122 ವರ್ಷ ಬದುಕಿ ವೇದ ಹೇಳಿದ್ದನ್ನು ಸತ್ಯವಾಗಿಸಿದ 'ಚತುರ್ವೇದ' ಪಾರಂಗತ

By Suvarna News  |  First Published Feb 29, 2020, 3:49 PM IST

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಶತಾಯುಷಿ ಸುಧಾಕರ್ ಚತುರ್ವೇದಿ ತಮ್ಮ 122ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದು ತುಂಬು ಜೀವನ ನಡೆಸಿದರು. ವೇದಗಳಲ್ಲಿ ಮನುಷ್ಯ 120 ವರ್ಷ ಬದುಕುತ್ತಾನೆಂದೇ ಹೇಳಿದ್ದು, ನಾಲ್ಕು ವೇದಗಳ ಜ್ಞಾನವಿದ್ದು ಚತುರ್ವೇದಿಯವರು ವೇದಗಳು ಹೇಳಿದಂತೆಯೇ ಬದುಕಿದರು....


- ರಜನಿ ರಾವ್, ಸುವರ್ಣ ನ್ಯೂಸ್

ಸುಮಾರು ಹತ್ತು ವರ್ಷಗಳ ಹಿಂದೆ ಹೀಗೇ ಶತಾಯುಷಿಗಳ ಬಗ್ಗೆ ಸರ್ಚ್​ ಮಾಡುವಾಗ ಕಣ್ಣಿಗೆ ಬಿದ್ದ ಹೆಸರು ಸುಧಾಕರ ಚತುರ್ವೇದಿಯವರದ್ದು. ಆಗ ಅವರಿಗೆ 112 ವರ್ಷ. ನನಗೆ ಅದನ್ನು ನಂಬಲಸಾಧ್ಯವಾಗಿತ್ತು. ಚತುರ್ವೇದಿ ಅನ್ನೋದು ಅವರ ಸರ್​ನೇಮ್​​ ಅಲ್ಲ.  ಹಿಮಾಲಯಕ್ಕೆ ಹೋಗಿ 25 ವರ್ಷ 4 ವೇದಗಳನ್ನು ಅಧ್ಯಯನ ಮಾಡಿ 'ಚತುರ್ವೇದಿ' ಎಂದು ಸರ್ಟಿಫಿಕೇಟ್​ ಗಳಿಸಿದವರೆಂದು ತಿಳಿದಾಗ ನೋಡಲೇಬೇಕು ಎಂದು ಅವರನ್ನು ನೋಡಲೇಬೇಕು ಎಂದು ನಿರ್ಧರಿಸಿದೆ. ನೂರಾ ಹನ್ನೆರಡು ವರ್ಷದವರು ಹೇಗಿರಬಹುದು? ಬಹುಶಃ ಅವರು ಹಾಸಿಗೆ ಹಿಡಿದಿರಬಹುದು ಎಂದು ಊಹಿಸುತ್ತಾ ಅವರನ್ನ ಹುಡುಕಿಕೊಂಡು ಜಯನಗರದ ಅವರ ಮನೆಗೆ ಹೋದರೆ ನನ್ನನ್ನು ಸ್ವಾಗತಿಸಲು ಮನೆ ಹೊರಗೇ ಬಂದು ನಿಂತಿದ್ದರು. ಮುಖದಲ್ಲಿ 100 ವರ್ಷದ ತೇಜಸ್ಸು, ಕೈಯಲ್ಲಿ ಕೋಲೂ ಹಿಡಿಯದ ಆರೋಗ್ಯ. 

Tap to resize

Latest Videos

undefined

"

ಅಂದು ನನ್ನೆದುರಿಗಿದ್ದಿದ್ದು, ಕೇವಲ ವ್ಯಕ್ತಿಯಲ್ಲ. ಸ್ವತಃ ಭಾರತದ ಚರಿತ್ರೆಯ ತುಣಕೇ ನನ್ನೆದರುಗಿದೆ ಅಂತ ಅರ್ಥವಾಗಲು ಬಹಳ ಹೊತ್ತು ಹಿಡಿಯಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಗಾಂಧೀಜಿಯವರಿಗೆ ಸಹಾಯಕರಂತೆ ಜತೆಗೆ ನಿಂತಿದ್ದು, ಮಹಾತ್ಮಾ ಗಾಂಧಿ ಜೊತೆ ಇದ್ದು ಎರಡೂ ಕೈಯಲ್ಲಿ ಪತ್ರ ಬರೆಯಲು ಕಲಿತಿದ್ದು, ಅವರಿಗೆ ಮಹಾತ್ಮ ಎಂಬ ಹೆಸರು ಸೂಚಿಸಿದ್ದು, ಜಲಿಯನ್ ವಾಲಾಭಾಗ್​​ನಲ್ಲಿ ಸತ್ತ ಸಾವಿರಾರು ಮಂದಿಯ ಅಂತ್ಯಕ್ರಿಯೆ ಮಾಡಿದವರು (ಬ್ರಿಟೀಷ್​​ ದಾಖಲೆ ಪ್ರಕಾರ ಸತ್ತವರು 667 ಜನ ಮಾತ್ರ). ಮದುವೆಯಾಗದೇ ಒಂಟಿಯಾಗಿದ್ದಾಗ, ಗಾಂಧೀಜಿಯವರ ಪ್ರೇರಣೆಯಂತೆ ಹರಿಜನ ಮಗುವೊಂದನ್ನು ದತ್ತು ಪಡೆದಿದ್ದರು. ಕೊನೆಯುಸಿರು ಇರೋ ತನಕ ತಮ್ಮ ಮೊಮ್ಮಕ್ಕಳ ಜೊತೆ ಜೀವನ ಕಳೆದರು. ಹೀಗೆ ಅವರ ಶತಕ ಜೀವನದ ಮೈಲುಗಲ್ಲುಗಳನ್ನು ಅಚ್ಚರಿಯಿಂದ ಕೇಳಿದ್ದೆ. ಮದುವೆ ಏಕೆ ಆಗಲಿಲ್ಲ ಎಂಬ ಪ್ರಶ್ನೆಗೆ ಸ್ವರಾಜ್ಯ ಸಿಗುವ ತನಕ ಮದುವೆಯಾಗಬಾರದು ಎಂದು ಶಪಥ ಮಾಡಿದ್ದೆ. ಸ್ವತಂತ್ರ್ಯ ಸಿಕ್ಕಾಗ ನನಗೆ 50 ವರ್ಷ ದಾಟಿತ್ತು. ಆಮೇಲೆ ಯಾರು ಹೆಣ್ಣು ಕೊಡುತ್ತಾರೆ ಎಂದು, ಮನಸಾರೇ ನಕ್ಕಿದ್ದರು. 

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೋಡಿದ್ದ ಚತುರ್ವೇದಿ ಇನ್ನಿಲ್ಲ

1897ರಲ್ಲಿ ಜನಿಸಿದ ಅವರು 3 ಶತಕಗಳ ಎಲ್ಲಾ ಬದಲಾವಣೆಗಳಿಗೂ ಸಾಕ್ಷಿಯಾದವರು. ವಯಸ್ಸು 112 ಆಗಿದ್ದರೂ ವೇದಗಳ ಅಧ್ಯಯನ, ಸಂಶೋಧನೆ, ವೇದ ಪಾಠ, ಪ್ರತಿನಿತ್ಯ ಮನೆಯಲ್ಲಿ ಅಗ್ನಿಹೋತ್ರ ತಪ್ಪಿಸಿರಲಿಲ್ಲ. ಪ್ರತಿ ಶನಿವಾರವೂ ಅವರ ಮನೆಯಲ್ಲಿ ಸತ್ಸಂಗ ಹೆಸರಿನಲ್ಲಿ ಪ್ರವಚನ ನಡೆಯುತ್ತಿತ್ತು. ಅವರ ಗುರುಗಳಾದ ಶ್ರದ್ಧಾನಂದರ ಆದೇಶದಂತೆ ವೇದಗಳ ಬಗ್ಗೆ ಪುಸ್ತಕ ಬರೆಯುವುದರಲ್ಲಿ ಉಳಿದ ಸಮಯ ಕಳೆಯುತ್ತಿದ್ದರು. 

ಚತುರ್ವೇದಿಯವರ ಸರಳ ಜೀವನ, ಬೆಳಗ್ಗೆ ಮತ್ತು ರಾತ್ರಿ ಕೇವಲ ಒಂದು ಬಾಳೆಹಣ್ಣು ತಿನ್ನುವ ಅವರ ಆಹಾರ ಪದ್ಧತಿ ಬಗ್ಗೆ ಮಾತನಾಡಿದ ನಂತರ ಯಾರಲ್ಲೂ ಕೇಳ ಬಾರದ, ಯಾರೂ ಉತ್ತರ ಹೇಳಲಾರದ ಆ ಪ್ರಶ್ನೆಯನ್ನೂ ಅವರಲ್ಲಿ ಕೇಳಿದ್ದೆ. 'ಸರ್​​, ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಾ?' ಇಲ್ಲ. ಅವರು ಕೋಪ ಮಾಡಿಕೊಳ್ಳಲಿಲ್ಲ. ಆದರೆ ಕಡ್ಡಿ ಮುರಿದಂತೆ ಉತ್ತರಿದ್ದರು. 'ವೇದಗಳ ಪ್ರಕಾರ ಮನುಷ್ಯನ ಅಂದಾಜು ಆಯಸ್ಸು 120 ವರ್ಷ. ನಾನೇನಾದ್ರು 120 ವರ್ಷಗಳಿಗಿಂತ ಮೊದಲು ಸತ್ತರೆ ನಾನು ವೇದಗಳು ಹೇಳುವಂತೆ, ಬದುಕಿಲ್ಲ ಎಂದು ತಿಳಿ,' ಎಂದಿದ್ದರು. ಅವರ ಮಾತಿನಲ್ಲಿ ಕಾನ್ಫಿಡೆನ್ಸ್​​ ಇದ್ದರೂ ನಾನು ಅದನ್ನು ನಂಬಲಿಲ್ಲ. ಆಗಿನ್ನು ಅವರಿಗೆ 112 ವರ್ಷ. ಇನ್ನೂ 8 ವರ್ಷ ಇವರು ಇರುತ್ತಾರಾ? ಮನುಷ್ಯರು ಅಷ್ಟು ವರ್ಷ ಬದುಕುತ್ತಾರಾ. ನನ್ನ ಮನಸ್ಸಿನಲ್ಲಿ ಲೆಕ್ಕಾಚಾರ ನಡೆಯುತ್ತಿತ್ತು. 

ಮೊನ್ನೆ ಅವರು ತೀರಿಕೊಂಡಾಗ ಅವರ ವಯಸ್ಸು 122 ದಾಟಿತ್ತು. ನಾನು ನಂಬಲೇಬೇಕಾಯ್ತು.

click me!