ತತ್ವಜ್ಞಾನಿ, ಶತಾವಧಾನಿ ಗಣೇಶ್‌ಗಿಂದು ಹುಟ್ಟುಹಬ್ಬ

By Web Desk  |  First Published Dec 4, 2018, 11:57 AM IST

ಗೂಗಲ್ ಕೈಗೇ ಬಂದ ಮೇಲೆ ನಮ್ಮ ತಲೆಯಲ್ಲಿ ಏನೂ ಉಳಿದಿಲ್ಲ. ಎಲ್ಲವಕ್ಕೂ ಇದೇ ತಾಣದ ಮೇಲೆ ಅವಲಂಬಿತರಾಗಿದ್ದೇವೆ. ಆದರೆ, ಸಕಲ ಜ್ಞಾನದೊಂದಿಗೆ, ಹಲವು ಭಾಷೆಗಳ ಮೇಲೆ ಪ್ರಭತ್ವ ಸಾಧಿಸಿರುವ ಶತವಧಾನಿ ಆರ್. ಗಣೇಶ್ ಗೂಗಲ್‌ನಂತೆ ಅಪಾರ ಜ್ಞಾನ ಹೊಂದಿದವರು. ಇವರ ಬಗ್ಗೆ ನಿಮಗೇನು ಗೊತ್ತು? 


ಮೊನ್ನೆ ಯೂ ಟ್ಯೂಬ್​ ನಲ್ಲಿ 'ವಾಲ್ಮೀಕಿ ರಾಮಾಯಣ ಸ್ವಾರಸ್ಯಗಳು' ಎಂಬ ಪ್ರವಚನ ಕೇಳುತ್ತಿದ್ದೆ. ಅದು ಪರಮಾದ್ಭುತ ಪ್ರವಚನ. ವಾಲ್ಮೀಕಿ ಮಹರ್ಷಿಗಳ ಹೃದಯದ ಜಾಡು ಏನು ಅನ್ನುವುದು ಅರ್ಥವಾಗಬೇಕಿದ್ದರೆ ನೀವು ಒಮ್ಮೆ ಆ ಉಪನ್ಯಾಸ ಮಾಲಿಕೆ ಕೇಳಬೇಕು. 

ಕೈಕೇಯಿ ಕಾಡಿಗೆ ಹೋಗು ಅಂದಾಗ ನಿಜಕ್ಕೂ ಶ್ರೀರಾಮರು ವಿಚಲಿತರಾಗಲಿಲ್ಲವೇ..? ಆ ಸಂದರ್ಭದಲ್ಲಿ ಅವರು ಹೇಗೆ ನಡೆದುಕೊಂಡರು? ಅಲ್ಲಿ ರಾಮರು ಮಾತನಾಡಿದ್ದೆಷ್ಟು? ಎಷ್ಟು ಮಾತನಾಡಬೇಕಿತ್ತು? ಕೈಕೇಯಿ ಹತ್ತಿರ ಎಷ್ಟರ ಮಟ್ಟಿಗೆ ಅಂತರ ಕಾಯ್ದಿಟ್ಟಿದ್ದರು..? ಅಂಥ ಸಂದರ್ಭ ಕೃಷ್ಣನಿಗೆ ಸಿಕ್ಕಿದ್ದರೆ ಹೇಗಿರುತ್ತಿತ್ತು..! ಕೃಷ್ಣ- ರಾಮರು ಹೇಗೆ ವ್ಯಕ್ತಿತ್ವ: ವಿಭಿನ್ನ.! ಅಲ್ಲಿ ರಾಮರು ಕೊಟ್ಟ ಉತ್ತರವೇನು? ರಾಮರ ನಿಲುವೇನಾಗಿತ್ತು? ರಾಮರು ಇಷ್ಟುದ್ದ ಸಮರ್ಥಿಸಿಕೊಳ್ಳುವ ಸಮಯದಲ್ಲಿ ಒಂದೇ ಮಾತಿನಲ್ಲಿ ಉತ್ತರಕೊಟ್ಟದ್ದು ಯಾಕೆ..? ಪಿತ್ರಾ ಶತಗುಣಂ ಮಾತಾ ( ತಂದೆಯ 100 ಪಟ್ಟು ತಾಯಿ ದೊಡ್ಡವಳು ) ಎಂಬ ಕೌಸಲ್ಯೆಯ ಮಾತಿಗೆ ರಾಮರು ಕೊಟ್ಟ ಉತ್ತರ..! ಹೀಗೆ ಆ ಸಂದರ್ಭವನ್ನ ಎಷ್ಟು ಅಚ್ಚುಕಟ್ಟಾಗಿ, ರಸವತ್ತಾಗಿ, ಭಾವಪೂರ್ಣವಾಗಿ ವಿವರಿಸಿದ್ದಾರೆ ಎಂದರೆ ಅದು ಕೇವಲ ಶ್ರವಣಾಭಿರಾಮವಷ್ಟೇ ಅಲ್ಲ, ಅದನ್ನ ಕೇಳಿದ ಪ್ರತಿಯೊಬ್ಬರಿಗೂ ಆ ಕಾವ್ಯ ಹೃದ್ಗತವಾಗಿಬಿಡುತ್ತದೆ. 

Tap to resize

Latest Videos

undefined

ಇಂಥ ಭಾವಪೂರ್ಣ ಉಪನ್ಯಾಸ ಕಲೆ ಇರುವುದು ಕನ್ನಡದ ಏಕೈಕ ಪ್ರತಿಭೆ ಶತಾವಧಾನಿ ಡಾ. ಆರ್​ ಗಣೇಶರಿಗೆ ಮಾತ್ರ. ಆಡುಮುಟ್ಟದ ಸೊಪ್ಪಿಲ್ಲ ಅಂತಾರಲ್ಲ ಹಾಗೆ ಗಣೇಶರು ಓದದ ಪುಸ್ತಕವಿಲ್ಲ. ಸಾವಿರ ಪುಸ್ತಕಗಳನ್ನು ಓದಿದರೂ ಸಿಗದ ಮಹತ್ವಯುತ ಮಾಹಿತಿಗಳು ಅವರ ಉಪನ್ಯಾಸಗಳಲ್ಲಿವೆ. ಒಂದು ಉಪನ್ಯಾಸಕ್ಕಾಗಿ ಎಷ್ಟು ಪುಸ್ತಿಕೆಗಳ ಅಧ್ಯಯನ..! ಎಷ್ಟು ಸಂಶೋಧನೆಗಳು..! ಎಷ್ಟು ಅಧ್ಯಯನಶೀಲ ತಿರುಗಾಟ..! ಅಬ್ಬಾ..! ಆಶ್ಚರ್ಯ. ಅವರ ಒಂದು ಉಪನ್ಯಾಸ ಸಾವಿರ ಪುಸ್ತಕಗಳ ಅಧ್ಯಯನಕ್ಕೆ ಸಮ ಎನ್ನಬಹುದು. ಅಷ್ಟು ಮಾಹಿತಿಯುಕ್ತ ವಿಚಾರವನ್ನ ಕೇಳುಗರಿಗೆ ತಲುಪಿಸುತ್ತಾರೆ ಆ ಮಹಾನುಭಾವರು. 

ಅವರು ಓದಿದ್ದು ಇಂಜಿನಿಯರಿಂಗ್​ ಆದರೆ ಅವರು ಹೊರಳಿದ್ದು ಅಪ್ಪಟ ಕಲೆಯಕಡೆಗೆ. ಅವರನ್ನ ಶತಾವಧಾನಿಗಳು ಅಂತ ಕರೀತಾರೆ. ಕಾರಣ ಅವಧಾನ ಕಲೆಯನ್ನು ಉಳಿಸಿ ಬೆಳೆಸಿದ ಮಹಾ ತಪಸ್ವಿಗಳು ಅವರು. ಸಾಧ್ಯವಾದರೆ ಒಮ್ಮೆ ಅವಧಾನ ನಡೆಯುವಾಗ ಹೋಗಿಬನ್ನಿ ಅವರ ವಿದ್ವತ್ತಿನ ಆಳ-ವಿಸ್ತಾರ ಎರಡೂ ಪರಿಚಯವಾಗುತ್ತವೆ. 

ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಹೀಗೆ ವಿಸ್ತರಣೆ ಇದೆ. 

ಅಷ್ಟಾವಧಾನ ಎಂದರೇನು?
ಅಷ್ಟಾವಧಾನ ಅಂದರೆ 8 ಜನ ಪೃಚ್ಛಕರು ಕೇಳುವ ಪ್ರಶ್ನೆಗಳಿಗೆ ಏಕಕಾಲದಲ್ಲಿ ಯಾವುದೇ ತಯಾರಿ ಇಲ್ಲದೇ ಅಲ್ಲೇ instant​ ಉತ್ತರ ಕೊಡುವುದು ಅಂತ. ಶತಾವಧಾನ ಅಂದರೆ 100 ಜನರಿಗೆ ಉತ್ತರಿಸುವುದು. ಪೃಚ್ಛಕರು ಸಿಕ್ಕರೆ ಸಹಸ್ರಾವಧಾನವನ್ನೂ ಮಾಡುವುದಾಗಿ ಹೇಳಿದ್ದಾರೆ ಮಹನೀಯರು. ಇದು ಅವರ ಪ್ರತಿಭಾ ಶಕ್ತಿಗೆ ಹಿಡಿದ ಕನ್ನಡಿ ಎನ್ನಬಹುದು. ಇದು ಹೇಳಿದಷ್ಟು ಸುಲಭವಲ್ಲ. ಆ ಕಲೆಯನ್ನ ನೋಡಿದವರಿಗಷ್ಟೇ ಗೊತ್ತು ಅವರ ಸಾಮರ್ಥ್ಯ. ಇಂಥ ಕ್ಲಿಷ್ಟ ಕಲೆಯಲ್ಲೇ ಅವರು ಡಿ.ಲಿಟ್​ ಪದವಿ ಪಡೆದಿದ್ದಾರೆ. 

ಅಂದಹಾಗೆ ಅವಧಾನಿಗಳ ಪ್ರತಿಭಾ ಸಾಮರ್ಥ್ಯ ಇಷ್ಟಕ್ಕೇ ಸೀಮಿತವಲ್ಲ ಕಾವ್ಯ, ಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ, ಧರ್ಮಶಾಸ್ತ್ರ, ಇತಿಹಾಸ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಸಂಗೀತ, ನೃತ್ಯ, ಚಿತ್ರಕಲೆ, ಯಕ್ಷಗಾನ ಹೀಗೆ ಎಷ್ಟೋ ವಿಭಾಗಗಳಲ್ಲಿ ಅವರು ವಿಸ್ತಾರವಾದ  ಅಧ್ಯಯನ ಮಾಡಿದ್ದಾರೆ..! ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದಿಲ್ಲಬಿಡಿ. ಇವೆಲ್ಲವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿ ಏನು ಕೇಳಿದರೂ ಉತ್ತರಿಸಬಲ್ಲ ಋಷಿ ಸದೃಷ ವ್ಯಕ್ತಿ ಅವರು. ಹಾಗಾಗಿಯೇ ಅವರನ್ನು ವಿದ್ವದ್ವಲಯದ ವಿಸ್ಮಯ ಅಂತ ಕರೀತಾರೆ. ಪ್ರತಿಯೊಬ್ಬರೂ ವಿಸ್ಮಯಗೊಳ್ಳುವಂಥ ನೆನಪಿನ ಶಕ್ತಿ ಇವರದ್ದು. ಇದೆಲ್ಲದರ ಫಲವೇ ಅವಧಾನಿತ್ವ ಸಿದ್ಧಿ.

ಸಾರವತ್ತಾದ ವಿಷಯವಿಲ್ಲದೆ, ಉಪನ್ಯಾಸ ವಸ್ತುವಿನ ಸಂಪೂರ್ಣ ಅಧ್ಯಯನವಿಲ್ಲದೆ ಉಪನ್ಯಾಸಕ್ಕೆ ಹೊರಡುವುದೇ ಇಲ್ಲ ಇವರು. 

ಗ್ರೀಕ್​ ದೇಶದ ಪ್ರಸಿದ್ಧ ಕವಿ ಹೋಮರ್​ ಎಂಬಾತ `ಈಲಿಯೆಡ್​ ಹಾಗೂ `ಒಡಿಸ್ಸಿ ಎಂಬ ಮಹಾನ್​ ಕಾವ್ಯಗಳನ್ನ ಬರೆದಿದ್ದಾನೆ. ಆ ಕಾವ್ಯಗಳು ಜಗತ್ಪ್ರಸಿದ್ಧ. ಆ ಕಾವ್ಯಗಳನ್ನ ಬೇರೆ ಭಾಷೆಯಲ್ಲಿ ಓದಿದರೆ ಅದರ ಸಾರ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಗ್ರೀಕ್​ ಭಾಷೆಯನ್ನು ಕಲಿತು ಆ ಕಾವ್ಯಗಳನ್ನ ಓದಿ, ಆ ಕವಿ - ಕಾವ್ಯಗಳನ್ನು ಗೌರವಿಸುವಷ್ಟು ಅಪ್ಪಟ ಅಧ್ಯಯನಶೀಲರು  ಆರ್​. ಗಣೇಶರು. ಈ ವಿಚಾರವನ್ನ ಅವರೇ ತಮ್ಮ ಉಪನ್ಯಾಸದಲ್ಲಿ ಹೇಳಿದ್ದಾರೆ. ಒಬ್ಬ ಉಪನ್ಯಾಸಕನಿಗೆ ಇಷ್ಟು ತಯಾರಿ ಅತ್ಯಗತ್ಯ. ಹೀಗೆ ಅಧ್ಯಯನ ಮಾಡಿದವನು ಮಾತ್ರವೇ ಶುದ್ಧ ಉಪನ್ಯಾಸ ಮಾಡಲಿಕ್ಕೆ ಸಾಧ್ಯ. ಇಂಥ ಯಾವ ಪರಿಶ್ರಮವನ್ನೂ ಮೈಮೇಲೆ ಎಳೆದುಕೊಳ್ಳದೆ, ಇವರ ಉಪನ್ಯಾಸವನ್ನೇ ಕೇಳಿ ಅದರ ಸಾರವನ್ನು ಬಳಸುವವರು ಎಷ್ಟು ಮಂದಿಯೋ..! 

'ನನ್ನನ್ನೂ ಸೇರಿಸಿಕೊಂಡು ಎಷ್ಟೋ ಜನ ಇವರ ಉಪನ್ಯಾಸಗಳನ್ನು ಕೇಳಿ ಅದರ ಸಾರವನ್ನ ತಮ್ಮದು ಅಂತ ಭಾಷಣ ಬೀಗಿದಿದ್ದಾರೆ, ಲೇಖನ ರಚಿಸಿದ್ದಾರೆ. ಒಮ್ಮೆ ನಾನು ಯುಗಾದಿ ವಿಷಯದ ಕುರಿತಾಗಿ ಒಂದು ಪತ್ರಿಕೆಯಲ್ಲಿ ದೀರ್ಘ ಲೇಖನವನ್ನು ಬರೆದಿದ್ದೆ. ಅದರಲ್ಲಿದ್ದ 90% ಭಾಗ ಇದೇ ಪುರುಷ ಸರಸ್ವತಿ ಗಣೇಶರ ಉಪನ್ಯಾಸದ ವಸ್ತು. ಅಂದು ಆ ಲೇಖನ ಬರೆಯುವಾಗ ಅವರನ್ನು ಸ್ಮರಿಸುವ ನೆನಪು ಮೃತವಾಗಿತ್ತು. ಹಾಗಾಗಿ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತಾ ಕ್ಷಮೆಯನ್ನೂ ಯಾಚಿಸುತ್ತಿದ್ದೇನೆ.'  

ಇಂಥ ಸೋಜಿಗದ ಪ್ರತಿಭೆಯನ್ನ ದೇಶ ಗುರ್ತಿಸಬೇಕು. ದೇಶಕ್ಕೆ ಬೆಳಕಾಗುವ ಆಕಾಶ ದೀಪ ಅವರು. ಸಾಧ್ಯವಾದರೆ ಒಮ್ಮೆ ನಿಮ್ಮ ಮಕ್ಕಳನ್ನು ಇವರ ಉಪನ್ಯಾಸಗಳಿಗೆ ಕರೆದುಕೊಂಡು ಹೋಗಿ. ಯಾರು ಬಲ್ಲರು ಆ ಪುರುಷ ಸರಸ್ವತಿಯ ಅನುಗ್ರಹ ದೃಷಿ ಬಿದ್ದರೂ ಸಾಕು ಮಕ್ಕಳಿಗೆ ಅದೇ ವರವಾಗಬಹುದು. ಇಂಥ ಮಹನೀಯರನ್ನು ಸರ್ಕಾರ ಅಭಿನಂದಿಸಬೇಕು, ಗೌರವಿಸಬೇಕು, ಮರ್ಯಾದಿಸಬೇಕು, ಅದಾಗುತ್ತಿಲ್ಲ. ಇನ್ನು ನಮ್ಮ ಶಾಲಾ-ಕಾಲೇಜುಗಳಲ್ಲಿ ಇಂಥವರ ಉಪನ್ಯಾಸವನ್ನು ಏರ್ಪಡಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಇವರ ಉಪನ್ಯಾಸ ಕೇಳಬೇಕು. 

ಅಧ್ಯಯನ ಮಾಡುವುದು ಹೇಗೆ? ಅಧ್ಯಯನ ಮಾಡಿದ್ದನ್ನ ನೆನಪಿಟ್ಟುಕೊಳ್ಳುವುದು ಹೇಗೆ? ಅದನ್ನ ಅನ್ವಯ ಮಾಡುವುದು ಹೇಗೆ? ಇಂಥ ಸೂಕ್ಷ್ಮಗಳ ಬಗ್ಗೆ ಮಹನೀಯರಿಂದ ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. 

ಗೋಖಲೆ ಸಾರ್ವಜನಿಕ ಸಂಸ್ಥೆ ಆಗಾಗ ಅವಧಾನಿಗಳ ಕಾರ್ಯಕ್ರಮಗಳನ್ನ ನಡೆಸುತ್ತಲೇ ಇರುತ್ತದೆ. ಸಾಧ್ಯವಾದರೆ ಒಮ್ಮೆ ನೀವೂ ಹೋಗಿಬನ್ನಿ, ನಿಮ್ಮ ಮಕ್ಕಳ ಸಮೇತ.
 
ಅಂದಹಾಗೆ ಇಂದು ಆ ಮಹನೀಯರು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಹೃದಯ ಪೂರ್ವಕ ಅಭಿಮಾನದ ಶುಭಾಶಯಗಳನ್ನ ತಿಳಿಸೋಣ. ಭಗವಂತ ಅವರಿಗೆ ದೀರ್ಘ ಆಯುಷ್ಯ ಆರೋಗ್ಯಗಳನ್ನು ಕರುಣಿಸಲಿ. ಮಹಾಮಹಿಮರೆನಿಸಿದ ಪಿ. ವಿ. ಕಾಣೆ ಹಾಗೂ ಶ್ರೀ ವೆಂಕಟರಾಮಯ್ಯನವರನ್ನೂ ಮೀರಿದ ಶಕ್ತಿ, ಪ್ರತಿಭೆ ಇವರಲ್ಲಿರುವುದರಿಂದ ನಮ್ಮಂಥ ಪಾಮರರ ಜೀವನೋದ್ಧಾರಕ್ಕೆ ಅಗತ್ಯವೆನಿಸಿದ, ಸರ್ವಕಾಲಕ್ಕೂ ಸ್ಮರಣೀಯವೆನಿಸುವ ಕೃತಿ ರಚನೆಯಾಗಲಿ ಎಂದು ಪ್ರಾರ್ಥಿಸೋಣ.

ಶ್ರೀಕಂಠ ಶಾಸ್ತ್ರಿ. ಬಿ ಎಂ
ಸುವರ್ಣ ನ್ಯೂಸ್

click me!