
ನವದೆಹಲಿ: ರಾಜಸ್ಥಾನದ ಜೈಪುರದಲ್ಲಿ ಭಾರೀ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ (CA) ಒಬ್ಬರು ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಮಾರು 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿರುವ ಆರೋಪದ ಮೇಲೆ ಎಫ್‌ಐಆರ್ (FIR) ದಾಖಲಾಗಿದೆ.
ಜೈಪುರದ ಪತ್ರಕರ್ತ ಕಾಲೋನಿ ನಿವಾಸಿ, ಸಿಎ ಅಭಿಷೇಕ್ ಜೈನ್ ಎಂಬುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ದೂರು ನೀಡಿದೆ. ಆರೋಪದ ಪ್ರಕಾರ ಅಭಿಷೇಕ್ ಜೈನ್ 2021 ರಿಂದ 2024 ರ ನಡುವೆ ಸುಮಾರು 3,168 ನಕಲಿ 'ಫಾರ್ಮ್ 15CB' ಸರ್ಟಿಫಿಕೇಟ್‌ಗಳನ್ನು ಜಾರಿ ಮಾಡಿದ್ದಾರೆ. ಈ ಪ್ರಮಾಣಪತ್ರಗಳ ಆಧಾರದ ಮೇಲೆ ಬರೋಬ್ಬರಿ 2,395 ಕೋಟಿ ರೂಪಾಯಿಗಳನ್ನು ಭಾರತದಿಂದ ವಿದೇಶಕ್ಕೆ ರವಾನಿಸಲಾಗಿದೆ. ಕಳೆದ ಆಗಸ್ಟ್ 18 ರಂದು ಆದಾಯ ತೆರಿಗೆ ಇಲಾಖೆಯ ತನಿಖಾ ದಳವು ಸಿಎ ಅಭಿಷೇಕ್ ಜೈನ್ ಅವರ ಕಚೇರಿಯ ಮೇಲೆ ಸರ್ವೆ ನಡೆಸಿತ್ತು. ಈ ವೇಳೆ ಅಲ್ಲಿ ದೊರೆತ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಸಾವಿರಾರು ವಿದೇಶಿ ವಿನಿಮಯ ಪ್ರಮಾಣಪತ್ರಗಳನ್ನು ನೀಡಿರುವುದು ಪತ್ತೆಯಾಗಿದೆ.
ಐಟಿ ಇಲಾಖೆಯ ತನಿಖೆಯಲ್ಲಿ ಕೆಲವು ಆಘಾತಕಾರಿ ವಿಷಯಗಳು ಬಯಲಾಗಿವೆ.ಸುಮಾರು 40ಕ್ಕೂ ಹೆಚ್ಚು ನಕಲಿ ಅಥವಾ ಶಂಕಾಸ್ಪದ ಕಂಪನಿಗಳ (Shell Companies) ಹೆಸರಿನಲ್ಲಿ ಹಣವನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಈ ಹಣ ವರ್ಗಾವಣೆ ಮಾಡಿದ ಹಲವು ಕಂಪನಿಗಳ ಆದಾಯವು ತುಂಬಾ ಕಡಿಮೆ ಇದೆ ಅಥವಾ ಅವರು ಎಂದಿಗೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿಲ್ಲ. ಯಾವುದೇ ವ್ಯವಹಾರ ನಡೆಸದ ಹೆಸರಿಗಷ್ಟೇ ಇರುವ ಟ್ರಸ್ಟ್‌ಗಳು ಮತ್ತು ಫರ್ಮ್‌ಗಳನ್ನು ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ.
ಭಾರತದಿಂದ ವಿದೇಶಕ್ಕೆ ಹಣವನ್ನು ಕಳುಹಿಸುವಾಗ ಆ ಹಣಕ್ಕೆ ಸಂಬಂಧಪಟ್ಟ ತೆರಿಗೆಯನ್ನು (TDS) ಸರಿಯಾಗಿ ಪಾವತಿಸಲಾಗಿದೆ ಎಂದು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ದೃಢೀಕರಿಸಬೇಕಾಗುತ್ತದೆ. ಇದನ್ನೇ ಫಾರ್ಮ್ 15CB ಎನ್ನಲಾಗುತ್ತದೆ. ಅಭಿಷೇಕ್ ಜೈನ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಹಣದ ಮೂಲವನ್ನು ಪರಿಶೀಲಿಸದೆ ಸರ್ಟಿಫಿಕೇಟ್ ನೀಡಿದ್ದಾರೆ ಎಂಬುದು ಗಂಭೀರ ಆರೋಪವಾಗಿದೆ.
ಜೈಪುರದ ಪತ್ರಕರ್ತ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಖಾತೆಗಳು, ವಿದೇಶಿ ವಹಿವಾಟಿನ ದಾಖಲೆಗಳು ಮತ್ತು ಈ ಹಗರಣದ ಹಿಂದೆ ಇರುವ ಇತರ ಮಧ್ಯವರ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದು ಕೇವಲ ಒಬ್ಬ ಸಿಎ ಮಾಡಿದ ಕೆಲಸವೇ ಅಥವಾ ಇದರ ಹಿಂದೆ ದೊಡ್ಡ ವ್ಯವಸ್ಥಿತ ಜಾಲವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.