
ರಾಜೇಶ್ ಕಾಲ್ರಾ, ಹಿರಿಯ ಪತ್ರಕರ್ತರು
5 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಯಿತಾದರೂ ದೇಶ ಮಾತ್ರವಲ್ಲ, ಇಡೀ ವಿಶ್ವದ ಕಣ್ಣು ನೆಟ್ಟಿದ್ದುದು ಪಶ್ಚಿಮ ಬಂಗಾಳದ ಮೇಲೆ. ಕೆಲವರು ವಿಶ್ವಾಸದಿಂದಿದ್ದರೆ, ಇನ್ನೂ ಕೆಲವರು ಚಿಂತಿತರಾಗಿದ್ದರು. ಆದರೆ ಎಲ್ಲರೂ ನೋಡುತ್ತಿದ್ದುದಂತೂ ಹೌದು.
ಬಿಜೆಪಿ ಗೆಲ್ಲುತ್ತದೆ ಎಂಬ ಅಂದಾಜಿತ್ತಾದರೂ ಈ ಮಟ್ಟದಲ್ಲಿ ಗೆಲುವು ದಕ್ಕುತ್ತದೆ ಎಂಬ ಊಹೆ ಇರಲಿಲ್ಲ. ಇದೇ ಈಗ ಎಲ್ಲರ ಗಮನವನ್ನು ಸೆಳೆಯುತ್ತಿರುವುದು. ಹಾಗಾದರೆ ರಾಜ್ಯದಲ್ಲಾದ ಬದಲಾವಣೆಯೇನು? ಬಂಗಾಳದಲ್ಲಿ ಆಗಿದ್ದೇನು? ಇದನ್ನು ಅರ್ಥ ಮಾಡಿಕೊಳ್ಳಲು 2021ಕ್ಕೆ ಹೋಗಬೇಕು. ಆ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆ ಪ್ರಕ್ಷುಬ್ಧ ಅಷ್ಟೇ ಅಲ್ಲ, ರಕ್ತಸಿಕ್ತವಾಗಿತ್ತು. ಚುನಾವಣೆಯ ಸಮಯದಲ್ಲಿ ಸುಮಾರು 300 ಹಿಂಸಾಚಾರ, 58 ಸಾವುಗಳು ವರದಿಯಾದವು. ಆ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ಚುನಾವಣಾ ಹಿಂಸಾಚಾರದ ಸಾವುಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಬಂಗಾಳದಲ್ಲೇ ಆಗಿದ್ದವು.
ಅದಾದ ಬಳಿಕ ಶುರುವಾದದ್ದೇ ಚುನಾವಣೋತ್ತರ ಹಿಂದೆ. ಮನೆಗಳ ಮೇಲೆ ದಾಳಿಗಳಾಗಿ, ಜನ ದಿಕ್ಕಾಪಾಲಾಗಿ ಓಡಬೇಕಾಯಿತು. ಆ ನೆನಪು ಎಂದಿಗೂ ಮಾಸುವುದಿಲ್ಲ. ಜತೆಗೆ ಮತದಾರರ ನಡವಳಿಕೆಯಲ್ಲೂ ಅದು ಪ್ರತಿಫಲಿಸದೇ ಇರುವುದಿಲ್ಲ. ಏಕೆಂದರೆ, ವರ್ಷಗಳಿಂದ ಬಂಗಾಳದಲ್ಲೊಂದು ಕ್ರೂರ ನಿಯಮವಿತ್ತು. ಅದು, ‘ಮತ ಚಲಾಯಿಸಿ, ಆದರೆ ಅವು ನಮಗಷ್ಟೇ ಬೀಳಬೇಕು. ಒಂದು ವೇಳೆ ಬೇರೆಯವರಿಗೆ ವೋಟ್ ಹಾಕಿದರೆ, ನೀವು ಯಾರಿಗೆ ಹಾಕಿದಿರಿ ಎಂಬುದು ನಮಗೆ ತಿಳಿಯುತ್ತದೆ. ನಮಗೆ ಮತ ಬೀಳದಿದ್ದರೆ ನಿಮ್ಮನ್ನು ಹುಡುಕಿ ತೆಗೆಯುತ್ತೇವೆ’ ಎಂಬುದಾಗಿತ್ತು. ಇಂತಹ ಸ್ಥಿತಿಯಲ್ಲಿ ನಿಮ್ಮನ್ನು ನೀವೊಮ್ಮೆ ಮತದಾರರ ಜಾಗದಲ್ಲಿ ಊಹಿಸಿಕೊಳ್ಳಿ. ಆಡಳಿತ ಪಕ್ಷ ನಿಮಗಿಷ್ಟವಿಲ್ಲದಿದ್ದರೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ನೀವು ಮುಂದಾಗುತ್ತೀರಾ? ಅಥವಾ ಸುರಕ್ಷಿತ ಆಯ್ಕೆಯನ್ನು ಆಯ್ದುಕೊಳ್ಳುತ್ತೀರಾ? ಪ್ರಜಾಪ್ರಭುತ್ವ ನಾಶವಾಗುವುದು ಕಾನೂನು ಬದಲಾವಣೆಯಿಂದ ಅಲ್ಲ. ಬದಲಿಗೆ ಹೀಗೆ ಜನರ ವರ್ತನೆಯಲ್ಲಿ ಬದಲಾವಣೆ ತರುವ ಮೂಲಕ. ಇಷ್ಟೇ ಅಲ್ಲ, ಸ್ಥಳೀಯ ಮಟ್ಟದಲ್ಲೂ ಬೆದರಿಸುವಿಕೆ ಮುಂದುವರೆದಿತ್ತು. ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಸಾಲದ್ದಕ್ಕೆ ಮತಗಟ್ಟೆಗಳೊಳಗೂ ನುಗ್ಗಿ, ಎದುರಾಳಿಗಳ ಚಿಹ್ನೆಯೇ ಸ್ಪಷ್ಟವಾಗಿ ಕಾಣದಂತೆ ಮಾಡಲಾಗುತ್ತಿತ್ತು. ಗುರುತೇ ಕಾಣದಿದ್ದರೆ ಮತ ಚಲಾಯಿಸುವುದಾದರೂ ಹೇಗೆ?! ವ್ಯವಸ್ಥೆಯಲ್ಲೂ ಲೋಪ: ಇದರ ಜತೆಗೆ ವ್ಯವಸ್ಥೆಯಲ್ಲೇ ಅತ್ಯಂತ ಆಳವಾದ ಸಮಸ್ಯೆ ಇದೆ. ಅದೇನೆಂದರೆ, ‘ರಾಜ್ಯದಲ್ಲಿ ಶೇ.70ರಷ್ಟು ದೂರುಗಳು ದಾಖಲಾಗುವುದೇ ಇಲ್ಲ. ಒಂದು ಠಾಣೆಯಲ್ಲಿ ಹೆಚ್ಚೆಂದರೆ 15 ಕಾನ್ಸ್‌ಟೇಬಲ್‌ಗಳು ಇರುತ್ತಾರೆ. ಇಷ್ಟು ಮಂದಿ ಒಬ್ಬ ಐಪಿಎಸ್ ಅಧಿಕಾರಿಯ ಮನೆಯಲ್ಲಿರುವ ಪೇದೆಗಳ ಸಂಖ್ಯೆಗೆ ಸಮ. ಇವರ ಜತೆ ರಾಜಕೀಯ ನಂಟಿನ, ಸರ್ಕಾರದಿಂದ ಸಂಬಳ ಪಡೆವ 300-400 ಜನ ನಾಗರಿಕ ಸ್ವಯಂಸೇವಕರು ಇರುತ್ತಾರೆ’ ಎಂದು ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ನನಗೆ ಹೇಳಿದ್ದರು.
ಒಮ್ಮೆ ಲೆಕ್ಕ ಹಾಕಿ ನೋಡಿ. ಒಂದು ಕಡೆ 15 ಕಾನ್ಸ್‌ಟೇಬಲ್‌ಗಳ ಜತೆ ಒಬ್ಬ ಎಸ್‌ಎಚ್‌ಒ ಇದ್ದರೆ, ಇನ್ನೊಂದು ಕಡೆ ಒಂದು ರಾಜಕೀಯ ಪಕ್ಷದ ಕಡೆ ಒಲವು ಹೊಂದಿರುವ ನೂರಾರು ಜನರು ಠಾಣೆಯ ಉಸ್ತುವಾರಿಗೆ ನೆರವಾಗುತ್ತಿರುತ್ತಾರೆ. ಇಲ್ಲಿ ನಿಜವಾಗಿಯೂ ವ್ಯವಸ್ಥೆಯನ್ನು ನಡೆಸುತ್ತಿರುವವರು ಯಾರು? ಇಂತಹ ಸ್ಥಿತಿಯಲ್ಲಿ, ತಟಸ್ಥತೆ ಎಂಬುದು ಕಷ್ಟವಷ್ಟೇ ಅಲ್ಲ, ನಿಷ್ಪರಿಣಾಮಕಾರಿಯೂ ಆಗಿರುತ್ತದೆ.
ಇತ್ತೀಚೆಗೆ ವಿಶೇಷ ಮತಪಟ್ಟಿ ಪರಿಷ್ಕರಣೆಯು(ಎಸ್‌ಐಆರ್) ಪ್ರಮುಖ ವಿಷಯವಾಯಿತು. ಅದು ನಕಲಿ ಮತದಾರರನ್ನು ತೆಗೆದುಹಾಕುವ ಸ್ವಚ್ಛತಾ ಅಭಿಯಾನ ಅಥವಾ ತಾಂತ್ರಿಕ ಪ್ರಕ್ರಿಯೆಯಾಗಿತ್ತು. ಆದರೆ ಅತ್ತ ವಿಪಕ್ಷದ ಹತಾಶೆಗೆ ಇದು ಕಾರಣವಾಯಿತು. ಕೃತಕವಾಗಿ ಹೆಚ್ಚಿಸಲಾದ ಅಥವಾ ತಿರುಚಲಾದ ಮತದಾರರ ಪಟ್ಟಿಯೇ ನಿಮ್ಮ ರಾಜಕೀಯ ಬಲವಾಗಿರುವಾಗ, ಇಂತಹ ಪ್ರಕ್ರಿಯೆಗಳು ಅಸ್ತಿತ್ವಕ್ಕೇ ನೇರ ಸವಾಲಾಗಿ ಪರಿಣಮಿಸುತ್ತವೆ. ಎಸ್‌ಐಆರ್‌ನಿಂದ 2 ಕೆಲಸಗಳಾದವು. ಒಂದು, ಉದ್ದೇಶದಂತೆ ವ್ಯವಸ್ಥೆಯನ್ನು ಬಿಗಿಗೊಳಿಸಲಾಯಿತು. ಎರಡು, ಇನ್ನುಮುಂದೆ ತನ್ನ ಹಳೆಯ ತಂತ್ರಗಳು ನಡೆಯುವುದಿಲ್ಲ ಎಂಬ ಭಯವನ್ನು ಹುಟ್ಟುಹಾಕಿತು. ನಕಲಿ ಮತದಾರರನ್ನು ಹುಡುಕಿ ತೆಗೆದುಹಾಕಬಹುದು ಎಂಬ ಭರವಸೆಯು ಮತದಾರರ ವರ್ತನೆಯಲ್ಲೂ ಬದಲಾವಣೆಯನ್ನು ತಂದಿತು. ಚುನಾವಣೆ ನಿರ್ವಹಣೆ ಬಿಗಿ ಚುನಾವಣಾ ಆಯೋಗ, ಪ್ರಮುಖವಾಗಿ ಮುಖ್ಯ ಆಯುಕ್ತರ ನೇತೃತ್ವದಡಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಇದು ಹೊಸದೇನಲ್ಲ. ಟಿ.ಎನ್. ಶೇಷನ್ ಸಿಇಸಿ ಆಗಿದ್ದಾಗ ರಾಜಕೀಯ ಒತ್ತಡಗಳಿಗೆ ಮಣಿಯದೆ, ಮತದಾರರ ಹಿತವನ್ನು ಆದ್ಯತೆಯಾಗಿಟ್ಟುಕೊಂಡಿದ್ದರು. ಅವರು ಅಪಾರ ಪ್ರಮಾಣದ ಭದ್ರತಾ ಸಿಬ್ಬಂದಿ ನಿಯೋಜನೆಯ ಪರವಾಗಿದ್ದರು. ಇದೇ ಈಗ ಮತ್ತೊಮ್ಮೆ ಪುನರಾವರ್ತನೆಯಾಗಿದೆ.
ಚುನಾವಣೆಯ ಬಳಿಕವೂ ಕೇಂದ್ರೀಯ ಪಡೆಗಳನ್ನು ಉಳಿಸಿಕೊಳ್ಳಲಾಯಿತು. ಚುನಾವಣೋತ್ತರ ಹಿಂಸಾಚಾರದ ಇತಿಹಾಸವಿರುವ ರಾಜ್ಯದಲ್ಲಿ ಇದು ಕಾರ್ಯವಿಧಾನವಲ್ಲ, ಭದ್ರತೆಗೆ ಕೈಗೊಂಡ ಕ್ರಮವಾಗಿತ್ತು. ಪರಿಣಾಮ ಏನಾಯ್ತು? ಈ ಬಾರಿ ಮತದಾನದ ವೇಳೆ ಬೆದರಿಸುವಿಕೆ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿತ್ತು. ಮತದಾನವು ಗೌಪ್ಯ ಹಾಗೂ ಸುರಕ್ಷಿತವಾಗಿ ನಡೆಯಿತು. ಸ್ವಲ್ಪ ಮಟ್ಟಿಗೇ ಆದರೂ ಭಯ ತಗ್ಗಿದಾಗ ಮತದಾನದ ರೀತಿಯಲ್ಲಿ ಭಾರೀ ಬದಲಾವಣೆಯಾಯಿತು. 2021ರಲ್ಲಿ 58 ಇದ್ದ ಸಾವುಗಳ ಸಂಖ್ಯೆಯೀಗ ಶೂನ್ಯಕ್ಕಿಳಿದಿದೆ. ಬಂಗಾಳದಲ್ಲಿದು ಹಂತ ಹಂತವಾಗಿ ಆದ ಬದಲಾವಣೆಯಲ್ಲ. ಬದಲಿಗೆ, ಒಮ್ಮೆಲೆ ಆದ ಬೃಹತ್ ಬದಲಾವಣೆ.
ಮತದಾನದ ವೇಳೆ ಹಾಗೂ ಅದರ ಬಳಿಕ 2 ಲಕ್ಷಕ್ಕೂ ಹೆಚ್ಚು ಕೇಂದ್ರೀಯ ಪಡೆ ಸಿಬ್ಬಂದಿ ನಿಯೋಜನೆಯಾಗಿತ್ತು. ಕಾರಣ, ಬಂಗಾಳದಲ್ಲಿ ಭಯವು ಮತದಾನದ ದಿನವಷ್ಟೇ ಅಲ್ಲ, ಅದರ ಬಳಿಕ ಆರಂಭವಾಗುವುದು. ಮಮತಾ ಅಂದಾಜಿಸಿದ್ದರು ರಾಜ್ಯದಲ್ಲಾಗಿರುವ ಬದಲಾವಣೆಯನ್ನು ಮಮತಾ ಬ್ಯಾನರ್ಜಿ ಅಂದಾಜಿಸಿದಂತಿತ್ತು. ‘ಟಿಎಂಸಿ ಗೆದ್ದರೆ ಮತ್ತೆ ಸಿಗೋಣ’ ಎಂದವರು ಹೇಳಿದ್ದು, ಭರವಸೆಗಿಂತ ಹೆಚ್ಚಾಗಿ ಫಲಿತಾಂಶವು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಎಂದು ಒಪ್ಪಿಕೊಳ್ಳುವಂತಿತ್ತು. ನಿಜವಾಗಿಯೂ ಬದಲಾವಣೆ ಆಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ.
ಇದೆಲ್ಲಾ ಒಂದು ಕಡೆಯಾದರೆ, ಬಿಜೆಪಿಯ ತಳಮಟ್ಟದ ಕೆಲಸ ಫಲ ಕೊಟ್ಟಿದೆ. ಅವರು ಬರೀ ಪ್ರಚಾರ ಮಾಡದೆ, ಬೂತ್ ಮಟ್ಟದಲ್ಲಿ ಯೋಜನೆ ರೂಪಿಸಿದರು. ನಾಯಕರು ತಿಂಗಳುಗಳ ಕಾಲ ರಾಜ್ಯದಲ್ಲಿ ಸುತ್ತಾಡಿ ‘ನೀವು ಯಾರಿಗೆ ಮತ ಹಾಕುತ್ತೀರಾ ಎಂಬುದನ್ನು ಯಾರೂ ತಿಳಿಯಲಾಗದು’ ಎಂಬ ಸಂದೇಶವನ್ನು ಮತ್ತೆ ಮತ್ತೆ ಸಾರಿದರು. ಭಯವೇ ತುಂಬಿದ್ದ ವಾತಾವರಣದಲ್ಲಿ, ಮತ್ತೆ ಭರವಸೆಯನ್ನು ಮೂಡಿಸುವುದು ಅರ್ಧ ಜಯ. 2021ರ ಭಯ ಪೂರ್ಣವಾಗಿ ಮಾಸದ ಕಾರಣ, ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಲು ಮುಂದಾದವರ ಸಂಖ್ಯೆ ಅತಿ ವಿರಳವಾಗಿತ್ತು. ಆ ಮನಃಸ್ಥಿತಿಯನ್ನೀಗ ಮುರಿಯಲಾಗಿದೆ. ಮತಗಟ್ಟೆಯಲ್ಲಿ ಬಟನ್ ಒತ್ತಿದ ಕೂಡಲೇ ಪ್ರಜಾಪ್ರಭುತ್ವ ಮುಗಿದುಹೋಗುವುದಿಲ್ಲ. ಆ ಪ್ರಕ್ರಿಯೆಯಾದ ಬಳಿಕವೂ ಪ್ರಜಾಪ್ರಭುತ್ವ ನಮ್ಮನ್ನು ರಕ್ಷಿಸಬೇಕು. ಬಿಜೆಪಿ ಮುಂದಿರುವ ಸವಾಲು: ರಾಜ್ಯದಲ್ಲಿನ ಗೆಲುವಿಂದ ಬಿಜೆಪಿ ಉತ್ಸಾಹದಲ್ಲಿರಬಹುದು. ಆದರೆ ಬಹುದೊಡ್ಡ ಸವಾಲು ಕಾಯುತ್ತಿದೆ. ಒಂದೊಮ್ಮೆ ಬಂಗಾಳವು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಅತ್ಯುತ್ತಮವಾಗಿತ್ತು. ಇಂತಹ ಬಂಗಾಳವನ್ನು ಮತ್ತೊಮ್ಮೆ ಸ್ಥಾಪಿಸುವ ಜವಾಬ್ದಾರಿ ಬಿಜೆಪಿಯ ಹೆಗಲ ಮೇಲಿದೆ.
ಅಗತ್ಯವಿರುವುದು ಬಂಗಾಳದ ವಶವಲ್ಲ, ಅದರ ಮರುನಿರ್ಮಾಣ. ಇದಕ್ಕೆ ಸದ್ಯದ ಬದಲಾವಣೆಯ ಅಲೆಯೊಂದೇ ಸಾಲದು. ಇನ್ನಷ್ಟು ವರ್ಷಗಳ ಶ್ರಮದ ಅವಶ್ಯಕತೆಯಿದೆ.
ವರ್ಷಗಳಿಂದ ಬಂಗಾಳದಲ್ಲೊಂದು ಕ್ರೂರ ನಿಯಮವಿತ್ತು. ಅದು ‘ಮತ ಚಲಾಯಿಸಿ, ಆದರೆ ಅವು ನಮಗಷ್ಟೇ ಬೀಳಬೇಕು. ಒಂದು ವೇಳೆ ಬೇರೆಯವರಿಗೆ ವೋಟ್ ಹಾಕಿದರೆ, ನೀವು ಯಾರಿಗೆ ಹಾಕಿದಿರಿ ಎಂಬುದು ನಮಗೆ ತಿಳಿಯುತ್ತದೆ, ಹುಡುಕಿ ತೆಗೆಯುತ್ತೇವೆ’ ಎಂಬುದಾಗಿತ್ತು. ಇಂತಹ ಸ್ಥಿತಿಯಲ್ಲಿ ಆಡಳಿತ ಪಕ್ಷ ನಿಮಗಿಷ್ಟವಿಲ್ಲದಿದ್ದರೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ನೀವು ಮುಂದಾಗುತ್ತೀರಾ ಅಥವಾ ಸುರಕ್ಷಿತ ಆಯ್ಕೆಯನ್ನು ಆಯ್ದುಕೊಳ್ಳುತ್ತೀರಾ?