-ದೇಶಾದ್ರಿ ಹೊಸ್ಮನೆ
ಕನ್ನಡದಲ್ಲಿ ಭಾವಗೀತೆಗಳ ಕಾಲ ಮುಗಿಯಿತು ಅಂತ ಯಾರೇ ಮಾತಾಡಿಕೊಂಡರೂ, ಚಿಕ್ಕ ಚಿಕ್ಕ ಮಕ್ಕಳೂ ಕೂಡ ಭಾವಗೀತೆಗಳನ್ನು ಕಲಿಯುತ್ತಿದ್ದಾರೆ ಅನ್ನುವುದಕ್ಕೆ ನಮ್ಮ ಮುಂದೆಯೇ ಸಾಕ್ಷಿಯಿದೆ. ಅದು ಸಾಧ್ಯವಾಗಿರುವುದು ಟೀವಿಗಳ ರಿಯಾಲಿಟಿ ಷೋಗಳಿಂದ. ಕನ್ನಡ ಕೋಗಿಲೆ, ಸರೆಗಮಪ, ಎದೆತುಂಬಿ ಹಾಡಿದೆನು- ಮುಂತಾದ ಗಾನಪ್ರಧಾನ ರಿಯಾಲಿಟಿ ಷೋಗಳು ಭಾವಗೀತೆಯ ಜೀವ ಉಳಿಸಿವೆ. ಹಾಗೆಯೇ, ಯಾವುದೇ ಮಕ್ಕಳನ್ನು ಒಂದು ಕನ್ನಡ ಗೀತೆ ಹಾಡು ಎಂದರೆ ಅವು ಭಾವಗೀತೆಗಳನ್ನೇ ಹಾಡುತ್ತವೆ.
undefined
ಹೀಗಾಗಿ ಭಾವಗೀತೆಗಳು ನಮ್ಮ ಪ್ರಾರ್ಥನಾ ಮಂತ್ರಗಳಂತೆ ತಲೆಮಾರಿನಿಂದ ತಲೆಮಾರಿಗೆ ಹಬ್ಬುತ್ತಿವೆ. ತಂತ್ರಜ್ಞಾನ ಬದಲಾದಂತೆ ಚಿತ್ರಗೀತೆಗಳ ಬೇಡಿಕೆ ಕಡಿಮೆ ಆಗಿದೆ ಎನ್ನುವ ಮಾತಿದ್ದರೂ, ನಾಡು, ನುಡಿ ಬಿಂಬಿಸುವ ಚಿತ್ರಗೀತೆಗಳಿಗೆ ರಾಜ್ಯೋತ್ಸವದ ವೇಳೆ ಸಾಕಷ್ಟು ಬೇಡಿಕೆ ಇರುತ್ತದೆ ಎನ್ನುವುದನ್ನು ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯ ಮಾಲೀಕ ಲಹರಿ ವೇಲು ಒಪ್ಪಿಕೊಳ್ಳುತ್ತಾರೆ. ‘ನಾಡು, ನುಡಿ ಬಣ್ಣಿಸುವ ಕನ್ನಡ ಗೀತೆಗಳಿಗೆ ಸಾಮಾನ್ಯವಾಗಿ ಬೇಡಿಕೆ ಬರುವುದು ರಾಜ್ಯೋತ್ಸವ ಸಂದರ್ಭ. ಜನಪ್ರಿಯ ಚಿತ್ರಗೀತೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ದೂರದ ಬೀದರ್, ಬೆಳಗಾವಿಯಿಂದ ಹಿಡಿದು ಬೆಂಗಳೂರಿನಂತಹ ನಗರಗಳಲ್ಲೂ ರಾಜ್ಯೋತ್ಸವಕ್ಕೆ ಕನ್ನಡ ಗೀತೆಗಳದ್ದೇ ಆಗ ಅಬ್ಬರ. ಆದರೆ ಅದು ವರ್ಷವಿಡೀ ಇರುವುದಿಲ್ಲ ಎನ್ನುವುದೇ ಬೇಸರ’ ಎನ್ನುತ್ತಾರೆ ಲಹರಿ ಸಂಸ್ಥೆಯ ಮಾಲೀಕ ವೇಲು.
ಕನ್ನಡ ನಾಡು, ನುಡಿಯನ್ನು ವರ್ಣಿಸಿ, ಬಣ್ಣಿಸಿದ ಸಾಹಿತ್ಯದ ಮೂಲಕ ಚಿತ್ರಗೀತೆ ಮತ್ತು ಭಾವಗೀತೆಗಳ ಲೋಕ, ಈಗಲೂ ರಾಜ್ಯೋತ್ಸವಕ್ಕೆ ಬಹು ಬೇಡಿಕೆ ಉಳಿಸಿಕೊಂಡ ಹಾಗೆಯೇ ಜನರ ನಡುವೆ ಅವು ನಾಡು, ನುಡಿ ಅಭಿಮಾನವನ್ನು ಪ್ರೇರೇಪಿಸಲು ಸಹಾಯಕವಾಗಿವೆ ಎನ್ನುವುದು ಸತ್ಯ. ಕವಿಗಳು ಕನ್ನಡ ನಾಡನ್ನು ವರ್ಣಿಸಿ, ಬಣ್ಣಿಸಿದ ಸಾಲುಗಳೂ ಭಾವಗೀತೆಗಳಾಗಿ ಜನಪ್ರಿಯತೆ ಸಾಧಿಸಿಕೊಂಡಿವೆ. ಕುವೆಂಪು, ಬೇಂದ್ರೆ ಪದ್ಯಗಳಂತೂ ಹೆಚ್ಚು ಜನಪ್ರಿಯತೆ ಪಡೆಯುವುದಕ್ಕೆ ಭಾವಗೀತೆ ಲೋಕವು ದೊಡ್ಡ ಕೊಡುಗೆ ನೀಡಿದೆ.
‘ಕನ್ನಡಪರ ಗೀತೆಗಳಾಗಿ ಜನಪ್ರಿಯತೆ ಪಡೆದ ಹಳೇ ಹಾಡುಗಳ ಜತೆಗೆ ಈಗ ಹೊಸದಾಗಿ ಸಾಕಷ್ಟು ಹಾಡುಗಳು ಭಾವಗೀತೆಯ ಲೋಕದಲ್ಲಿ ಬರುತ್ತಿವೆ. ಆದರೆ ಸಿನಿಮಾ ಹಾಡುಗಳಷ್ಟು ಜನಪ್ರಿಯತೆ ಪಡೆಯದಿದ್ದರೂ,
ನಿಧಾನವಾಗಿ ಅವು ಕೂಡ ಜನಪ್ರಿಯತೆ ಪಡೆಯುತ್ತಿವೆ. ಆಡಿಯೋ ಮಾರುಕಟ್ಟೆ ಅಷ್ಟಾಗಿ ಇಲ್ಲ. ಕೇಳುಗರಂತೂ ಇದ್ದೇ ಇದ್ದಾರೆ. ರಾಜ್ಯೋತ್ಸವದ ಸಂದರ್ಭದಲ್ಲಿ ಅವುಗಳಿಗೂ ಹೆಚ್ಚು ಬೇಡಿಕೆ ಬರುತ್ತದೆ. ಇದು ಭಾಷೆಯ ಜನಪ್ರಿಯತೆಗಾದರೂ ಸಹಾಯಕವಾಗುತ್ತದೆ ಎನ್ನುವ ಖುಷಿಯಂತೂ ಇದ್ದೇ ಇದೆ’ ಎನ್ನುತ್ತಾರೆ ಗಾಯಕ ಉಪಾಸನ ಮೋಹನ್.
ಜನಪದ ಗೀತೆ, ದಾಸರ ಪದ, ಭಜನೆಯ ಹಾಡುಗಳ ಕಣಜಕ್ಕೆ ಕಳೆದ ಮೂವತ್ತು ವರ್ಷಗಳಿಂದೀಚೆಗೆ ಸೇರ್ಪಡೆ ಆಗಿರುವುದು ಭಾವಗೀತೆ. ಇದು ಕನ್ನಡದ ಜಾಯಮಾನದಲ್ಲಿ ಇರಲೇ ಇಲ್ಲ. ಅದು ಇವತ್ತು ಕನ್ನಡ ಜನಪದದಷ್ಟೇ ಸಶಕ್ತವಾಗಿ ಬೆಳೆದು ಬೆಳಗುತ್ತಿದೆ. ಹೀಗೆ ಭಾಷೆಯಲ್ಲಿ ಹುಟ್ಟಿಕೊಳ್ಳುವ ಹೊಸದೊಂದು ಪ್ರಕಾರ, ಆ ಭಾಷೆಯನ್ನು ಹಲವು ದಶಕಗಳ ಕಾಲ ಜೀವಂತವಾಗಿ ಇಟ್ಟಿರುತ್ತದೆ. ಬೆಳಗುತ್ತಿರುತ್ತದೆ. ಅದಕ್ಕೆ ಭಾವಗೀತೆಯೇ ಸಾಕ್ಷಿ.