ಕಾಂಗ್ರೆಸ್ ಇದೀಗ ಮಾಸ್ಟರ್ ಪ್ಲಾನ್ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ‘ಮೃದು ಹಿಂದುತ್ವ’ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ಅದೇ ಮಾದರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ‘ಮೃದು ಹಿಂದುತ್ವ’ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ಅದೇ ಮಾದರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಪ್ರತಿ ಗ್ರಾಮದಲ್ಲಿ ಗೋವುಗಳ ಆರೈಕೆಗೆ ಗೋಶಾಲೆ, ಸಂಸ್ಕೃತ ಶಾಲೆಗಳ ಸ್ಥಾಪನೆ, ಆಧ್ಯಾತ್ಮಕ್ಕೆಂದೇ ಒಂದು ಹೊಸ ಇಲಾಖೆ, ಗೋಮೂತ್ರವನ್ನು ವಾಣಿಜ್ಯೀಕರಣಗೊಳಿಸಿ ಮಾರಾಟ ಮಾಡುವುದು, ಗೋವಿನ ಸಗಣಿಯ ಬೆರಣಿಗಳನ್ನು ಉರುವಲಿಗಾಗಿ ಮಾರುವುದು... ಇತ್ಯಾದಿಗಳು ಪ್ರಣಾಳಿಕೆಯಲ್ಲಿವೆ.
ಇದೇ ವೇಳೆ, ರಾಮ 14 ವರ್ಷ ವನವಾಸದಲ್ಲಿದ್ದಾಗ ನಡೆದಾಡಿದ ಮಧ್ಯಪ್ರದೇಶದ ಮಾರ್ಗಗಳನ್ನು ‘ರಾಮಪಥ’ ಎಂದು ಅಭಿವೃದ್ಧಿಪಡಿಸುವುದು, ಹಿಂದುಗಳ ಪವಿತ್ರ ನದಿಯಾದ ನರ್ಮದೆಯ ರಕ್ಷಣೆಗಾಗಿ ‘ಮಾ ನರ್ಮದಾ ನ್ಯಾಸ ಅಧಿನಿಯಮ’ ಎಂಬ ಕಾಯ್ದೆ ಜಾರಿಗೊಳಿಸುವುದು, ನರ್ಮದಾ ನದಿಗುಂಟ ಇರುವ ಯಾತ್ರಾ ಸ್ಥಳಗಳನ್ನು 1,100 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು- ಪ್ರಣಾಳಿಕೆಯಲ್ಲಿ ಸೇರಿವೆ.
ಈ ಪ್ರಣಾಳಿಕೆಗೆ ‘ವಚನ ಪತ್ರ’ ಎಂದು ಹೆಸರಿಸಲಾಗಿದ್ದು, ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್‌ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ದಿಗ್ವಿಜಯ ಸಿಂಗ್ ಶನಿವಾರ ಜಂಟಿಯಾಗಿ ಬಿಡುಗಡೆ ಮಾಡಿದರು.
ಇದರ ಜೊತೆಗೆ ಸಣ್ಣ ರೈತರ ಹೆಣ್ಣುಮಕ್ಕಳ ಮದುವೆಗೆ 51 ಸಾವಿರ ರು. ಆರ್ಥಿಕ ನೆರವು, 60 ವರ್ಷ ಮೇಲ್ಪಟ್ಟರೈತರಿಗೆ 1000 ರು. ಪಿಂಚಣಿ, 2 ಲಕ್ಷ ರು.ವರೆಗಿನ ಕೃಷಿ ಸಾಲ ಮನ್ನಾ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕಂಪನಿಗಳಿಗೆ ಐದು ವರ್ಷಗಳ ಕಾಲ ವೇತನ ಭತ್ಯೆ, ಪ್ರವಾಸಿ ಗೈಡ್‌ಗಳು ಹಾಗೂ ವಕೀಲರಿಗೆ ಐದು ವರ್ಷಗಳ ಕಾಲ ತಿಂಗಳಿಗೆ 5 ಸಾವಿರ ಪ್ರೋತ್ಸಾಹ ಭತ್ಯೆ ನೀಡುವ ಭರವಸೆ ನೀಡಿದೆ.