ದಲಿತರು ಕೂಡ ಹಿಂದೂಗಳು, ಅವರನ್ನು ಹೊರಗಿಟ್ಟು ಈ ಸಮಾಜ ಪೂರ್ಣಗೊಳ್ಳುವುದು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದ ಶ್ರೀಗಳಿಗೆ, ದಲಿತರ ಬಗ್ಗೆ ಬಾಲ್ಯದಿಂದಲೇ ಕಾಳಜಿ ಇತ್ತು. ದಲಿತರ ಮೇಲೆ ದೌರ್ಜನ್ಯ ನಡೆದಾಗ ಒಂದು ದಿನ ಉಪವಾಸ ಮಾಡಿ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದರು.
ಹಿಂದುತ್ವದ ಅಗ್ರ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಯತಿವರ್ಯರು, ಅದೇ ಹಿಂದೂ ಧರ್ಮದಲ್ಲಿನ ಹೀನ ಜಾತೀಯತೆ ಮತ್ತು ಅಸ್ಪೃಶ್ಯತೆ ಆಚರಣೆಗಳ ಬಗ್ಗೆ ತೀವ್ರ ಆಕ್ರೋಶವನ್ನೂ ಹೊಂದಿದ್ದರು. ಕರ್ನಾಟಕದಲ್ಲಿ ದಲಿತ ದೌರ್ಜನ್ಯ, ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣಗಳು ಕೇಳಿ ಬಂದಾಗಲೆಲ್ಲ ಪಶ್ಚಾತ್ತಾಪಾರ್ಥವಾಗಿ ಒಂದು ದಿನ ಉಪವಾಸ ಆಚರಿಸುತ್ತಿದ್ದರು.
ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ, ಸ್ವರ್ಗ ಪ್ರಾಪ್ತಿ ಕುರಿತು ಕೊನೆ ಉಪನ್ಯಾಸ!
30 ವರ್ಷಗಳಲ್ಲಿ 19 ಬಾರಿ ಪಶ್ಚಾತ್ತಾಪದ ಉಪವಾಸ ಆಚರಿಸಿದ್ದರು. 2009 ರಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಾಯಕನೂರು ಗ್ರಾಮದ ದಲಿತರು ದೌರ್ಜನ್ಯಕ್ಕೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಾಗ ಒಂದು ದಿನ ಪಶ್ಚಾತ್ತಾಪಾರ್ಥ ಉಪವಾಸ ಆಚರಣೆ ಮಾಡಿದ್ದರು. ಈ ಪ್ರಕರಣ ಸಂಭವಿಸಿದಾಗ ಶ್ರೀಗಳು ಹೈದರಾಬಾದ್‌ನಲ್ಲಿ ಚಾತುರ್ಮಾಸ್ಯ ಆಚರಿಸುತ್ತಿದ್ದರು. ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿದ್ದ ಈ ಸುದ್ದಿಯನ್ನು ಹೇಗೋ ತಿಳಿದು ನನಗೆ ಕರೆ ಮಾಡಿ ಘಟನೆಯ ಬಗ್ಗೆ ಕೇಳಿದರು.
ಕೊಪ್ಪಳ: ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದ ಪೇಜಾವರ ಶ್ರೀ
ಪೂಜ್ಯರೇ, ಈ ಗ್ರಾಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳಿದ್ದು, ಅವುಗಳಲ್ಲಿ 32 ದಲಿತ ಕುಟುಂಬಗಳಿವೆ. ಈ ದಲಿತರು ಮೇಲ್ವರ್ಗದವರ ಮನೆಯ ಚಾಕರಿ ಮಾಡುತ್ತಾರೆ. ಈಗ ತಮ್ಮ ಮಕ್ಕಳ ಮಾತು ಕೇಳಿ ಬಚ್ಚಲು ಗುಂಡಿಯ ಕೊಳಚೆ ಹೊತ್ತು ಸಾಗಿಸಲು ನಿರಾಕರಿಸಿದ್ದಾರೆ. ಅದನ್ನು ಮಹಾ ಅಪರಾಧ ಎಂದು ಭಾವಿಸಿದ ಊರಿನ ಕೆಲವು ಪುಢಾರಿಗಳು ಈ ದಲಿತರ ಗುಡಿಸಲು ಹೊಕ್ಕು ಮನಬಂದಂತೆ ಥಳಿಸಿ ಊರಲ್ಲಿ ಡಂಗೂರ ಸಾರಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಆ ಎಲ್ಲ ದಲಿತರು ಊರು ತೊರೆದು ನವಲಗುಂದ ಪಟ್ಟಣಕ್ಕೆ ವಲಸೆ ಹೊರಟಿದ್ದಾರೆ ಎಂದು ಘಟನೆಯನ್ನು ಸವಿಸ್ತಾರವಾಗಿ ವಿವರಿಸಿದೆ.
'ಪೇಜಾವರ ಶ್ರೀಗಳಿಂದ ರಾಮಮಂದಿರ ಶಂಕು ಸ್ಥಾಪನೆ ಮಾಡಿಸುವ ಇಚ್ಛೆ ಇತ್ತು'
ಇದನ್ನು ಕೇಳಿದ ಶ್ರೀಗಳು ಕೃಷ್ಣ ಕೃಷ್ಣ ಏನಿದು ಅನ್ಯಾಯ... ಎಂದು ವ್ಯಾಕುಲಗೊಂಡು, ಸಮಸ್ತ ಹಿಂದೂಗಳ ಪರವಾಗಿ ಪಶ್ಚಾತ್ತಾಪಾರ್ಥ ೧ ದಿನ ಉಪವಾಸ ಮಾಡುತ್ತೇನೆ. ದಲಿತರೂ ನಮ್ಮ ಅಣ್ಣ- ತಮ್ಮಂದಿರೇ. ಅವರನ್ನು ಹೀಗೆ ನೋಯಿ ಸಿದರೆ ನಮ್ಮನ್ನು ಕೃಷ್ಣ ಕ್ಷಮಿಸುವುದಿಲ್ಲ. ಸದ್ಯಕ್ಕೆ ನಾನು ಹೈದ್ರಾಬಾದಿನಲ್ಲಿ ಚಾತುರ್ಮಾಸ್ಯ ಆಚರಿಸುತ್ತಿದ್ದೇನೆ. ವಾರದ ನಂತರ ಅಲ್ಲಿಗೆ ಬಂದು ನೊಂದವರಿಗೆ ಸಾಂತ್ವನ ಹೇಳುತ್ತೇನೆ ಎಂದರು. ನಂತರ, ಭರವಸೆ ನೀಡಿದಂತೆ ಒಂದು ವಾರದ ಬಳಿಕ ಹೈದ್ರಾಬಾದಿನಿಂದ ನಾಯಕನೂರಿಗೆ ತೆರಳಿ, ಪ್ರತಿಯೊಬ್ಬ ದಲಿತನ ಗುಡಿಸಲಿಗೂ ಹೋಗಿ ಸಾಂತ್ವನ ಹೇಳಿದರು.
-ಮಲ್ಲಿಕಾರ್ಜುನ ಸಿದ್ದಣ್ಣವರ