ಬೈಕ್ ಸವಾರರವೇ ಹುಷಾರ್, ರಸ್ತೆ ನಡುವಲ್ಲೇ ತಡೆದು ವಾಹನ ದೋಚಿದ್ರು ಖತರ್ನಾಕ್ ಕಳ್ಳರು

By Kannadaprabha NewsFirst Published Oct 18, 2019, 12:10 PM IST
Highlights

ಬೈಕ್ ಸವಾರರನ್ನು ತಡೆದು ನಗದು, ಮೊಬೈಲ್ ಕೊನೆಗೆ ಬೈಕನ್ನೇ ದೋಚಿಕೊಂಡು ಹೋಗಿರುವ ಘಟನೆ ಮೈಸೂರಿನ ಮದ್ದೂರಿನಲ್ಲಿ ನಡೆದಿದೆ. ಮದ್ದೂರು ತಾಲೂಕಿನ ವಳಗೆರೆಹಳ್ಳಿಯ ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘದ ಗುಮಾಸ್ತ ಮಹೇಶ್‌ ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿದ್ದಾರೆ.

ಮಂಡ್ಯ(ಅ.18) ಬೈಕ್‌ನಲ್ಲಿ ತೆರಳುತ್ತಿದ್ದ ಸಹಕಾರ ಸಂಘಗಳ ನೌಕರನೋರ್ವನನ್ನು ಅಡ್ಡಗಟ್ಟಿದ ಮೂವರು ಮುಸುಕುಧಾರಿಗಳ ಗುಂಪು ಹಲ್ಲೆ ನಡೆಸಿ ನಗದು, ಮೊಬೈಲ್ ಮತ್ತು ಬೈಕನ್ನು ದರೋಡೆ ಮಾಡಿರುವ ಘಟನೆ ಪಟ್ಟಣದ ಚನ್ನೇಗೌಡನದೊಡ್ಡಿ ಸಮೀಪದ ವಳಗೆರೆಹಳ್ಳಿ-ದೇಶಹಳ್ಳಿ ರಸ್ತೆಯಲ್ಲಿ ಬುಧವಾರ ರಾತ್ರಿ ಜರುಗಿದೆ.

ಮದ್ದೂರು ತಾಲೂಕಿನ ವಳಗೆರೆಹಳ್ಳಿಯ ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘದ ಗುಮಾಸ್ತ ಮಹೇಶ್‌ ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಹಲ್ಲೆಗೊಳಗಾಗಿರುವ ಗುಮಾಸ್ತ ಮಹೇಶ್‌ ಚನ್ನಪಟ್ಟಣ ತಾಲೂಕಿನ ಹುಳುವಾಡಿ ಗ್ರಾಮದಲ್ಲಿರುವ ಪತ್ನಿ ಮನೆಗೆ ಹೋಗಿ ಸ್ವಗ್ರಾಮ ವಳಗೆರೆಹಳ್ಳಿಗೆ ತಮ್ಮ ಹೀರೋ ಹೋಂಡಾ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದರು.

'JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ'..

ಚನ್ನೇಗೌಡನದೊಡ್ಡಿ ಸಮೀಪದ ವಳಗೆರೆಹಳ್ಳಿ- ದೇಶಹಳ್ಳಿ ರಸ್ತೆಯಲ್ಲಿ ರಾತ್ರಿ 11.15ರ ಸುಮಾರಿಗೆ ಉಲುಚಿ ಮರದ ಬಳಿ ಬೇಲಿ ಮರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಮೂವರು ಮುಸುಕುಧಾರಿ ದುಷ್ಕರ್ಮಿಗಳ ಪೈಕಿ ಓರ್ವ ಮರದ ರೆಂಬೆಯಿಂದ ಹಾರಿ ಬೈಕ್‌ ಮೇಲಿದ್ದ ಮಹೇಶ್‌ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಆಯತಪ್ಪಿ ಬೈಕ್‌ ಸಮೇತ ರಸ್ತೆ ಬದಿಯ ಕಬ್ಬಿನ ಗದ್ದೆಗೆ ಉರುಳಿಬಿದ್ದ ಮಹೇಶ್‌ ಮೇಲೆ ಹಲ್ಲೆ ನಡೆಸಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಮಂಡ್ಯ: ಕಾರು ಅಡ್ಡಗಟ್ಟಿ ದೋಚಿದ್ರು 80 ಲಕ್ಷ

ನಂತರ ಆತನ ಜೇಬಿನಲ್ಲಿದ್ದ 31 ಸಾವಿರ ನಗದು, ಮೊಬೈಲ್ ಲೂಟಿ ಮಾಡಿದ ಬಳಕ ಮಹೇಶ್‌ನ ಬೈಕ್‌ ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ದರೋಡೆ ಮಾಡಿದ ವ್ಯಕ್ತಿಗಳು ಸುಮಾರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಮಹೇಶ್‌ ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇಶಹಳ್ಳಿ ಆಸುಪಾಸಿನಲ್ಲಿ ಶೋಧ ನಡೆಸಿದರಾದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ

click me!