Hindi Imposition: ರಾಹುಲ್ ಗಾಂಧಿ ಕನ್ನಡದ ಮೇಲೆ ಹಿಂದಿ ಹೇರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಪ್ರಾದೇಶಿಕ ಭಾಷೆಗಳಿಗೆ ಸಂವಿಧಾನದಲ್ಲಿ ಹಕ್ಕಿದೆ. ಹಿಂದಿಯೊಂದನ್ನೇ ರಾಷ್ಟ್ರೀಯ ಭಾಷೆಯನ್ನಾಗಿ ಮಾಡುವುದು ತಪ್ಪು ಎಂದಿದ್ದಾರೆ.
ಮಂಡ್ಯ: ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ. ಸದ್ಯ ಕರ್ನಾಟಕದಲ್ಲಿ ರಾಹುಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಹಿಂದಿ ಹೇರಿಕೆ ಮತ್ತು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಕುರಿತು ಕೇಳಿದ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದಾರೆ. ಕನ್ನಡದಂತ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯ ಕುರಿತಂತೆ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಿವೆ. ಕನ್ನಡ ಪರ ಸಂಘಟನೆಗಳು ಮತ್ತು ಹೋರಾಟಗಾರರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಧಿಕಾರಾವಧಿಯಲ್ಲಿ ಪ್ರಾದೇಶಿಕ ಭಾಷೆಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ರಾಹುಲ್ ಗಾಂಧಿ ಕೂಡ ಇತ್ತೀಚೆಗೆ ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಅವರಿಗೆ ಮಾತನಾಡಲು ಅವಕಾಶ ನೀಡದ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ಪಾದಯಾತ್ರೆ ವೇಳೆ ಪ್ರಾದೇಶಿಕ ಭಾಷೆಯ ಹಕ್ಕಿನ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಹಲವು ವಿದ್ಯಾಸಂಸ್ಥೆಗಳ ಶಿಕ್ಷಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹಿಂದಿಯೊಂದೇ ರಾಷ್ಟ್ರೀಯ ಭಾಷೆ ಎಂಬುದು ಪ್ರಾದೇಶಿಕ ಭಾಷೆಗಳ ಗುರುತನ್ನು ಅಳಿಸಿ ಹಾಕುವ ಯತ್ನವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಕನ್ನಡ ಭಾಷೆಯ ಗುರುತಿನ ಕುರಿತಾಗಿ ರಾಹುಲ್ ಗಾಂಧಿಯವರ ಜೊತೆ ಚರ್ಚೆ ನಡೆಯಿತು. ಎಲ್ಲರ ಮಾತೃಭಾಷೆಯೂ ಅತ್ಯಂತ ಪ್ರಾಮುಖ್ಯವಾದದ್ದು. ನಾವು ಎಲ್ಲ ಭಾಷೆಗಳನ್ನೂ ಗೌರವಿಸಬೇಕು. ಸಂವಿಧಾನದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಹಕ್ಕಿದೆ, ಎಂದು ರಾಹುಲ್ ಗಾಂಧಿ ಹೇಳಿದರು," ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮಾಧ್ಯಮ ವರದಿಗಾರರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಬಸವ ತತ್ವದಂತೆ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ
"ಹಿಂದಿಯೊಂದನ್ನೇ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿ, ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡುವ ಯತ್ನ ಸರಿಯಲ್ಲ. ಇದು ಪ್ರಾದೇಶಿಕ ಪಕ್ಷಗಳ ಉಳಿವಿಗೆ ಮತ್ತು ಗುರುತಿಗೆ ದೊಡ್ಡ ಪೆಟ್ಟಾಗಿ ಪರಿಣಮಿಸಲಿದೆ," ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿರುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದರು.
ಸಂವಾದದಲ್ಲಿ ಭಾಗಿಯಾಗಿದ್ದವರು ಕಾಂಗ್ರೆಸ್ ಕಾರ್ಯಕರ್ತರಲ್ಲ, ಆದರೆ ಭಾರತದ ಸಂವಿಧಾನವನ್ನು ಉಳಿಸುವ ಇರಾದೆಯೊಂದಿಗೆ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: ಮಂಡ್ಯ: ಪಾದಯಾತ್ರೆಯಲ್ಲಿ ರಾಹುಲ್ ಸರಳತೆ ಪ್ರದರ್ಶನ: ಮಗುವನ್ನು ಮುದ್ದಿಸಿ ಚಾಕೋಲೇಟ್ ನೀಡಿದ ಅಧಿನಾಯಕ..!
ಭಾರತ್ ಜೋಡೊ ಯಾತ್ರೆ ಕಳೆದ ಸುಮಾರು ಒಂದು ತಿಂಗಳಿಂದ ನಡೆಯುತ್ತಿದ್ದು, ತಮಿಳುನಾಡು - ಕೇರಳದ ನಂತರ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಿದ್ದಾರೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೂಡ ಒಂದು ದಿನದ ಮಟ್ಟಿಗೆ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಆಯುಧ ಪೂಜೆ ಮತ್ತು ವಿಜಯ ದಶಮಿಯ ದಿನ ರಾಹುಲ್ ಮತ್ತು ಸೋನಿಯಾ ಮೈಸೂರಿನ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆದರು.