
ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ರೆಡ್‌ಮಿ ನೋಟ್ ಸರಣಿಯ, ಉತ್ಕೃಷ್ಟ ಬ್ಯಾಟರಿ ಬಾಳಿಕೆ ಹಾಗೂ ಆಕರ್ಷಕ ಫೀಚರ್ ಹೊಂದಿರುವ ನೂತನ ಫೋನ್ ರೆಡ್‌ಮಿ ನೋಟ್ 17 ಪ್ರೊ 5ಜಿ.
ಈ ಫೋನಿನ ನಿಜವಾದ ಹೀರೋ ಇದರ ದೈತ್ಯ ಬ್ಯಾಟರಿ. ಎಷ್ಟೇ ವಿಡಿಯೋ ನೋಡಿದರೂ, ಆಟವಾಡಿದರೂ ಚಾರ್ಜ್ ಅಂದಾಜು ಮೂರು ದಿನಗಳ ಕಾಲ ಬರುತ್ತದೆ. 67 ವ್ಯಾಟ್ ಚಾರ್ಜರ್ ನೀಡಲಾಗಿದೆ. ಇನ್ನೊಂದು ಮೊಬೈಲ್ ಅನ್ನು ಪವರ್ ಬ್ಯಾಂಕ್‌ನಂತೆ ಚಾರ್ಜ್ ಮಾಡಲು 22.5 ವ್ಯಾಟ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇದೆ.
ಅಂಡರ್‌ವಾಟರ್ ಮೋಡ್
ಹಿಂದೆಯೆಲ್ಲಾ ದೊಡ್ಡ ಬ್ಯಾಟರಿ ಇರುವ ಫೋನ್‌ಗಳು ಇಟ್ಟಿಗೆಯಂತೆ ದಪ್ಪವಾಗಿರುತ್ತಿದ್ದವು. ಆದರೆ ಈ ಫೋನ್‌ನಲ್ಲಿ 9,000 ಎಂಎಎಚ್ ಬ್ಯಾಟರಿ ಇದ್ದೂ 226 ಗ್ರಾಂ ತೂಕ ಹಾಗೂ ಕೇವಲ 8.6 ಮಿಮೀ ತೆಳುವಾಗಿರುವುದು ವಿಶೇಷ. ಇದು ಕೈಯಲ್ಲಿ ಹಿಡಿಯಲು ಬಲು ಹಗುರ ಮತ್ತು ಆರಾಮದಾಯಕ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಐಪಿ68 ಹಾಗೂ ಐಪಿ69ಕೆ ರೇಟಿಂಗ್ ಹೊಂದಿದ್ದು, ನೀರಿನೊಳಗೆ ಫೋಟೋ ತೆಗೆಯುವ ಅಂಡರ್‌ವಾಟರ್ ಮೋಡ್ ಇರುವುದು ವಿಶೇಷ.
6.83 ಇಂಚಿನ ಅತ್ಯಾಕರ್ಷಕ 1.5ಕೆ ಅಮೋಲ್ಡ್ ಸ್ಕ್ರೀನ್, 120 ಹರ್ಟ್ಜ್ ರಿಫ್ರೆಶ್ ರೇಟ್ ಹಾಗೂ 3500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಇದರಲ್ಲಿದೆ. ಇದರಿಂದಾಗಿ ಬಿರುಬಿಸಿಲಿನಲ್ಲೂ ಅಕ್ಷರಗಳು ಮತ್ತು ಚಿತ್ರಗಳು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತವೆ. ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಇದ್ದು, ಕೈಗಳು ಒದ್ದೆಯಾಗಿದ್ದರೂ ಪರದೆಯನ್ನು ನಿರಾಯಾಸವಾಗಿ ಬಳಸಲು ವೆಟ್ ಟಚ್ 2.0 ಸೌಲಭ್ಯವಿದೆ.
ಐಆರ್ ಬ್ಲಾಸ್ಟರ್
ಸ್ನಾಪ್‌ಡ್ರಾಗನ್ 6ಎಸ್ ಜೆನ್ 4 ಪ್ರೊಸೆಸರ್ ದಿನನಿತ್ಯದ ಕೆಲಸಗಳನ್ನು ಸರಾಗವಾಗಿ ನಿಭಾಯಿಸುತ್ತದೆ. ಆಂಡ್ರಾಯ್ಡ್ 16 ಆಧಾರಿತ ಹೈಪರ್‌ಓಎಸ್ 3ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಹಾಗೂ ಸಾಧಾರಣ ಮಟ್ಟದ ಗೇಮ್‌ಗಳನ್ನು ಅಡೆತಡೆಯಿಲ್ಲದೆ ಆಡಬಹುದು. ಮನರಂಜನೆಗಾಗಿ ಡಾಲ್ಬಿ ಅಟ್ಮಾಸ್ ಹಾಗೂ ಶೇ. 300ರಷ್ಟು ವಾಲ್ಯೂಮ್ ಬೂಸ್ಟ್ ನೀಡುವ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ರಿಮೋಟ್ ಆಗಿ ಬಳಸಲು ಐಆರ್ ಬ್ಲಾಸ್ಟರ್ ನೀಡಲಾಗಿದೆ.
ಹಿಂಭಾಗದಲ್ಲಿ 50 ಎಂಪಿ ಮುಖ್ಯ ಕ್ಯಾಮೆರಾ ಹಾಗೂ 8 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಇದೆ. ಬ್ಲರ್ ಇಲ್ಲದೆ ಸ್ಪಷ್ಟ ಚಿತ್ರ ಮೂಡಿಬರಲು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ನೀಡಲಾಗಿದ್ದು, ಹಗಲಿನ ಬೆಳಕಿನಲ್ಲಿ ಬಣ್ಣಗಳು ನೈಜವಾಗಿ ಮೂಡಿಬರುತ್ತವೆ. ಸೆಲ್ಫಿಗಾಗಿ 16 ಎಂಪಿ ಕ್ಯಾಮೆರಾ ಇದೆ. ಆದರೆ, ಈ ಬೆಲೆಯ ಫೋನ್‌ನಲ್ಲಿ 4ಕೆ ವಿಡಿಯೋ ರೆಕಾರ್ಡಿಂಗ್ ಸೌಲಭ್ಯವಿಲ್ಲದೆ, ಕೇವಲ 1080ಪಿ ವಿಡಿಯೋಗೆ ಸೀಮಿತವಾಗಿರುವುದು ಕೊಂಚ ಬೇಸರ.
ಈ ಸರಣಿಯ ಆರಂಭಿಕ ಬೆಲೆ ₹36,999. ಈ ದರಕ್ಕೆ ಪ್ರೊಸೆಸರ್ ಇನ್ನೂ ಪ್ರಬಲವಾಗಿರಬಹುದಿತ್ತು ಎನಿಸಿದರೂ, ಅದ್ಭುತ ಪರದೆ, ಕಠಿಣ ಬಾಳಿಕೆ ಹಾಗೂ ದೈತ್ಯ ಬ್ಯಾಟರಿ ಬಯಸುವ ಗ್ರಾಹಕರಿಗೆ ಇದೊಂದು ಉತ್ತಮ ಆಲ್‌ರೌಂಡರ್ ಫೋನ್.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.