ಮಂಡ್ಯದಲ್ಲಿ ಸುರಿದ ಭಾರೀ ಮಳೆಗೆ ಮಳವಳ್ಳಿಯಲ್ಲಿ ಭತ್ತದ ಗದ್ದೆ ಜಲಾವೃತವಾಗಿದೆ. ಇನ್ನೇನು ಕೈಗೆ ಸೇರಬೇಕೆಂದಿದ್ದ ಬೆಳೆ ಏಕಾಏಕಿ ಸುರಿದ ಮಳೆಗೆ ಸಂಪೂರ್ಣ ನಾಶವಾಗಿ ಹೋಗಿದೆ. ಜೊತೆಗೆ ಕಾಲುವೆಯ ತಡೆಗೊಡೆ ಕುಸಿದಿರುವ ಘಟನೆ ಪಟ್ಟಣದ ಮಳವಳ್ಳಿ ತಮ್ಮಡಹಳ್ಳಿ ಮಧ್ಯೆ ಇರುವ ನಡುಗದ್ದೆ ಗುಂಡಿ ಸಮೀಪ ನಡೆದಿದೆ.
ಮಂಡ್ಯ(ಅ.23): ಮಳವಳ್ಳಿಯಲ್ಲಿ ಕಳೆದ 2 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ದೊಡ್ಡಕೆರೆ ಹೆಚ್ಚುವರಿ ನೀರು ಭತ್ತದ ಗದ್ದೆ ನುಗ್ಗಿದ ಪರಿಣಾಮ ಭತ್ತದ ಗದ್ದೆ ಸಂಪೂರ್ಣ ನಾಶವಾಗಿದೆ. ಜೊತೆಗೆ ಕಾಲುವೆಯ ತಡೆಗೊಡೆ ಕುಸಿದಿರುವ ಘಟನೆ ಪಟ್ಟಣದ ಮಳವಳ್ಳಿ ತಮ್ಮಡಹಳ್ಳಿ ಮಧ್ಯೆ ಇರುವ ನಡುಗದ್ದೆ ಗುಂಡಿ ಸಮೀಪ ನಡೆದಿದೆ.
ಪಟ್ಟಣದ ರಘು ಎಂಬುವವರ ಜಮೀನಿಗೆ ನೀರು ನುಗ್ಗಿದ ಪರಿಣಾಮ ಮಣ್ಣು ಕೊರೆದು ಕಾಲುವೆಗೆ ಹಾಕಲಾಗಿದ್ದ ತಡೆಗೊಡೆ ಕುಸಿದಿದೆ. ಈ ಸಂಬಂಧ ಕಾವೇರಿ ನೀರಾವರಿ ನಿಗಮಕ್ಕೆ ದೂರು ನೀಡಲಾಗಿದೆ. ಸರ್ಕಾರದಿಂದ ಸಿಗುವ ಪರಿಹಾರವನ್ನು ಕೊಡಿಸಬೇಕು ಹಾಗೂ ತಡೆ ಗೋಡೆ ನಿರ್ಮಾಣ ಮಾಡಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿ ತಮ್ಮಣ್ಣಗೌಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ.
ಬಿದ್ದ ಮರ ತೆರವಿಗೆ ಒತ್ತಾಯ:
ಭಾರಿ ಮಳೆಗೆ ಅರಣ್ಯ ಇಲಾಖೆಗೆ ಸೇರಿದ ಮರವೊಂದು ಭತ್ತದ ಗದ್ದೆ ಬಿದ್ದ ಪರಿಣಾಮ ಭತ್ತದ ಫಸಲು ನೆಲ ಕಚ್ಚಿರುವ ಘಟನೆ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ನಡೆದಿದೆ. ಪಟ್ಟಣದ ಸುಲ್ತಾನ್ ರಸ್ತೆಯಲ್ಲಿರುವ ರಾಮಣ್ಣ ಎಂಬುವವ ಜಮೀನಿಗೆ ರಸ್ತೆ ಬದಿ ಮರ ಬಿದ್ದಿದ್ದು, ಇದನ್ನು ತೆರವುಗೊಳಿಸಬೇಕೆಂದು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಭಾರಿ ಮಳೆಗೆ ಕೆರೆ, ಕಟ್ಟೆಭರ್ತಿ
ಭತ್ತದ ಮೇಲೆ ಬಿದ್ದಿರುವ ಮರವನ್ನು ರೈತರು ತೆರವುಗೊಳಿಸಿದರೇ ಅರಣ್ಯ ಇಲಾಖೆಯ ಅಧಿಕಾರಿಗಳು ದಂಡ ಹಾಕುತ್ತಾರೆ. ಭತ್ತದ ಮೇಲೆ ಬಿದ್ದಿರುವ ಮರವನ್ನು ತೆರವುಗೊಳಿಸಬೇಕೆಂದು ಎಷ್ಟೇ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಎಚ್ಚರಿಕೆ ನೀಡಿದ್ದಾರೆ.
ಪಾಂಡವಪುರ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ವಿವಿಧೆಡೆ ಹಲವಾರು ಮನೆಗಳ ಗೋಡೆ, ಮೇಲ್ಚಾವಣಿಗಳು ಕುಸಿದಿದೆ.
ಮನೆಗೆ ಆಸರೆಯಾಗಿದ್ದ ಮಗ ದುಷ್ಕರ್ಮಿಗಳಿಗೆ ಬಲಿ, ಅನ್ನಾಹಾರ ಬಿಟ್ಟ ಸಾಕು ನಾಯಿ..!
ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಕಳಸೆಗೌಡ, ಕಲ್ಲೇಗೌಡ, ಅಕ್ಕಯಮ್ಮ, ಕೆರೆತೊಣ್ಣೂರು ಗ್ರಾಮದಲ್ಲಿ 2, ಚಿಕ್ಕಾಡೆ-1, ತಾಳಶಾಸನ-1 ಅರಕನಕೆರೆ-1 ಮಾಣಿಕ್ಯನಹಳ್ಳಿ-1, ಮೇಲುಕೋಟೆ-1, ಹೊಳಲೆಕಟ್ಟೆಕೊಪ್ಪಲು-1, ಬಿಂಡಹಳ್ಳಿ-2, ಕೊಡಾಲ-1 ಹಾಗೂ ಚಿನಕುರಳಿ ಗ್ರಾಮದಲ್ಲಿ -5 ಮನೆಗಳು ಮಳೆಯಿಂದಾಗಿ ಹಾನಿಯುಂಟಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯುಂಟಾಗಿಲ್ಲ. ವಿಷಯ ತಿಳಿದ ತಹಸೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಗಳು ಗ್ರಾಮಗಳಿಗೆ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಏರಿ ಕುಸಿತ ತಪ್ಪಿದ ಅನಾಹುತ:
ಮಳೆಯಿಂದಾಗಿ ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಕೆರೆಯೂ ಕುಸಿದಿದೆ ಆದರೆ, ಕೆರೆಯಿಂದ ನೀರು ಹೊರಗೆ ಹೋಗಿಲ್ಲ. ಕೆರೆ ಏರಿಯ ಮೇಲೆ ರಸ್ತೆ ಇದೆ, ರಸ್ತೆ ಬಲಭಾಗಕ್ಕೆ ಕೆರೆ ಇದೆ. ಆದರೆ, ಏರಿ ಕುಸಿದಿರುವುದು ರಸ್ತೆಯ ಎಡಭಾಗಕ್ಕೆ ಏರಿ ಕುಸಿದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ತಾಲೂಕುಗಳಲ್ಲಿ ಸುರಿದ ಮಳೆ ವಿವರ
ಕೆ.ಆರ್.ಪೇಟೆ - 55.2 ಮಿ.ಮೀ
ಮದ್ದೂರು - 20.7 ಮಿ.ಮೀ
ಮಳವಳ್ಳಿ - 12.2 ಮಿ.ಮೀ
ಮಂಡ್ಯ - 35.7 ಮಿ.ಮೀ
ನಾಗಮಂಗಲ - 65.9 ಮಿ.ಮೀ
ಪಾಂಡವಪುರ - 63 ಮಿ.ಮೀ
ಶ್ರೀರಂಗಪಟ್ಟಣ - 40.6 ಮಿ.ಮೀ
ಒಟ್ಟು - 43.1 ಮಿ.ಮೀ