ಆನ್‌ಲೈನ್ ಕನ್ನಡ- ಆಫ್‌ಲೈನ್ ಕನ್ನಡ: ಒಂದು ವಿಶ್ಲೇಷಣೆ

By Web Desk  |  First Published Nov 1, 2018, 1:46 PM IST

ಕನ್ನಡ ಸಿನಿಮಾದ ಮಾರುಕಟ್ಟೆ ವಿಸ್ತಾರವಾಗಿದೆ. ತಂತ್ರಜ್ಞಾನವನ್ನೂ ಕನ್ನಡ ಒಳಗೊಂಡಿದೆ. ಕನ್ನಡಕ್ಕಾಗಿಯೇ ತಂತ್ರಾಂಶಗಳು ರೂಪುಗೊಂಡಿವೆ. ಕನ್ನಡದ ಬಳಕೆಯೂ ವ್ಯಾಪಕ ಆಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಕಾಶಿಸುತ್ತಿರುವ ಕನ್ನಡ ತನ್ನ ಬಳಕೆ, ಉಪಯುಕ್ತತೆ ಮತ್ತು ಕನ್ನಡತನವನ್ನು ವಿಸ್ತರಿಸಿಕೊಂಡಿದೆ ಮತ್ತು ಎಲ್ಲರನ್ನೂ ಒಳಗೊಳ್ಳುತ್ತಿದೆ. ಕನ್ನಡವೇ ಸತ್ಯ ಅನ್ನುವುದು ಅಂದಿನ ಮಾತು. ಕನ್ನಡವೇ ನಿತ್ಯ ಎನ್ವುವುದು ಎಂದೆಂದಿಗೂ ಒಪ್ಪುವ ಮಾತು.


-ಶ್ರೀಕಾಂತ್ ಎನ್. ಗೌಡಸಂದ್ರ

ಕರುನಾಡು ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದು ಅರವತ್ತೆರಡು ವರ್ಷದ ಬಳಿಕ ಆನ್ ಲೈನ್ನಲ್ಲಿ ಕನ್ನಡ ಬಳಕೆ ಹಾಗೂ ಕನ್ನಡ ಭಾಷಾಪ್ರೇಮ, ಕನ್ನಡಪರ ಹೋರಾಟಗಳು ತೀವ್ರಗೊಳ್ಳುತ್ತಿವೆ. ಜತೆಗೆ ಆನ್ಲೈನ್ ಅಭಿಯಾನಗಳು ಪರಿಣಾಮಕಾರಿ ಫಲಿತಾಂಶವನ್ನೂ ನೀಡುತ್ತಿವೆ. ಆದರೆ, ಕನ್ನಡವನ್ನು ಅನ್ನ ನೀಡುವ ಭಾಷೆಯಾಗಿ ಬೆಳೆಸದ ಸರ್ಕಾರ ಹಾಗೂ ಜನಪ್ರತಿನಿಧಿಗಳ ಅಸಡ್ಡೆಯಿಂದ ಆಫ್ ಲೈನ್ನಲ್ಲಿ ಕನ್ನಡ ಸೊರಗುತ್ತಲೇ ಇದೆ.

Tap to resize

Latest Videos

undefined

'ಆನ್ಲೈನ್' ಮೂಲಕ ಹುಟ್ಟಿಕೊಂಡ ಕನ್ನಡ ಪರ ಅಭಿಯಾನಗಳು ವಿಶ್ವದ ಗಮನ ಸೆಳೆಯುವಂತಾಗಿವೆ. ನಮ್ಮ ಮೆಟ್ರೋದ ವಿರುದ್ಧ ಕನ್ನಡ ಹೇರಿಕೆ ವಿರೋಧಿಸಿ ಬನವಾಸಿ ಕನ್ನಡ ಬಳಗ ರೂಪಿಸಿದ ‘ನಮ್ಮ ಮೆಟ್ರೋ ಹಿಂದಿ ಹೇರಿಕೆ ಬೇಡ’ ಎಂಬ ಆನ್ಲೈನ್ ಅಭಿಯಾನಕ್ಕೆ 150 ದಶಲಕ್ಷ ಹಿಟ್ಸ್ ದೊರಕಿವೆ. ಇದರ ಪರಿಣಾಮವಾಗಿ ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯನ್ನೇ ಹಿಂಪಡೆಯುವಂತಾಯಿತು. ಜತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ಥಳೀಯ ಭಾಷೆಗಳನ್ನು ಗೌರವಿಸದೆ ಹಿಂದಿಯನ್ನು ಮಾತ್ರವೇ ಪ್ರೋತ್ಸಾಹಿಸಿದರೆ ‘ನಮ್ಮಮೆಟ್ರೋ’ ದಂತಹ ಅಭಿಯಾನಗಳು ಹೆಚ್ಚಾಗುತ್ತವೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಅಭಿಯಾನ ಯಶಸ್ವಿಯಾಯಿತು.

ಇದರ ಜತೆಗೆ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದ ‘ಐಬಿಪಿಎಸ್’ ವಿರುದ್ದ ‘ಐಬಿಪಿಎಸ್-ಮೋಸ’, ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಹೋರಾಟ ಸೇರಿದಂತೆ ಹಲವು ಆನ್ಲೈನ್ ಅಭಿಯಾನಗಳು ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದವು. ಅಭಿಯಾನಗಳ ಹೊರತಾಗಿಯೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕೆಲ ಹೋರಾಟಗಳು ಸೂಕ್ತ ಪ್ರತಿಫಲ ಪಡೆಯಲಿಲ್ಲ. ಆದರೂ ವಿಶೇಷ ಛಾಪು ಒತ್ತಲು ಯಶಸ್ವಿಯಾದವು ಎನ್ನುತ್ತಾರೆ ಬನವಾಸಿ ಕನ್ನಡ ಬಳಗದ ಅರುಣ್ ಜಾವಗಲ್.

ಕನ್ನಡಪರ ಆನ್ಲೈನ್ ಅಲೆ:

ಅಂತರ್ಜಾಲದ ಕೋಟೆ ಎಂದೇ ಕರೆಯಲ್ಪಡುವ ಗೂಗಲ್ನಲ್ಲಿ ಕಳೆದ ವರ್ಷದಿಂದ ಕನ್ನಡದ ಪರ ಬೃಹತ್ ಅಲೆಯೇ ಸೃಷ್ಟಿಯಾಗಿದೆ. ಬಹುತೇಕ ಸಾ-ವೇರ್ ಕಂಪೆನಿಗಳು ತಮ್ಮ ತಂತ್ರಾಂಶಗಳನ್ನು ಲೋಕಲೈಸೇಷನ್ಗೆ ಒಗ್ಗಿಕೊಳ್ಳುತ್ತಿರುವ ಪರಿಣಾಮ ಅಂತರ್ಜಾಲದಲ್ಲಿ ಕನ್ನಡ ರಾರಾಜಿಸುವಂತಾಗಿದೆ. ಎಷ್ಟರಮಟ್ಟಿಗೆ ಎಂದರೆ, ಕಳೆದ ಹತ್ತು ವರ್ಷಗಳಿಂದ ಆಪಲ್ ಐಫೋನ್ ಬಳಕೆದಾರರ ತೀವ್ರ ಒತ್ತಾಯ ಹಾಗೂ ಹೋರಾಟದ ಹೊರತಾಗಿಯೂ ಕನ್ನಡ ಕೀಲಿ ಒದಗಿಸಲು ನಿರಾಕರಿಸಿದ್ದ ಐಫೋನ್ ಕೂಡ ಕನ್ನಡಕ್ಕಾಗಿ ವಿಶೇಷ ಕೀಲಿ ಹೊರತಂದಿದೆ.

ಜತೆಗೆ ವಿವಿಧ ಆಪ್ಗಳು, ಗ್ರಾಹಕ ಸೇವಾ ಕಂಪೆನಿಗಳು ಕನ್ನಡಕ್ಕೆ ಅಗ್ರಸ್ಥಾನ ನೀಡುವ ಮೂಲಕ ಕನ್ನಡಿಗರನ್ನು ಸೆಳೆಯಲು ಹಾಗೂ ಕನ್ನಡಿಗರನ್ನು ಸಂತುಷ್ಠಿಗೊಳಿಸಲು ಮುಂದಾಗಿವೆ. ಈ ಮೂಲಕ ದೇಶದ ಅತಿದೊಡ್ಡ ಮಾರುಕಟ್ಟೆಯಾಗಿರುವ ಕನ್ನಡಿಗರನ್ನು ಕನ್ನಡದ ಮೂಲಕವೇ ಮುಟ್ಟಲು ಮುಂದಾಗಿವೆ. ತಮ್ಮ ಲಾಭ ಸಾಧನೆಗಾದರೂ ಆನ್ ಲೈನ್ನಲ್ಲಿ ಕನ್ನಡ ರಾರಾಜಿಸುವಂತೆ ಮಾಡುತ್ತಿವೆ.

ಉದಾಹರಣೆಗೆ, ಕಳೆದ ಎರಡು ವರ್ಷಗಳಿಂದ ಈಚೆಗೆ ‘ಗೂಗಲ್ ಮ್ಯಾಪ್ಸ್’ ಸಂಪೂರ್ಣ ಕನ್ನಡಮಯವಾಗಿದೆ. ರಾಜ್ಯದಲ್ಲಿರುವ ಪ್ರತಿಯೊಂದು ಸ್ಥಳದ ಹೆಸರೂ ಕನ್ನಡದಲ್ಲೇ ಒದಗಿಸುತ್ತದೆ. ಜತೆಗೆ ಗೂಗಲ್ ಮ್ಯಾಪ್ಸ್ನಲ್ಲಿ ಮಾರ್ಗದರ್ಶನ ನೀಡಲು ಸ್ಪಷ್ಟ ಕನ್ನಡದ ಧ್ವನಿ ಸಲಹೆಯನ್ನು ಬಳಸಲಾಗುತ್ತಿದೆ. ಜತೆಗೆ ಗೂಗಲ್ ಮ್ಯಾಪ್ನಂತೇ ಕಾರ್ಯ ನಿರ್ವಹಿಸುವ ‘ವೇಜ್’ ಆಪ್ ಕೂಡ ಕನ್ನಡಕ್ಕೆ ಅಗ್ರಸ್ಥಾನ ನೀಡಿದೆ. ಜತೆಗೆ ಗೂಗಲ್ ಹ್ಯಾಂಡ್ ರೈಟಿಂಗ್ ಸಾಫ್ಟ್‌ವೇರ್  ಅಭಿವೃದ್ಧಿಪಡಿಸಿದ್ದು, ಕನ್ನಡದಲ್ಲೇ ಬರೆಯಲು ಅವಕಾಶ ಮಾಡಿಕೊಟ್ಟಿದೆ.

ಕನ್ನಡ ಯೂನಿಕೋಡ್ ತಂತ್ರಾಂಶ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಆಮೆಗತಿಯಲ್ಲಿ ಸಾಗುತ್ತಿದ್ದರೂ ಸಾಫ್ಟ್‌ವೇರ್ ಕಂಪೆನಿಗಳು ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕನ್ನಡ ಬಳಕೆಗೆ ಯಾವುದೇ ಸಮಸ್ಯೆ ಇಲ್ಲದಂತಹ ವಾತಾವರಣ ಸೃಷ್ಟಿಸಿವೆ. ಎಷ್ಟರ ಮಟ್ಟಿಗೆ ಎಂದರೆ ಕನ್ನಡ ಟೈಪಿಸಲು ಬಾರದ ಮೊಬೈಲ್ ಗ್ರಾಹಕರು ಕೇವಲ ಕನ್ನಡದಲ್ಲಿ ಮಾತನಾಡಿದರೆ ಸಾಕು ತಾನೇ ಕನ್ನಡ ಟೈಪ್ ಮಾಡುವಷ್ಟರ ಮಟ್ಟಿಗೆ ವಾಟ್ಸ್ಯಾಪ್ ಇನ್ನಿತರ ಆಪ್ಗಳು ಅಪ್ಡೇಟ್ ಆಗಿವೆ.

ಕೇಂದ್ರ ಸರ್ಕಾರದಿಂದಲೂ ಬೆಂಬಲ:

ಕೇಂದ್ರ ಸರ್ಕಾರವೂ ಕನ್ನಡ ಬರವಣಿಗೆ ಹಾಗೂ ಬಳಕೆಗೆ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರವು ಕನ್ನಡಕ್ಕಾಗಿ ಹೊರತಂದಿರುವ ‘ಒಸಿಆರ್’- (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನೈಸೇಷನ್ ಸಾ-ವೇರ್) ನಿಂದ ಕನ್ನಡ ಬರವಣಿಗೆಯನ್ನು ಓದುವಂತಹ ಹಾಗೂ ಬರವಣಿಗೆಯನ್ನು ಟೆಕ್ಸ್ಟ್  ಫಾರ್ಮ್ಯಾಟ್ಗೆ ಬದಲಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಫೋಟೋಎಲೆಕ್ಟ್ರಾನಿಕ್ ಡಿವೈಸ್ ಹಾಗೂ ಕಂಪ್ಯೂಟರ್ ತಂತ್ರಾಂಶದ ಮೂಲಕ ಮುದ್ರಣಗೊಂಡ ಅಥವಾ ಬರೆದಿರುವ ಬರಹಗಳನ್ನು ಅರ್ಥ ಮಾಡಿಕೊಂಡು ವರ್ಡ್ ಫಾರ್ಮ್ಯಾಟ್ಗೆ ಬದಲಿಸುತ್ತದೆ. ಇದರಿಂದ ಯಾವುದೇ ಅರ್ಜಿ ನಮೂನೆ, ಪತ್ರವನ್ನು ನೋಡಿಕೊಂಡು ಮತ್ತೊಮ್ಮೆ ಕಂಪ್ಯೂಟರ್ನಲ್ಲಿ ಟೈಪ್ ಮಾಡುವ ಅಗತ್ಯವೇ ಇಲ್ಲದಂತಾಗಿದೆ.

ಕನ್ನಡ ಪ್ರೇಮ ಮೆರೆದ ಎಂಎನ್ಸಿಗಳು: ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿರುವ ಕರ್ನಾಟಕದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕನ್ನಡದ ಪ್ರಾಮುಖ್ಯತೆ ಅರಿತ ಬಹುತೇಕ ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡದ ಹಿಂದೆ ಬಿದ್ದಿವೆ. ಕೋಕಕೊಲಾ ಕಂಪೆನಿ ಬಿಸ್ಲೆರಿಯನ್ನು ಸಂಪೂರ್ಣ ಕನ್ನಡ ಅಕ್ಷರದಲ್ಲೇ ಮುದ್ರಿಸಿ ಹೊರತಂದಿದೆ. ಜತೆಗೆ ಸ್ಪ್ರೈಟ್ನಲ್ಲೂ  ಕನ್ನಡ ಅಕ್ಷರಗಳನ್ನು ಮುದ್ರಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ಬಹುತೇಕ ಎಂಎನ್ಸಿ ಕಂಪೆನಿಗಳು ಕನ್ನಡಿಗರಿಗೆ ವಿಶೇಷ ಒತ್ತು ನೀಡಿ ಹಲವು ಕಾರ್ಯಕ್ರಮಗಳು ಹೊರತಂದಿವೆ.

ಸ್ಟಾರ್ ಸ್ಪೋರ್ಟ್ಸ್, ನಿಕ್ನಂತಹ ಇಂಗ್ಲಿಷ್ ವಾಹಿನಿಗಳು ಕನ್ನಡದಲ್ಲಿ ಸೇವೆ ಒದಗಿಸುವ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಂಡಿವೆ. ಕನ್ನಡಕ್ಕಾಗಿಯೇ ಎಂಎನ್ಸಿಗಳು ನೂರಾರು ಕೋಟಿ ರು. ಬಂಡವಾಳ ಹೂಡುತ್ತಿವೆ. ಆದರೆ, ಇಂಗ್ಲಿಷ್ ಭ್ರಮೆಯಲ್ಲಿರುವ ದೇಶದ ಕಂಪೆನಿಗಳು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡದೆ ಮತ್ತಷ್ಟು ಸೊರಗುತ್ತಿವೆ.

ಇದಕ್ಕೆ ಉದಾಹರಣೆಯಾಗಿ, ಕರ್ನಾಟಕದಲ್ಲಿ ಶೇ.60 ರಷ್ಟು ಗಾತ್ರದ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಹೊರತಂದಿದೆ. ಇದಕ್ಕೆ ಬೆಲೆ ಕೊಟ್ಟು ಬಹುತೇಕ ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡ ಬಳಕೆ ಮಾಡಿವೆ. ಆದರೆ ಆದಿತ್ಯಾ ಬಿರ್ಲಾ ಕಂಪೆನಿ ಕನ್ನಡದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದೆ. ಈ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಆಫ್‌ಲೈನ್ನಲ್ಲಿ ಸೊರಗುತ್ತಿದೆ ಕನ್ನಡ: 
ಮತ್ತೊಂದೆಡೆ ಇಂಗ್ಲೀಷ್ ಭಾಷಾ ವ್ಯಾಮೋಹ ಹಾಗೂ ಕನ್ನಡ ಭಾಷೆ ಬಗೆಗಿನ ನಿರ್ಲಕ್ಷ್ಯದಿಂದ ಆಫ್‌ಲೈನ್ನಲ್ಲಿ ಕನ್ನಡ ಭಾಷೆ ಸೊರಗುವಂತಾಗಿದೆ. ಇಂಗ್ಲೀಷ್ ಮಾಧ್ಯಮದಲ್ಲೂ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು ಎಂಬ ಮಾತೃ ಭಾಷಾ ನಿಯಮ ಜಾರಿಗೆ ಬರಲಿಲ್ಲ. ಪೋಷಕರ ಇಂಗ್ಲೀಷ್ ವ್ಯಾಮೋಹದಿಂದ ಮಕ್ಕಳು ಕನ್ನಡ ಕಲಿಕೆಯಿಂದ ದೂರ ಉಳಿಯುವಂತಾಗಿದೆ. ಜತೆಗೆ ಕನ್ನಡ ಅನ್ನ ನೀಡುವ ಭಾಷೆಯಲ್ಲ ಎಂಬ ಭ್ರಮೆಯಲ್ಲಿ ಕನ್ನಡದ ಬದಲಿಗೆ ಇಂಗ್ಲೀಷನ್ನು ತಬ್ಬಿಕೊಳ್ಳುವರರ ಸಂಖ್ಯೆ ಹೆಚ್ಚಾಗುತ್ತಿದೆ.

ಜತೆಗೆ ಬೆಂಗಳೂರಿನಲ್ಲಿ ತಮಿಳು, ಮಲೆಯಾಳಿ, ತೆಲುಗು ಹಾವಳಿಯಿಂದಾಗಿ ಕನ್ನಡ ಭಾಷಿಕರು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗುತ್ತಿದೆ. ಜತೆಗೆ ಐಬಿಪಿಎಸ್, ಕನ್ನಡ ನಾಮಫಲಕ ಕಡ್ಡಾಯ ನಿಯಮ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದು, ಕಾಸರಗೋಡಿನಲ್ಲಿ ಕನ್ನಡ ಕಲಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಆನ್ಲೈನ್ನಲ್ಲಿ ಹೋರಾಟಗಳು ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಯಶಸ್ವಿಯಾಗಿಲ್ಲ. ಇದರಿಂದ ರಾಜ್ಯದ ಲಕ್ಷಾಂತರ ಬ್ಯಾಂಕಿಂಗ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಉದ್ಯೋಗವಕಾಶಗಳನ್ನು ಕಳೆದುವಂತಾಯಿತು.
ಆಡಳಿತದಲ್ಲಿ ಕನ್ನಡ ಅಸ್ತಿತ್ವಕ್ಕೆ ಬರಲಿಲ್ಲ:

ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆ. ರಾಜ್ಯ ಸರ್ಕಾರದ ಪ್ರತಿಯೊಂದು ಪತ್ರ ವ್ಯವಹಾರ, ಆದೇಶ, ಕಡತ ಹಾಗೂ ರಾಜ್ಯಪತ್ರಗಳು ಕನ್ನಡದಲ್ಲಿ ಕಡ್ಡಾಯವಾಗಿ ಇರಬೇಕು. ಜತೆಗೆ ಜಾಲತಾಣದಲ್ಲೂ ಕನ್ನಡ ಇರಬೇಕು ಎಂದು 240ಕ್ಕೂ ಹೆಚ್ಚು ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಈವರೆಗೂ ಸರ್ಕಾರದ ಎಲ್ಲಾ ಇಲಾಖೆಗಳ ವೆಬ್ ಸೈಟ್ಗಳಲ್ಲಿ ಸಂಪೂರ್ಣ ಕನ್ನಡ ಬಳಕೆಯಾಗಿಲ್ಲ. ವಿವಿಧ ಇಲಾಖೆಗಳ 32ಕ್ಕೂ ಹೆಚ್ಚು ವೆಬ್ಸೈಟ್ಗಳ ಪೈಕಿ 19 ವೆಬ್ಸೈಟ್ಗಳಲ್ಲಿ ಇಂದಿಗೂ ಕನ್ನಡ ಅಸ್ತಿತ್ವದಲ್ಲಿಲ್ಲ. ಉಳಿದ ವೆಬ್ಸೈಟ್ ಗಳಲ್ಲೂ ಕನ್ನಡ ಕಾಟಾಚಾರಕ್ಕೆ ಬಳಕೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ನಮಗೂ ಈ ಬಗ್ಗೆ ದೂರು ಬಂದಿದ್ದು ಪರಿಶೀಲಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಶಿಫಾರಸು  ಮಾಡುತ್ತೇವೆ ಎಂದಿದ್ದಾರೆ.

ಕನ್ನಡದ ಬಗ್ಗೆ ಜನಪ್ರತಿನಿಧಿಗಳ ನಿರಾಸಕ್ತಿ: ಕಅಪ್ರಾ

ರಾಜ್ಯ ಸರ್ಕಾರವು ಕನ್ನಡ ಅನುಷ್ಠಾನಕ್ಕಾಗಿ ಹಲವು ಕಾರ್ಯಕ್ರಮ ಕೈಗೊಂಡಿದ್ದು ಅಂತಿಮ ರೂಪ ಪಡೆದಿಲ್ಲ. ಕೇರಳದ ಕಾಸರಗೋಡು ಸರ್ಕಾರಿ ಶಾಲೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಮಲೆಯಾಳಿ ಶಿಕ್ಷಕರನ್ನು ನೇಮಿಸಿದ್ದನ್ನು ವಿರೋಧಿಸಿ ಪತ್ರ ಬರೆಯಲಾಗಿತ್ತು. ಆದರೆ, ಈವರೆಗೂ ಈ ಬಗ್ಗೆ ಯಾವುದೇ ವರದಿ ಬಂದಿಲ್ಲ. ಆಡಳಿತದಲ್ಲಿ ಕನ್ನಡ ಅನುಷ್ಠಾನ ತಂತ್ರಾಂಶ ಬಂದ ಮೇಲೆ ಹಿನ್ನಡೆ ಆಗಿದೆ. ಖಾಸಗಿ ಶಾಲೆಗಳಲ್ಲೂ ಕಡ್ಡಾಯವಾಗಿ ಕನ್ನಡವನ್ನು ಕಲಿಸಬೇಕು ಎಂಬ ಒತ್ತಾಯಕ್ಕೆ ಮನ್ನಣೆ ದೊರೆತಿಲ್ಲ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದಲ್ಲಿ ತೀರ್ಮಾನ ಆಗಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಒತ್ತಾಯಿಸುವಂತೆ ರಾಜ್ಯದ ಎಲ್ಲಾ ಸಂಸದರಿಗೆ ನಾಲ್ಕು ಬಾರಿ ಬರೆದಿದ್ದೇವೆ. ಆದರೆ, ಮುದ್ದ ಹನುಮೇಗೌಡ ಹಾಗೂ ಸದಾನಂದಗೌಡ ಹೊರತುಪಡಿಸಿ ಉಳಿದವರು ಯಾರೂ ಈವರೆಗೂ ಉತ್ತರ ನೀಡಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!