
ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್ ಕೇವಲ ಫೋಟೋ ಅಥವಾ ವಿಡಿಯೋಗಳನ್ನು ಪ್ರದರ್ಶಿಸುವ ಕೆಲಸ ಮಾಡುವುದಿಲ್ಲ. ಬದಲಿಗೆ ನಮ್ಮ ಬೆರಳುಗಳ ಪ್ರತಿಯೊಂದು ಸ್ಪರ್ಶವನ್ನು (Touch) ಗ್ರಹಿಸಿ ತಕ್ಷಣವೇ ಪ್ರತಿಕ್ರಿಯಿಸುತ್ತದೆ. ನಾವು ಸ್ಕ್ರೀನ್ ಮೇಲೆ ಟ್ಯಾಪ್ ಮಾಡುತ್ತೇವೆ, ಸ್ವೈಪ್ ಮಾಡುತ್ತೇವೆ, ಎರಡು ಬೆರಳುಗಳಿಂದ ಫೋಟೋ ಜೂಮ್ ಮಾಡುತ್ತೇವೆ ಮತ್ತು ಸ್ಕ್ರೀನ್ ಮೇಲೆ ಬರೆಯುತ್ತೇವೆ. ಆದರೆ ನಾವು ಸ್ಕ್ರೀನ್ ಮೇಲೆ ಎಲ್ಲಿ ಸ್ಪರ್ಶಿಸಿದ್ದೇವೆ ಎಂಬುದು ಫೋನ್‌ಗೆ ಹೇಗೆ ತಿಳಿಯುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ತಂತ್ರಜ್ಞಾನದ ಮಾಹಿತಿ ಇಲ್ಲಿದೆ.
ಇಲ್ಲಿ ಅತ್ಯಂತ ಆಸಕ್ತಿದಾಯಕ ತಂತ್ರಜ್ಞಾನ ಕೆಲಸ ಮಾಡುತ್ತದೆ. ಇದನ್ನು 'ಕೆಪಾಸಿಟಿವ್ ಟಚ್‌ಸ್ಕ್ರೀನ್' (Capacitive Touchscreen) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಹೊರಗಿನಿಂದ ಒಂದೇ ಮೇಲ್ಮೈಯಂತೆ (Surface) ಕಾಣಿಸಿದರೂ ಇದರ ಒಳಗೆ ಹಲವು ಪದರಗಳು (Layers) ಇರುತ್ತವೆ. ಇವುಗಳಲ್ಲಿ ಡಿಸ್‌ಪ್ಲೇ ಪ್ಯಾನೆಲ್ ಜೊತೆಗೆ ಒಂದು 'ಟಚ್ ಸೆನ್ಸಿಂಗ್ ಲೇಯರ್' (ಸ್ಪರ್ಶವನ್ನು ಗ್ರಹಿಸುವ ಪದರ) ಕೂಡ ಇರುತ್ತದೆ.
ಈ ಪದರವು ಅತ್ಯಂತ ಸೂಕ್ಷ್ಮವಾದ ವಿದ್ಯುತ್ ಸಂಕೇತಗಳನ್ನು (Electrical Signals) ಮತ್ತು ಆಂತರಿಕವಾಗಿ ಆಗುವ ಬದಲಾವಣೆಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ನೀವು ಸ್ಕ್ರೀನ್ ಮುಟ್ಟಿದಾಗ ನಿಮ್ಮ ಬೆರಳು ಈ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡುತ್ತದೆ. ಫೋನ್ ಆ ಬದಲಾವಣೆಯನ್ನೇ 'ಟಚ್' ಎಂದು ಗುರುತಿಸುತ್ತದೆ.
ಇಂದಿನ ಬಹುತೇಕ ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಪಾಸಿಟಿವ್ ಟಚ್ ತಂತ್ರಜ್ಞಾನವನ್ನೇ ಬಳಸಲಾಗುತ್ತದೆ. ಸ್ಕ್ರೀನ್‌ನ ಟಚ್ ಪದರದಲ್ಲಿ ಅತ್ಯಂತ ತೆಳುವಾದ ಮತ್ತು ಪಾರದರ್ಶಕವಾದ (Transparent) ಎಲೆಕ್ಟ್ರೋಡ್‌ಗಳ ಜಾಲ (Grid) ಇರುತ್ತದೆ. ಈ ಎಲೆಕ್ಟ್ರೋಡ್‌ಗಳ ಸುತ್ತಲೂ ಸಣ್ಣ ವಿದ್ಯುತ್ ಕ್ಷೇತ್ರ (Electrical Field) ಇರುತ್ತದೆ. ಸ್ಕ್ರೀನ್ ಮೇಲೆ ನೂರಾರು ಸಣ್ಣ ಸಣ್ಣ ಸೆನ್ಸರ್ ಪಾಯಿಂಟ್‌ಗಳಿವೆ ಎಂದು ಭಾವಿಸಿಕೊಳ್ಳಿ. ನೀವು ಸ್ಕ್ರೀನ್ ಅನ್ನು ಮುಟ್ಟದಿದ್ದಾಗ ಈ ವ್ಯವಸ್ಥೆಯು ಸಾಮಾನ್ಯ ವಿದ್ಯುತ್ ಸ್ಥಿತಿಯಲ್ಲಿರುತ್ತದೆ. ಆದರೆ, ನಿಮ್ಮ ಬೆರಳು ಸ್ಕ್ರೀನ್ ಹತ್ತಿರ ಬರುತ್ತಿದ್ದಂತೆ ಅಥವಾ ಅದನ್ನು ಸ್ಪರ್ಶಿಸುತ್ತಿದ್ದಂತೆ ಅಲ್ಲಿನ ವಿದ್ಯುತ್ ಸ್ಥಿತಿಯಲ್ಲಿ ಬದಲಾವಣೆಗಳು ಆರಂಭವಾಗುತ್ತವೆ.
ಇಲ್ಲಿ ಅತ್ಯಂತ ರೋಚಕ ಸಂಗತಿಯೆಂದರೆ ನಮ್ಮ ದೇಹದ ಪಾತ್ರ. ಹೌದು ಮಾನವನ ದೇಹವು ವಿದ್ಯುತ್ ವಾಹಕ ಗುಣವನ್ನು ಹೊಂದಿದೆ ಮತ್ತು ವಿದ್ಯುತ್ ಚಾರ್ಜ್ ಮೇಲೆ ಪ್ರಭಾವ ಬೀರಬಲ್ಲದು. ಬೆರಳು ಸ್ಕ್ರೀನ್‌ನ ವಿದ್ಯುತ್ ಕ್ಷೇತ್ರದ (Electrical Field) ಸಂಪರ್ಕಕ್ಕೆ ಬಂದಾಗ ಅಲ್ಲಿನ 'ಕೆಪಾಸಿಟನ್ಸ್' (Capacitance) ನಲ್ಲಿ ಬದಲಾವಣೆಯಾಗುತ್ತದೆ. ಫೋನ್‌ನಲ್ಲಿರುವ ಟಚ್ ಕಂಟ್ರೋಲರ್ ಬದಲಾವಣೆಯನ್ನು ಪತ್ತೆಹಚ್ಚುತ್ತದೆ. ನಂತರ ಬದಲಾವಣೆ ಸ್ಕ್ರೀನ್‌ನ ಯಾವ ಭಾಗದಲ್ಲಿ ಸಂಭವಿಸಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತದೆ. ನಿಮ್ಮ ಫೋನ್ ಕ್ಯಾಮೆರಾದಂತೆ ನಿಮ್ಮ ಬೆರಳನ್ನು ನೋಡಿ ಸ್ಪರ್ಶವನ್ನು ಗುರುತಿಸುವುದಿಲ್ಲ. ಬದಲಾಗಿ ಸಾಧನದಲ್ಲಿ ಆಗುವ ವಿದ್ಯುತ್ ಬದಲಾವಣೆಗಳನ್ನು ಅಳೆದು ಸ್ಪರ್ಶವನ್ನು ಗ್ರಹಿಸುತ್ತದೆ.
ಸ್ಮಾರ್ಟ್‌ಫೋನ್‌ನ ಟಚ್‌ಸ್ಕ್ರೀನ್‌ನಲ್ಲಿರುವ ಎಲೆಕ್ಟ್ರೋಡ್‌ಗಳು ಒಂದು ರೀತಿಯ ಜಾಲವನ್ನು (Network) ರೂಪಿಸುತ್ತವೆ. ಬೆರಳು ಒಂದು ನಿರ್ದಿಷ್ಟ ಜಾಗವನ್ನು ಮುಟ್ಟಿದಾಗ ಆ ಪ್ರದೇಶದ ವಿದ್ಯುತ್ ಸಂಕೇತಗಳಲ್ಲಿ (Electrical Signals) ಬದಲಾವಣೆ ಉಂಟಾಗುತ್ತದೆ. ಟಚ್ ಕಂಟ್ರೋಲರ್ ಈ ಬದಲಾವಣೆಗಳನ್ನು ಓದಿ, ಸ್ಪರ್ಶದ ಸ್ಥಿತಿಯನ್ನು ಅಂದಾಜಿಸುತ್ತದೆ. ಆ ಬಳಿಕ ಈ ಮಾಹಿತಿಯು ಸ್ಮಾರ್ಟ್‌ಫೋನ್‌ನ ಪ್ರೊಸೆಸರ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗೆ (OS) ರವಾನೆಯಾಗುತ್ತದೆ. ಉದಾಹರಣೆಗೆ ನೀವು ಸ್ಕ್ರೀನ್‌ನ ಕೆಳಗಿನ ಎಡಭಾಗದಲ್ಲಿರುವ ಆ್ಯಪ್ ಐಕಾನ್ ಮೇಲೆ ಟ್ಯಾಪ್ ಮಾಡಿದ್ದೀರಿ ಎಂದು ಭಾವಿಸೋಣ. ಆಗ ಟಚ್ ಸಿಸ್ಟಮ್ ಆ ನಿರ್ದಿಷ್ಟ ಜಾಗದ X ಮತ್ತು Y ನಿರ್ದೇಶಾಂಕಗಳನ್ನು (Coordinates) ಪತ್ತೆ ಮಾಡುತ್ತದೆ. ಆಪರೇಟಿಂಗ್ ಸಿಸ್ಟಮ್ ಆ ಜಾಗದಲ್ಲಿದ್ದ ಆ್ಯಪ್ ಐಕಾನ್ ಒತ್ತಲಾಗಿದೆ ಎಂಬುದನ್ನು ಅರ್ಥಮಾಡಿಕೊಂಡು, ತಕ್ಷಣವೇ ಆ ಆ್ಯಪ್ ಅನ್ನು ಓಪನ್ ಮಾಡುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.