ಸ್ವಾಭಿಮಾನ ಪ್ರಶ್ನಿಸಿದ್ದೀರಿ; ಪರಿಣಾಮ ಎದುರಿಸಿ, ಎಚ್‌ಡಿಕೆಗೆ ಕೈ ಮುಖಂಡನ ಎಚ್ಚರಿಕೆ..!

By Kannadaprabha NewsFirst Published Oct 10, 2019, 10:36 AM IST
Highlights

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದ ಸ್ವಾಭಿಮಾನಿಗಳು ಎಲ್ಲಿ ಹೋದರು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಹೋರಾಟಗಾರ ಡಾ.ಎಚ್‌.ಎಸ್‌.ರವೀಂದ್ರ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ(ಅ.10): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದ ಸ್ವಾಭಿಮಾನಿಗಳು ಎಲ್ಲಿ ಹೋದರು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಹೋರಾಟಗಾರ ಡಾ.ಎಚ್‌.ಎಸ್‌.ರವೀಂದ್ರ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಮಂಡ್ಯದ ಸ್ವಾಭಿಮಾನಿಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವನ್ನು ಸ್ವಾಭಿಮಾನಿಗಳು ಕೊಟ್ಟಿದ್ದಾರೆ. ಇದೇ ರೀತಿ ಹೇಳಿಕೆ ಕೊಟ್ಟರೆ ಮುಂದೆಯೂ ಉತ್ತರ ಕೊಡಲಿದ್ದಾರೆ ಎಂದಿದ್ದಾರೆ.

ಇಲ್ಲ ಸಲ್ಲದ ಹೇಳಿಕೆ ನೀಡೋದು ನಿಲ್ಸಿ:

ಸ್ವಾಭಿಮಾನ ಕುರಿತ ಹೇಳಿಕೆ ಸುಮಲತಾ ಅವರಿಗೆ ಮಾತ್ರವಲ್ಲ ಅವರಿಗೆ ಮತ ನೀಡಿವರೆಲ್ಲರ ಸ್ವಾಭಿಮಾನವನ್ನೂ ಕೆಣಕಿದಂತೆ. ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಬಗ್ಗೆ ಅಷ್ಟುಅಭಿಮಾನ ಇದ್ದರೆ ಲೋಕಸಭೆ ಕ್ಷೇತ್ರದ 8 ಜೆಡಿಎಸ್‌ ಶಾಸಕರನ್ನು ಕರೆದುಕೊಂಡು ಹೋಗಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದು ಸಲಹೆ ಮಾಡಿದ್ದಾರೆ.

'ಬಿಜೆಪಿ ಹೈಕಮಾಂಡ್‌ ಸ್ಟ್ರಾಂಗ್‌ ಇದೆ, ಚಾಡಿ ಮಾತು ಕೇಳಲ್ಲ!'

ಯಡಿಯೂರಪ್ಪ ಸಿಎಂ ಕೇವಲ ಮೂರು ತಿಂಗಳಾಗಿದೆ. ಜಿಲ್ಲೆಯ ರೈತರ ಬಗ್ಗೆ ಅಷ್ಟುಕಾಳಜಿ ಇದ್ದರೆ ಮೈಷುಗರ್‌ ಮತ್ತು ಪಿಎಸ್‌ಎಸ್‌ ಕಾರ್ಖಾನೆಯನ್ನು ನೀವೇ ಪ್ರಾರಂಭಿಸುತ್ತಿದ್ದಿರಿ. ಆದರೆ, ಹೊಸ ಕಾರ್ಖಾನೆ ಸ್ಥಾಪನೆ ಮಾಡುವ ಆಸೆ ತೋರಿಸಿ ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ ಸೇರಲ್ಲ, ಸೇರೋದಾದ್ರೆ ಮಾಧ್ಯಮಕ್ಕೆ ಹೇಳಿಯೇ ಸೇರ್ತೇನೆ ಎಂದ್ರು ಸುಮಲತಾ

ಜಿಲ್ಲೆಯಲ್ಲಿ ಇನ್ನು 40 ಲಕ್ಷ ಟನ್‌ ಕಬ್ಬು ನುರಿಸಬೇಕಿದೆ. 5 ಕಾರ್ಖಾನೆಗಳಿಗೆ ನಿತ್ಯ 15ಸಾವಿರ ಟನ್‌ ಕಬ್ಬು ನುರಿಸಿದರೂ ಕಬ್ಬು ಖಾಲಿ ಮಾಡಲಾಗುವುದಿಲ್ಲ. ಈ ನಡುವೆ ಮಧ್ಯವರ್ತಿಗಳ ಹಾವಳಿಯಿಂದ ಕಡಿಮೆ ಬೆಲೆಗೆ ರೈತರು ಕಬ್ಬನ್ನು ಮಾರುವಂತಾಗಿದೆ. ಇದಕ್ಕೆ ಸ್ಕಾರ್ಡ್‌ ರಚನೆ ಮಾಡಲಾಗಿದೆ ಎನ್ನುತ್ತಾರೆ. ಆದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ಎಂ.ಬಿ.ನಾಗಣ್ಣಗೌಡ, ಕಾಂಗ್ರೆಸ್‌ ಮುಖಂಡ ಸುಂಡಹಳ್ಳಿ ಮಂಜುನಾಥ್‌ ಇದ್ದರು.

ಸುಮಲತಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು ಸಮಂಜಸವಲ್ಲ

ಸಂಸದೆ ಸುಮಲತಾ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಹೇಳಬೇಕು ಎಂದಿದ್ದರೆ ಎಲ್ಲಾದರೂ ಸಭೆ ಮಾಡಿ ಹೇಳಿದರೆ ಚೆನ್ನಾಗಿತ್ತು. ಖುದ್ದು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು ಸಮಂಜಸವಲ್ಲ. ಒಂದು ಪಕ್ಷದ ಕಚೇರಿಗೆ ತೆರಳಿ ಅಭಿನಂದನೆ ಹೇಳುವುದು ಹಲವಾರು ಅನುಮಾನ, ಗೊಂದಲಗಳಿಗೆ ಎಡೆ ಮಾಡಿಕೊಡುತ್ತದೆ. ಪ್ರತಿ ತಾಲೂಕಿನಲ್ಲೂ ಸಭೆ ಮಾಡಿ ಧನ್ಯವಾದ ಹೇಳಬಹುದಿತ್ತು. ಪರಿಸ್ಥಿತಿಯನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವವರ ನಡುವೆ ಎಚ್ಚರದಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

click me!