ಎರಡು ವರ್ಷದ ನಂತರ ಒಡಕೆ ಕಟ್ಟೆ ಈ ಬಾರಿಯ ಮಳೆಗೆ ಭರ್ತಿಯಾಗಿದೆ. ಕಟ್ಟೆ ತುಂಬಿ ನೀರು ಹರಿಯುತ್ತಿರುವುದು ರೈತರ ಮುಖದಲ್ಲಿ ಸಂತಸ ತುಂಬಿದೆ. ಸುತ್ತಮುತ್ತಲ ಪ್ರದೇಶದಲ್ಲಿನ ಹಳ್ಳಕೊಳ್ಳಗಳೂ ತುಂಬುವಂತಾಗಿದೆ.
ಮಂಡ್ಯ(ಅ.24): ಕಿಕ್ಕೇರಿ ಅಮಾನಿಕೆರೆಯ ಜೋಡಿಕಟ್ಟೆಯಾದ ಒಡಕೆ ಕಟ್ಟೆಕುಂಭದ್ರೋಣ ಮಳೆಯ ಆರ್ಭಟಕ್ಕೆ ಮೈದುಂಬಿ ಹರಿಯುತ್ತಿದೆ.
ಸತತ ಎರಡು ವರ್ಷಗಳಿಂದ ಮಳೆ ಬಾರದೆ ಕೆರೆಯೂ ತುಂಬದೆ ರೈತರು ಹೈರಾಣವಾಗಿದ್ದರು. ಜಾನುವಾರುಗಳ ಮೇವಿಗೆ ಭಾಗಶಃ ತತ್ವಾರ ಉಂಟಾಗಿ ರೈತರು ಹೈನುಗಾರಿಕೆ ನಂಬಿ ಬದುಕಲು ಕಷ್ಟವಾಗಿತ್ತು. ಮೇವಿಲ್ಲದೆ, ಬೆಳೆಯೂ ಬೆಳೆಯಲು ಸಾಧ್ಯವಾಗದೆ ರೈತ ನಗರಪ್ರದೇಶಕ್ಕೆ ಕೂಲಿ ಅರಸಿ ಹೋಗುವಂತಾಗಿತ್ತು.
ಮುಂಗಾರು ಮಳೆ ಕೈಕೊಟ್ಟಂತಾಗಿ ಪ್ರಸಕ್ತ ವರ್ಷವೂ ರೈತನ ಬದುಕಿಗೆ ಬರೆ ಎಳೆಯುವಂತಾಗಿರುವ ಹೊತ್ತಿಗೆ ಕುಂಭದ್ರೋಣ ಮಳೆ ಹೋಬಳಿಯಾದ್ಯಂತ ಬಿರುಸಿನಿಂದ ಸುರಿದ ಪರಿಣಾಮ ಇಳೆ ತಂಪಾಗುವಂತಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿನ ಹಳ್ಳಕೊಳ್ಳಗಳು ತುಂಬುವಂತಾಗಿದೆ.
ಅನರ್ಹ ಶಾಸಕ ನಾರಾಯಣ ಗೌಡರಿಂದ ಭರ್ಜರಿ ಬಾಡೂಟ.
ನೀರಾವರಿ ಇಲಾಖೆಯವರು ಕಳೆದ ವರ್ಷ ತುಂಬಿದ್ದ ಕೆರೆಯ ಏರಿ ಅಪಾಯದಲ್ಲಿದೆ ಎಂದು ಒಡೆದು ಹಾಕಿದ್ದರು. ಇದರ ಪರಿಣಾಮ ಆಸುಪಾಸಿನ ರೈತರು ಬೆಳೆ ಬೆಳೆಯದಂತಾಗಿತ್ತು. ಕೆರೆಯಲ್ಲಿ ಹುಲ್ಲು ಕೂಡ ಇಲ್ಲದಾಗಿತ್ತು. ಕೆರೆ ನಂಬಿದ ರೈತರು ಬಹುತೇಕ ಜಾನುವಾರುಗಳನ್ನು ಮಾರಾಟ ಮಾಡುವಂತಾಗಿದ್ದರು.
ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಒಡಕೆ ಕಟ್ಟೆತುಂಬಿದೆ. ರೈತರು ಕೆರೆಯ ದಡದಲ್ಲಿ ಗಂಗಾಮಾತೆಗೆ ಭಕ್ತಿಯಿಂದ ಪೂಜಿಸಿದರು. ಕೆರೆ ಪಾತ್ರದಲ್ಲಿನ ರೈತರ ಜಮೀನಿನ ಕೊಳವೆಬಾವಿಗಳಲ್ಲಿ ಜಿನುಗುತ್ತಿದ್ದ ನೀರು ರಭಸದಲ್ಲಿ ಧುಮುಕುವಂತಾಗಿದೆ. ಚೌಡೇನಹಳ್ಳಿ ಕಟ್ಟೆಯೂ ಮೈದುಂಬಿ ಹರಿಯುತ್ತಿದ್ದು ನೋಡಗರಿಗೆ ನಯನ ಮನೋಹರವಾಗಿದೆ.
ಉಕ್ಕಿ ಹರಿದ ಲೋಕಪಾವನಿ ನದಿ, ಜಮೀನುಗಳು ಜಲಾವೃತ
ಈ ಭಾರಿ ಮಳೆಗೆ ಯಾವುದೇ ಹಾನಿಯಾಗಿಲ್ಲ. ಹೋಬಳಿಯಾದ್ಯಂತ ನಾಗರಿಕರು ಉಸಿರಾಡುವಂತಾಗಿದೆ. ಹೊಲಗದ್ದೆಗಳಲ್ಲಿ ನೀರು ತುಂಬಿದ್ದು ರೈತರು ಕೃಷಿ ಚಟುವಟಿಕೆಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ.