ಅಜ್ಞಾತ ಹೋರಾಟಗಾರರ ಪರಿಚಯ, ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಲೋಕಾರ್ಪಣೆ

Published : Aug 11, 2026, 06:19 PM IST
Krantiya Kidigalu Book Released

ಸಾರಾಂಶ

ಕ್ರಾಂತಿಯ ಕಿಡಿಗಳು ಪುಸ್ತಕ ಲೋಕಾರ್ಪಣೆಗೊಂಡಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ, 50ವರ್ಷಕ್ಕೂ ಹೆಚ್ಚು ಕಾಲ ಅಂಡಮಾನ್ ಜೈಲಿನಲ್ಲಿದ್ದ, ಗುಂಡಿನ ಹೋರಾಟ ನಡೆಸಿದ ಅಜ್ಞಾತ ಹೋರಾಟಗಾರರ ಕುರಿತು ಬೆಳಕು ಚೆಲ್ಲುವ ಕ್ರಾಂತಿಯ ಕಿಡಿಗಳು ಪುಸ್ತಕ ಲೋಕಾರ್ಪಣೆಗೊಂಡಿದೆ.

ಬೆಂಗಳೂರು (ಆ.11): ಅಹಿಂಸೆ ಹಾಗೂ ಅಹಿಂಸಾ ಸತ್ಯಾಗ್ರಹಗಳಿಂದ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಕೇವಲ ಅಹಿಂಸೆಯಿಂದ ಮಾತ್ರವಲ್ಲ, ಅದೆಷ್ಟೋ ಕ್ರಾಂತಿಕಾರಿಗಳ ಕೆಚ್ಚೆದೆಯ ಹೋರಾಟವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಹ ಕಾರ್ಯವಾಹರಾದ ಮುಕುಂದ ಸಿ. ಆರ್ ಹೇಳಿದ್ದಾರೆ. ಚಾಮರಾಜಪೇಟೆಯ ಕೇಶವಕೃ‍ಪಾದಲ್ಲಿ ‘ಕ್ರಾಂತಿಯ ಕಿಡಿಗಳು‘ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮುಕುಂದ ಸಿ. ಆರ್, ಈ ಕ್ರಾಂತಿಯ ಕಿಡಿಗಳು ಪುಸ್ತಕದಲ್ಲಿ 33 ಅಜ್ಞಾತ, ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಇದೆ. ಇದು ನಮಗೆ ತಿಳಿದಿರದ, ನಾವು ಕೇಳಿರದ ಹಲವು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ನಮಗೆ ಪರಿಚಯಿಸುತ್ತದೆ ಎಂದಿದ್ದಾರೆ.

ಬ್ರಿಟಿಷರಿಗೆ ಅವರದ್ದೇ ಮಾರ್ಗದಲ್ಲಿ ಉತ್ತರಕೊಟ್ಟ ಕ್ರಾಂತಿಕಾರಿಗಳು

ಬ್ರಿಟಿಷರ ಬಳಿ ನಮಗೆ ಸ್ವಾತಂತ್ರ್ಯ ಕೊಡಿ ಎಂದು ಪ್ರಾರ್ಥನೆ ಮಾಡುವ ಒಂದು ವರ್ಗವಿದ್ದರೆ, ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ಬಲವಾಗಿ ಪ್ರತಿಪಾದಿಸಿದ್ದು ಇನ್ನೊಂದು ವರ್ಗ. ಮೂರನೇ ವರ್ಗ ಕ್ರಾಂತಿಕಾರಿಗಳದ್ದು. ಇವರು ಬ್ರಿಟಿಷರಿಗೆ ಬ್ರಿಟಿಷರದ್ದೇ ಮಾರ್ಗದಲ್ಲಿ ಸಾಗಿ ಬಂದೂಕು, ಮದ್ದು–ಗುಂಡುಗಳನ್ನು ಬಳಸಿ ಉತ್ತರ ನೀಡಿದ್ದರು ಎಂದು ಮುಕುಂದ ಸಿ. ಆರ್ ಹೇಳಿದ್ದಾರೆ. ಮತ್ತೊಂದು ವರ್ಗ ಸಮಾಜ ಸುಧಾರಣೆಯ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದಲೇ ಕ್ರಾಂತಿಕಾರಿ ಹೋರಾಟಗಳು ನಡೆದಿದ್ದವು. ಕ್ರಾಂತಿಕಾರಿಗಳಾಗಿ ಸಶಸ್ತ್ರ ಹೋರಾಟಗಳಲ್ಲಿ ಭಾಗವಹಿಸಿದ ಹಲವರ ಕುರಿತು ಈ ಪುಸ್ತಕದಲ್ಲಿ ಉಲ್ಲೇಖವಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭ ಅಂತಹ ಅಜ್ಞಾತ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಇದು ಉತ್ತಮ ಪುಸ್ತಕ ಎಂದು ಮುಕುಂದ ಸಿ. ಆರ್ ಹೇಳಿದ್ದಾರೆ.

ಕ್ರಾಂತಿಯ ಕಿಡಿಗಳು ಪುಸ್ತಕದ ಲೇಖಕರಾದ ದು. ಗು. ಲಕ್ಷ್ಮಣ್ ಕ್ರಾಂತಿಯ ಕಿಡಿಗಳು ಪುಸ್ತಕದ ಕುರಿತು ಮತ್ತಷ್ಟು ಬೆಳಕು ಚೆಲ್ಲಿದರು. ಈ ಪುಸ್ತಕದಲ್ಲಿ 1857ರಲ್ಲಿಯೇ ಬಂಧನವಾಗಿ 50 ವರ್ಷ ಶಿಕ್ಷೆ ಅನುಭವಿಸಿದ ಮುಸಾಯ್‌ ಸಿಂಗ್‌ ಕಥೆಯಿದೆ. ಬಹುಶಃ ಈತನ ಹೆಸರು ಯಾರೂ ಕೇಳಿರಲಿಕ್ಕಿಲ್ಲ. ಆತ 50 ವರ್ಷಗಳ ಕಾಲ ಅಂಡಮಾನ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಗಿ ಬಂತು ಎಂದು ದು.ಗು ಲಕ್ಷ್ಮಣ್ ಹೇಳಿದರು. ನಾವೆಲ್ಲರು ಅಂಡಮಾನ್‌ನಲ್ಲಿ ಶಿಕ್ಷೆ ಅನುಭವಿಸಿದ ಸಾವರ್ಕರ್‌ ಬಗ್ಗೆ ಕೇಳಿದ್ದೇವೆ. ಹದಿಮೂರು ವರ್ಷ ಶಿಕ್ಷೆ ಅನುಭವಿಸಿ ಸಾವರ್ಕರ್‌ ಮರಳಿ ಬಂದರು. ಆದರೆ, ಮುಸಾಯ್‌ ಸಿಂಗ್‌ 50 ವರ್ಷ ಶಿಕ್ಷೆ ಅನುಭವಿಸಿದ. ಈತನ ಕಥೆ ಎಲ್ಲೂ ಬಂದಿಲ್ಲ. ಇತಿಹಾಸಕಾರರೊಬ್ಬರು ‘1857 ಫ್ರೀಡಂ ಆಫ್‌ ಸೌತ್‌ ಇಂಡಿಯಾ‘ ಪುಸ್ತಕದಲ್ಲಿ ಈತನ ಬಗ್ಗೆ ಬರೆದಿದ್ದರು. ಈ ಪುಸ್ತಕದಲ್ಲಿ ಅವನ ಬಗ್ಗೆ ವಿವರವಿದೆ, ಆದರೆ ಆತನ ಫೋಟೊ ಎಲ್ಲೂ ಸಿಗುತ್ತಿಲ್ಲ ಎಂದು ಕ್ರಾಂತಿಯ ಕಿಡಿಗಳ ರೋಚಕ ಘಟನೆಗಳನ್ನು ವಿವರಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹೇಮೂ ಕಲಾನಿ ಅಂತಿದ್ದ. ಆತ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ 19ನೇ ವಯಸ್ಸಿನಲ್ಲಿಯೇ ಗಲ್ಲು ಶಿಕ್ಷೆಗೆ ಗುರಿಯಾದ. ಮುರ್ಮು ಸಹೋದರರು ಎಂಬ ವನವಾಸಿ ಸಹೋದರರಿಬ್ಬರು ಕಾಡಿನ ನಡುವೆ ವಾಸಿಸುತ್ತಿದ್ದ ಎಲ್ಲರನ್ನೂ ಒಟ್ಟುಗೂಡಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಇಬ್ಬರನ್ನೂ ಬ್ರಿಟಿಷರು ನೇಣುಹಾಕಿ ಸಾಯಿಸಿದ್ದರು. ಈ ರೀತಿಯ ಒಂದಿಷ್ಟು ಯಾರೂ ಕೇಳರಿಯದ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಈ ಪುಸ್ತಕದಲ್ಲಿದೆ. ಒಟ್ಟು ಸುಮಾರು 33 ಅಜ್ಞಾತ, ಅನಾಮಿಕ ಹೋರಾಟಗಾರರ ಕಥೆ ಇದರಲ್ಲಿದೆ ಎಂದು ದು.ಗು ಲಕ್ಷ್ಮಣ್ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಎಂ.ಪಿ. ಕುಮಾರ್‌, ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ, ಖಜಾಂಜಿ ಕೆ. ಎಸ್‌. ನಾರಾಯಣ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ದ್ವೇಷಭಾಷಣ ಮಸೂದೆ ರಾಜ್ಯದಲ್ಲಿ ಜಾರಿ ಅನಾವಶ್ಯ - ವಿಧೇಯಕ ಜಾರಿಗೆ ಬಂದರೆ ಹಿರಿಯರು ಬುದ್ಧಿವಾದ ಹೇಳಲಾಗದು, ಇತಿಹಾಸಕಾರರು ಸತ್ಯ ನುಡಿಯಲು ಆಗದು!
ನೈಜ ಕಾರಣವಿಲ್ಲದೆ ಎಸ್‌ಐಆರ್‌ಗೆ ಕಾಂಗ್ರೆಸ್‌ ವಿರೋಧ: ಸಂಸದ ಕೋಟ ಶ್ರೀನಿವಾಸ ಪೂಜಾರಿ