೇನೂ ಮಾಡಲಾಗದು. ಅರ್ಜುನ್ ಮಾಡುತ್ತಿರುವುದು ತಪ್ಪು ಎಂದು ಹೇಳಲೂ ಆಗದ ಸ್ಥಿತಿ. ತಾನೇ ಅರ್ಜುನ್ ಗೆ ದ್ರೋಹ ಬಗೆದಿರುವಾಗ ಅವನಿಂದ ಪ್ರಾಮಾಣಿಕತೆಯನ್ನು ಹೇಗೆ ನಿರೀಕ್ಷಿಸುವುದು? ಕಾಯಲ್ ಪಶ್ಚತ್ತಾಪದಲ್ಲಿ ತೊಳಲಾಡುತ್ತಾಳೆ. ಅವಳಿಗೂ ನಂಬಿಕೆ, ಅರ್ಜುನ್ ತನ್ನನ್ನು ಕೊಲ್ಲಲು ಹೇಳಿರಲಾರ ಎಂದು.
ಇಲ್ಲಿ ಅರ್ಜುನ್ ರಕ್ಷಿತ್ ನಿರ್ದೇಶನದಂತೆ ಅಲ್ಲಿನ ಹತ್ತಿರದ ಗ್ರಾಮದಲ್ಲಿರುವ ಬ್ಯಾಂಕಿನಿಂದ ತನ್ನ ಹಣವನ್ನು ಡ್ರಾ ಮಾಡಲು ಹೋಗುತ್ತಾನೆ. ಹಣ ಡ್ರಾ ಮಾಡುವಾಗ ಬ್ಯಾಂಕ್ ಮೇನೇಜರಿನ ಟೇಬಲ್ ಮೇಲೆ ಇರುವ ಒಂದು ಸಣ್ಣ ಚೂರಿಯನ್ನು ತನ್ನ ಕಿಸೆಗೆ ಸೇರಿಸುತ್ತಾನೆ. ಹಣ ತೆಗೆದುಕೊಂಡು ಅದೇ ಹೈವೇನಲ್ಲಿ ನಡೆದು ಬರುವಾಗ ರಕ್ಷಿತ್ ಕಡೆಯ ಮೈಕೆಲ್ ನಿಖಿಲ್ ಮತ್ತೊಬ್ಬ ಕಾರಿನಲ್ಲಿ ಬಂದು ಅರ್ಜುನ್ ನನ್ನು ಪಿಕ್ ಮಾಡುತ್ತಾರೆ. ಕಾರಿನಲ್ಲಿ ಅರ್ಜುನ್ ಅವರ ಮೂವರ ಮೇಲೂ ದಾಳಿ ಮಾಡುತ್ತಾನೆ. ಇಬ್ಬರಿಗೆ ಗುಂಡು ಹೊಡೆದು ದಾರಿಯ ಮಧ್ಯೆಯೇ ಬೀಳಿಸುತ್ತಾನೆ. ಮೈಕೆಲ್ ನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಕಾರು ನಡೆಸುತ್ತ ರಕ್ಷಿತ್ ಇದ್ದ ಕಡೆ ಬರುತ್ತಾನೆ.
ಕತೆ ಇಲ್ಲಿಗೆ ನಿಲ್ಲಿಸೋಣ. ಈ ರಕ್ಷಿತ್ ಯಾರು? ದೀಪಿಕಾ ಯಾರು? ಇವರೆಲ್ಲರ ಹಿನ್ನೆಲೆ ಏನು? ನಿಜವಾಗಿ ಕಾಯಲ್ ತನ್ನ ಪ್ರಿಯತಮನೊಡನೆ ಸೇರಿ ಅರ್ಜುನನ್ನು ಕೊಲ್ಲಿಸಲು ಸುಪಾರಿ ನೀಡಿದಳೇ? ಅರ್ಜುನನಿಗೆ ಕಾಯಲ್ ಜೀವಂತ ದೊರೆಯುತ್ತಾಳೆಯೇ? ರಕ್ಷಿತ್ ದೀಪಿಕಾ ಅವರ ಗ್ಯಾಂಗ್ ಏನಾಗುತ್ತಾರೆ? ಅರ್ಜುನ್ ರಕ್ಷಿತಾ ಒಂದಾಗುತ್ತಾರೆಯೇ? ಎಲ್ಲವನ್ನೂ ನೀವೇ ತೆರೆಯ ಮೇಲೆ ನೋಡಿ ಆ ಥ್ರಿಲ್ ಅನುಭವಿಸಿ. ಕ್ಷಣಕ್ಷಣಕ್ಕೂ ಅನೂಹ್ಯ ತಿರುವುಗಳು ಅಚ್ಚರಿ ಆಘಾತಗಳು ಸಿನಿಮಾ ಕುರ್ಚಿ ತುದಿಯಲ್ಲಿ ಕೂಡಿಸಿ ನೋಡಿಸಿಕೊಂಡು ಹೋಗುತ್ತದೆ. ಅರ್ಜುನ್ ಆಗಿ ಅಜಿತ್, ರಕ್ಷಿತ್ ಆಗಿ ಅರ್ಜುನ್ ಸರ್ಜಾ ಒಬ್ಬರಿಗೊಬ್ಬರು ಪೈಪೋಟಿ ನೀಡಿ ಅಭಿನಯಿಸಿದ್ದಾರೆ. ಸಾಟಿಯೇ ಇಲ್ಲದ ಇವರಿಬ್ಬರ ಅಭಿನಯಕ್ಕೆ ಒಂದು ಹ್ಯಾಟ್ಸಾಫ್. ತ್ರಿಷಾ ಅಭಿನಯ ಚೆಂದ ಕೋಮಲವಾದ ಅವಳ ಚೆಲುವು ಚೇತೋಹಾರಿ. ಮೂಲ ಭಾಷೆ ತಮಿಳಾದರೂ ಹಿಂದಿ, ತೆಲುಗು, ಕನ್ನಡದಲ್ಲೂ ಲಭ್ಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.