ಪೂತಾತ್ಮ-ಹೂತಾತ್ಮ ಹುತಾತ್ಮ- ಮಹಾತ್ಮ

By Web Desk  |  First Published Oct 2, 2018, 11:01 AM IST

ಒಬ್ಬ ಸಂತನಂತೆ ಬದುಕಿ, ಬಾಳಿದ ಮಹಾತ್ಮ ಗಾಂಧಿಯವರ ಜೀವನ ತತ್ವಗಳು ಪ್ರತಿಯೊಬ್ಬ ಶ್ರೀ ಸಾಮಾನ್ಯನೂ ಸಂತನಾಗಿ ಹೇಗೆ ಬದುಕಬಹುದು ಎಂಬುದನ್ನು ತೋರಿಸುವ ಚಿಂತನೆಗಳು. ಇಂಥ ಮಹಾತ್ಮನಿಗೆ ದ.ರಾ.ಬೇಂದ್ರೆ ನಮಿಸಿದ್ದು ಹೀಗೆ.


- ದ.ರಾ ಬೇಂದ್ರೆ

ಓ ಮಹಾತ್ಮ! ಶತಸಾಂವತ್ಸರಿಕಕ್ಕೆ
ಸತ್ಯ ವರದಿ ಮಾಡೋಣ
ನೀನು ಹೋದ ಮೇಲೆ, ನಾವು
ತಿನ್ನುವ ಭಿಕ್ಷೆ ಅನ್ನ, ಪರದೇಶಿ
ಬಳಸುವ ಕಳ್ಳ ಹೊನ್ನು, ಪರದೇಶಿ
ಸಿಂಗರಿಸುವ ಮಳ್ಳ ಹೆಣ್ಣು, ಪರದೇಶಿ
ಕಲಿಸುವ ಮಂತ್ರ, ಯಂತ್ರ, ತಂತ್ರ, ವಿದ್ಯೆ, ಪರದೇಶಿ.
2
ಅಹಿಂಸಾ ಯಜ್ಞದಂತೆ, ಪರ್ಜನ್ಯ ಮಳೆ
ಮಳೆಯಂತೆ ಬೆಳೆ
ಅನ್ನದಂತೆ ಪ್ರಜೆ
ಪ್ರಜೆಯಂತೆ ರಾಜ್ಯ.
3
ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕವಾಗಿದೆ
ನೀನು ಅಮರ ನಿಜ! ನಿನಗೆ ಗೊತ್ತಿಲ್ಲದ್ದೇನು?
ನಿನ್ನ ಕಣ್ಣಿಗೆ ಇದೆಲ್ಲಾ ಬಿದ್ದಿಲ್ಲಾ- ಎಂದಲ್ಲಾ
ಊದೋ ಶಂಖ ಊದಬೇಕು!
4
ಭಾರತದ ಅಪೂರ್ವ ಪುಣ್ಯಪುಂಜ
ಎಂದಿನಿಂದಲೋ ಹುದುಗಿತ್ತು, ಎಲ್ಲೋ ಹೂಳಿ ಹೋಗಿತ್ತು
ಮೋಹನದಾಸ ಹೂತನು, ಪರಮ ಪೂತನು.
‘ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ!’
ಬಿಡಿಬಿಡಿಸಿ ಹೇಳಿದ ಮಹಾತ್ಮ.
5
ಹಸಿವು, ಕಸಿವಿಸಿ, ಕಿಚ್ಚು
ಒಂದರಿಂದೊಂದು ದೂರ ಇಲ್ಲ
ಒಂದನ್ನು ಹೊತ್ತಿಸಿ, ಇನ್ನೊಂದನ್ನು ನಂದಿಸುವುದು
ತೂಕದ ಕೆಲಸ.
6
ಯಜ್ಞವೇ ಹಿಂಸೆ ಆಗುತ್ತದೆ
ಹಿಂಸೆ ನುಂಗಿದರೆ, ಅಹಿಂಸೆ ಹುಟ್ಟುವುದಿಲ್ಲ.
ಮಾನವರು ದಾಯಾದಿಗಳು, ದೈತ್ಯರು
ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ
ಅಹಿಂಸೆಯು ಸತ್ಯದ ತಪಸ್ಸು!
ಹಿಂಸೆ ಅನಿವಾರ‌್ಯ ತಾಪ
ಹೊತ್ತಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು
ಹೊತ್ತಿಸಿದವರನ್ನೂ ಮುಕ್ಕುವುದು.
ಯಾರು ಹುಟ್ಟಿಸಿದರೋ ಈ ಅವಳಿ-ಜವಳಿ ಮಾತು
ಹಿಂಸೆ? ಅಹಿಂಸೆ.
7
ಈ ಅದಲು-ಬದಲು- ತೊದಲು ಮಾತು
ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೆಲ್ಲಾ
ಶಾಂತಿಃ ಶಾಂತಿಃ! ಅಹಿಂಸೆಗೆ ಜಯ ಜಯಕಾರ!
ಕೂಗಿದ್ದೇ ಕೂಗಿದ್ದು,
ಕೊನೆಗೆ ಊರೆಲ್ಲಾ ಬೂದಿ.
ಹೇಳಿದ್ದು- ಅಹಿಂಸಾ- ಪುರಾಣ
ತಿಂದದ್ದು ಹಿಂಸೆಯ ಯಮ- ಬದನೆಕಾಯಿ!
ಅಹಿಂಸೆ ಹುಸಿ ಹೋಗುತ್ತದೆ
ಹಿಂಸೆ ಹೇಸಿಗೆಗೆ ಹೇಸುವುದಿಲ್ಲ
‘ದಯಾ ಧರ್ಮಕಾ ಮೂಲ ಹೈ’
ಎಂದು ಡಂಗುರ ಸಾರಿಸುವುದು
ಮತ್ತೆ ಏನೂ ಮಾಡದವರಂತೆ, ಗಪ್ಪು ಗಡದ್ದು
ಹೊಸ ಲೆಕ್ಕ, ಹೊಸ ಲೆಕ್ಚರು!
8
‘ಹಿಂಸೆ’ಮಹಾತ್ಮರ ಮುಂಚೆಯೇ ಹುಟ್ಟಿತ್ತು
ಅಹಿಂಸೆ ಅವರ ಮುಂಚೆಯೇ ಅರೆ ಸತ್ತಿತ್ತು
ಅವರು ಊದಿದ ಮಂತ್ರದಿಂದ
ಅಹಿಂಸೆಗೆ ಬಹಳಷ್ಟು ತ್ರಾಣ ಬರಲಿಲ್ಲ
ಹಿಂಸೆಗಂತೂ ಲಂಗೂ ಲಗಾಮು ಇರಲೇ ಇಲ್ಲ.
ದಯೆಯಿಲ್ಲದ ನಿರ್ದಯರೂ
ಇನ್ನೊಬ್ಬರಿಂದ ದಯೆ ಅಪೇಕ್ಷಿಸುತ್ತಾರೆ!
9
ಬುದ್ಧಿಗೇಡಿಗೂ ಆಗ್ರಹ ಗೊತ್ತಿದೆ
ಎಂಥ ಬುದ್ಧಿವಂತನಿಗೂ ಸತ್ಯ ಸರಿಯಾಗಿ ತಿಳಿದಿಲ್ಲ,
ಸತ್ಯಾಗ್ರಹದಲ್ಲಿ ಸತ್ಯ ಕಡಿಮೆಯಾಗಿ
ಆಗ್ರಹ ಹೆಚ್ಚಾಗುತ್ತಲೆ,
ಅಹಿಂಸೆಯ ಹಚ್ಚಿದ ಬಣ್ಣ ಉದರಿ,
ಹಿಂಸೆಯ ಉಗ್ರರೂಪ ಉರಿದೇಳುತ್ತದೆ.
10
ತಗಲು, ತಂಟೆ, ಉಪವಾಸ! ಮೋಸಂಬಿ ರಸ!
ಮೋಸ, ದೋಷ, ಉಪದೇಶ!
ದೇಶದ ತುಂಬೆಲ್ಲಾ ಸುದ್ದಿ
ಯಾವುದು ನಿಜವೋ?
ಯಾವುದು ಸುಳ್ಳೋ?
ವರ್ತಮಾನ ಪತ್ರಕ್ಕೆ ಹೊಟ್ಟೆತುಂಬ ಸುದ್ದಿ!
ನಮಗೆ ಬೇಕಾಗಿದ್ದುದು ಶುದ್ಧಿ.
ಓಹೋ ಹೂತಾತ್ಮ ! ಹಾಹಾ ಹುತಾತ್ಮ !
11
ಹೂವಿಗೆ ಬೇಗೆ ಹಚ್ಚಿದರು
ಅದರ ಸೌಂದರ‌್ಯ ಮೆಚ್ಚಿದರು
ಸಂಸ್ಕೃತಿಯ ಜಂಭ ಕೊಚ್ಚಿದರು
ಕೊನೆಗೆ ಸುಟ್ಟವನ ಬೂದಿ
ಹಣೆಗೆ ಹಚ್ಚಿಕೊಂಡರು.
ಮತ್ತೆ ಹಣೆಬರಹದ ಹಣೆ, ಬರಿದೋ ಬರಿದು.
ಮಾರ್ಟಿನ್ ಲೂಥರ್ ಕಿಂಗ್!
ಅದೇ ಹಾದಿ ಹಿಡಿಸಿದರು ಹಿಂಸಾ ಭಕ್ತರು,
ಅಹಿಂಸೆ ಎಂಬುದು ಗೋಡೆ
ಹಿಂಸೆ ಎಂಬುದು ಚಿತ್ರ
ಮತ್ತೆ ಮತ್ತೆ ಜನ ಓದುವುದು- ಅದೇ ವಿಚಿತ್ರ!!

click me!